ADVERTISEMENT

ಉತ್ತರ ಕನ್ನಡ | ‘ಶತಕ’ದ ಹೊಸ್ತಿಲಿನಲ್ಲಿ ಟೊಮೆಟೊ ದರ

ಮುಂಗಾರು ಮಳೆಯ ಅಬ್ಬರದ ಹಿನ್ನೆಲೆಯಲ್ಲಿ ಏರಿಕೆಯಾದ ಬೆಲೆ

​ಪ್ರಜಾವಾಣಿ ವಾರ್ತೆ
Published 19 ಜೂನ್ 2024, 4:38 IST
Last Updated 19 ಜೂನ್ 2024, 4:38 IST
ಕಾರವಾರದ ತರಕಾರಿ ಮಾರುಕಟ್ಟೆಯಲ್ಲಿ ಮಾರಾಟಕ್ಕಿಟ್ಟಿದ್ದ ಟೊಮೊಟೊ
ಕಾರವಾರದ ತರಕಾರಿ ಮಾರುಕಟ್ಟೆಯಲ್ಲಿ ಮಾರಾಟಕ್ಕಿಟ್ಟಿದ್ದ ಟೊಮೊಟೊ   

ಕಾರವಾರ: ಕಳೆದ ಕೆಲ ದಿನಗಳಿಂದ ರಾಜ್ಯವೂ ಸೇರಿದಂತೆ ನೆರೆಯ ಮಹಾರಾಷ್ಟ್ರ ಇನ್ನಿತರ ಕಡೆಗಳಲ್ಲಿ ಮುಂಗಾರು ಮಳೆ ಅಬ್ಬರಿಸಿದ ಪರಿಣಾಮ ನಗರದ ಮಾರುಕಟ್ಟೆಯಲ್ಲಿ ಟೊಮೆಟೊ ದರ ಗಗನಮುಖಿ ಆಗಿದೆ.

ಎರಡು ವಾರಗಳ ಹಿಂದಷ್ಟೆ ಪ್ರತಿ ಕೆ.ಜಿಗೆ ಸರಾಸರಿ ₹30ರಿಂದ ₹35 ಇದ್ದ ಟೊಮೆಟೊ ದರ,  ಈಗ ಏಕಾಏಕಿ ₹80ಕ್ಕೆ ಜಿಗಿತ ಕಂಡಿದೆ. ಇನ್ನೊಂದು ವಾರದೊಳಗೆ ದರ ಶತಕ ತಲುಪಿದರೂ ಅಚ್ಚರಿ ಪಡಬೇಕಿಲ್ಲ ಎಂಬುದು ತರಕಾರಿ ವ್ಯಾಪಾರಿಗಳು ಹೇಳುತ್ತಿರುವ ಮಾತು.

ನಗರವೂ ಸೇರಿದಂತೆ ಜಿಲ್ಲೆಯ ಬಹುತೇಕ ಮಾರುಕಟ್ಟೆಗಳಿಗೆ ಬೆಳಗಾವಿ, ಮಹಾರಾಷ್ಟ್ರದ ಸೊಲ್ಲಾಪುರ ಭಾಗದಿಂದ ಟೊಮೆಟೊ, ಇನ್ನಿತರ ತರಕಾರಿಗಳು ಪೂರೈಕೆ ಆಗುತ್ತಿವೆ. ಟೊಮೆಟೊ ಬೆಳೆಯುವ ಪ್ರದೇಶಗಳಲ್ಲಿ ಸತತವಾಗಿ ಮಳೆ ಸುರಿದಿದ್ದರಿಂದ ಫಸಲು ನಷ್ಟವಾಗಿದ್ದು, ದರ ಹೆಚ್ಚಳಕ್ಕೆ ಕಾರಣವಾಗಿದೆ. ಇನ್ನೂ ಕೆಲ ದಿನಗಳವರೆಗೆ ದರ ಏರಿಕೆ ಮುಂದುವರಿಯಬಹುದು ಎನ್ನುತ್ತಾರೆ ವ್ಯಾಪಾರಿಗಳು.

ADVERTISEMENT

ಆದರೂ, ಬೇಸಿಗೆಯಲ್ಲಿ ನೀರಿನ ಕೊರತೆಯ ಕಾರಣ ದ್ವಿಶತಕ ತಲುಪಿದ್ದ ಬೀನ್ಸ್, ಇನ್ನು ಕೆಲ ತರಕಾರಿಗಳ ದರದಲ್ಲಿ ಸ್ವಲ್ಪ ಇಳಿಕೆಯಾಗಿದೆ. ಸದ್ಯ ಪ್ರತಿ ಕೆ.ಜಿ ಬೀನ್ಸ್ ದರವು ₹160 ರಷ್ಟಿದೆ. ಆದರೆ, ಹೆಚ್ಚು ಬೇಡಿಕೆ ಹೊಂದಿರುವ ಟೊಮೆಟೊ ದರ ಹೆಚ್ಚಳವಾಗಿರುವುದು ಮಾತ್ರ ಗ್ರಾಹಕರ ನಿದ್ದೆಗೆಡಿಸಿದೆ.

‘ಕೋಲಾರ ಭಾಗದಿಂದ ಮುಂಚೆ ಟೊಮೆಟೊ ಪೂರೈಕೆ ಆಗುತ್ತಿದ್ದವು. ಅಲ್ಲಿಯೂ ವಿಪರೀತ ಮಳೆ ಬಿದ್ದ ಬಳಿಕ ಫಸಲು ಕಡಿಮೆಯಾಗಿದ್ದು, ಈಗ ದಕ್ಷಿಣ ಮಹಾರಾಷ್ಟ್ರದಲ್ಲಿ ಬೆಳೆಯುವ ಟೊಮೆಟೊ ಪೂರೈಕೆ ಆಗುತ್ತಿದೆ. ಬೆಳಗಾವಿ ಮಾರುಕಟ್ಟೆಯ ಮೂಲಕ ನಗರಕ್ಕೆ ಪೂರೈಕೆ ಆಗುವ ಟೊಮೆಟೊ ದರವನ್ನು ಪೂರೈಕೆದಾರರು ಏಕಾಏಕಿ ಏರಿಸಿದ್ದಾರೆ. ಇದರಿಂದ ಸಗಟು ದರದಲ್ಲಿ ಬದಲಾವಣೆಯಾಗಿದೆ’ ಎನ್ನುತ್ತಾರೆ ತರಕಾರಿ ವ್ಯಾಪಾರಿಯೊಬ್ಬರು.

‘ಭಾನುವಾರ ನಡೆದ ಸಂತೆಯಲ್ಲೂ ಹಾವೇರಿ, ಹುಬ್ಬಳ್ಳಿ ಭಾಗದಿಂದ ತರಲಾಗಿದ್ದ ಟೊಮೆಟೊ ದರ ಕೆ.ಜಿಗೆ ₹70–80 ಇದ್ದವು. ನಗರದ ಮಾರುಕಟ್ಟೆಗೆ ಅದಕ್ಕಿಂತಲೂ ದೂರದ ಬೆಳಗಾವಿ, ಸೊಲ್ಲಾಪುರ ಮಾರುಕಟ್ಟೆಯಿಂದ ಪೂರೈಕೆ ಆಗುತ್ತಿದೆ. ಸಾಗಾಟ ವೆಚ್ಚವೂ ಸೇರಿದಂತೆ ದರದಲ್ಲಿ ವ್ಯತ್ಯಯ ಉಂಟಾಗುತ್ತಿದೆ. ಬುಧವಾರ ಹೊಸ ದಾಸ್ತಾನು ಬರಲಿದ್ದು, ದರದಲ್ಲಿ ಮತ್ತಷ್ಟು ಬದಲಾವಣೆ ಉಂಟಾಗಬಹುದು’ ಎಂದು ತರಕಾರಿ ವ್ಯಾಪಾರಿ ಸಂಗಮೇಶ್ ಕಲ್ಯಾಣಿ ಹೇಳಿದರು.

ಕಾರವಾರ ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ ಟೊಮೆಟೊ ದರ ₹80 ದಕ್ಷಿಣ ಮಹಾರಾಷ್ಟ್ರ, ಬೆಳಗಾವಿಯಿಂದ ಪೂರೈಕೆಯಾಗುವ ತರಕಾರಿ ವಿಪರೀತ ಮಳೆಯಿಂದ ಬೆಳೆ ಹಾನಿ; ದರ ಏರಿಕೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.