ADVERTISEMENT

ಕಾರವಾರ: ಎರಡೇ ದಿನದಲ್ಲಿ ಮೂರು ಸಾವಿರ ಜನರಿಂದ ಯುದ್ಧನೌಕೆ ವೀಕ್ಷಣೆ

ಸರಣಿ ರಜೆ ಹಿನ್ನೆಲೆ: ಕಾರವಾರಕ್ಕೆ ಲಗ್ಗೆ ಇಟ್ಟ ಪ್ರವಾಸಿಗರು

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2023, 14:33 IST
Last Updated 25 ಡಿಸೆಂಬರ್ 2023, 14:33 IST
ಕಾರವಾರದ ಐ.ಎನ್.ಎಸ್. ಚಪಲ್ ಯುದ್ಧನೌಕೆ ವಸ್ತು ಸಂಗ್ರಹಾಲಯ ವೀಕ್ಷಣೆಗೆ ಸರತಿಯಲ್ಲಿ ನಿಂತಿದ್ದ ಪ್ರವಾಸಿಗರು
ಕಾರವಾರದ ಐ.ಎನ್.ಎಸ್. ಚಪಲ್ ಯುದ್ಧನೌಕೆ ವಸ್ತು ಸಂಗ್ರಹಾಲಯ ವೀಕ್ಷಣೆಗೆ ಸರತಿಯಲ್ಲಿ ನಿಂತಿದ್ದ ಪ್ರವಾಸಿಗರು   

ಕಾರವಾರ: ವಾರಾಂತ್ಯ, ಕ್ರಿಸ್‍ಮಸ್ ಹಬ್ಬದ ಹಿನ್ನೆಲೆಯಲ್ಲಿ ದೊರೆತ ಸರಣಿ ರಜೆಯ ಪರಿಣಾಮ ನೂರಾರು ಪ್ರವಾಸಿಗರು ಇಲ್ಲಿನ ವಿವಿಧ ತಾಣಗಳಿಗೆ ಭೇಟಿ ನೀಡಿದ್ದಾರೆ. ಟ್ಯಾಗೋರ್ ಕಡಲತೀರದಲ್ಲಿರುವ ಐ.ಎನ್.ಎಸ್ ಚಪಲ್ ಯುದ್ಧನೌಕೆ ವಸ್ತು ಸಂಗ್ರಹಾಲಯಕ್ಕೆ ಕೇವಲ ಎರಡು ದಿನದಲ್ಲಿ ಮೂರು ಸಾವಿರ ಪ್ರವಾಸಿಗರು ಭೇಟಿ ನೀಡಿದ್ದಾರೆ.

ನಗರದಲ್ಲಿರುವ ಟ್ಯಾಗೋರ್ ಕಡಲತೀರ, ಶಿಲ್ಪವನ (ರಾಕ್ ಗಾರ್ಡನ್), ಉಪಪ್ರಾದೇಶಿಕ ವಿಜ್ಞಾನ ಕೇಂದ್ರಕ್ಕೆ ವಾರಾಂತ್ಯದ ಅವಧಿಯಲ್ಲಿ ಸಾವಿರಾರು ಪ್ರವಾಸಿಗರು ಭೇಟಿ ನೀಡಿದ್ದಾರೆ. ಹೊರ ಜಿಲ್ಲೆ, ಹೊರರಾಜ್ಯಗಳಿಂದ ಪ್ರವಾಸಿಗರು ತಂಡೋಪತಂಡವಾಗಿ ಬರುತ್ತಿದ್ದಾರೆ.

ಹೊಸ ವರ್ಷದ ಆಚರಣೆಗೆ ಗೋವಾಕ್ಕೆ ದೊಡ್ಡ ಸಂಖ್ಯೆಯಲ್ಲಿ ಪ್ರವಾಸಿಗರು ತೆರಳುತ್ತಾರೆ. ಹೀಗೆ ಸಾಗುವ ಮಾರ್ಗದಲ್ಲಿ ಕಾರವಾರದ ವಿವಿಧ ಸ್ಥಳಗಳಿಗೂ ಭೇಟಿ ನೀಡುತ್ತಿದ್ದಾರೆ. ಗೋವಾದಲ್ಲಿ ರೆಸಾರ್ಟ್, ಹೋಟೆಲ್‍ಗಳಲ್ಲಿ ಕೊಠಡಿ ಸಿಗದೆ ಇಲ್ಲಿನ ಹೋಟೆಲ್‍ಗಳಲ್ಲಿ ತಂಗುವ ಅನಿವಾರ್ಯತೆಯೂ ಪ್ರವಾಸಿಗರಿಗೆ ಎದುರಾಗುತ್ತಿದೆ. ಹೀಗಾಗಿ ರೆಸಾರ್ಟ್, ಹೋಮ್‍ಸ್ಟೆ, ವಸತಿಗೃಹಗಳ ಕೊಠಡಿಗಳು ಭರ್ತಿಯಾಗಿವೆ.

ADVERTISEMENT

‘ಭಾನುವಾರ ಒಂದೇ ದಿನ ಒಂದೂವರೆ ಸಾವಿರದಷ್ಟು ಪ್ರವಾಸಿಗರು ಯುದ್ಧನೌಕೆ ವಸ್ತುಸಂಗ್ರಹಾಲಯಕ್ಕೆ ಭೇಟಿ ನೀಡಿದ್ದಾರೆ. ಸೋಮವಾರ ಕೂಡ ಅಷ್ಟೇ ಸಂಖ್ಯೆಯ ಜನರಿದ್ದರು. ಕೋವಿಡ್ ಬಳಿಕ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡಿದ್ದು ಈ ಎರಡು ದಿನದಲ್ಲಿ’ ಎಂದು ವಸ್ತುಸಂಗ್ರಹಾಲಯದ ಪ್ರವಾಸಿ ಮಾರ್ಗದರ್ಶಿ ವಿಜಯ ನಾಯ್ಕ ಹೇಳಿದರು.

‘ಮುಂದಿನ ಒಂದು ವಾರಗಳವರೆಗೆ ಕೊಠಡಿಗಳು ಭರ್ತಿಯಾಗಿವೆ. ಹೊರ ಜಿಲ್ಲೆಗಳಿಂದ ಬರುವ ಪ್ರವಾಸಿಗರಿಂದಲೇ ಹೆಚ್ಚು ಬೇಡಿಕೆ ಇದೆ’ ಎಂದು ಹೋಟೆಲ್ ಉದ್ಯಮಿ ಮಾರುತಿ ರಾಣೆ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.