ಗೋಕರ್ಣ: ಇಲ್ಲಿಯ ಸಮೀಪದ ತದಡಿಯ ಮೂಡಂಗಿಯ ಬಳಿ, ಅಘನಾಶಿನಿ ನದಿಯಲ್ಲಿ ಭಾನುವಾರ ಸಂಜೆ ಪ್ರವಾಸಿಗರನ್ನು ಕರೆದುಕೊಂಡು ಬರುತ್ತಿರುವಾಗ ಆಕಸ್ಮಿಕವಾಗಿ ಬೋಟ್ ಮುಳುಗಡೆಯಾಗಿದ್ದು, ಅದರಲ್ಲಿದ್ದ 42 ಜನ ಪ್ರವಾಸಿಗರನ್ನು ರಕ್ಷಿಸಲಾಗಿದೆ.
ಓಶಿಯನ್ ಗ್ರೇಶ್ ಎಂಬ ಟೂರಿಸ್ಟ್ ಬೋಟ್ ಮುಳುಗಡೆಯಾಗಿದ್ದು, ಅದರ ಚಾಲಕ ಗಣೇಶ ಮೂಡಂಗಿ ಎಂಬವರ ಮೇಲೆ ಗೋಕರ್ಣ ಠಾಣೆಯಲ್ಲಿ ದೂರು ದಾಖಲಾಗಿದೆ. ಬೋಟಿನಲ್ಲಿ ಪ್ರಯಾಣಿಸುತ್ತಿದ್ದ ಹಾಸನದ ಹೋಳೆನರಸಿಪೂರದ ನಿವಾಸಿ ಸುಹಾಸ್ ಎಚ್. ಆರ್. ದೂರು ದಾಖಲಿಸಿದ್ದಾರೆ.
ತಾನು ಹಾಗೂ ತನ್ನ 10 ಜನ ಸ್ನೇಹಿತರು ಸೇರಿದಂತೆ ಒಟ್ಟೂ 42 ಜನ ಬೋಟಿನಲ್ಲಿದ್ದರು. ವಾಪಸ್ ಬರುವಾಗ ಅಘನಾಶಿನಿ ನದಿ ದಂಡೆಯ 300 ಮೀಟರ್ ದೂರದಲ್ಲಿ ಬೋಟ್ ಮುಳುಗಡೆಯಾಯಿತು. ಚಾಲಕನ ದುಡುಕಿನ ಮತ್ತು ನಿರ್ಲಕ್ಷ್ಯತನದ ಚಾಲನೆಯಿಂದ ಈ ಅಪಘಾತ ಸಂಭವಿಸಿದೆ ಎಂದು ದೂರಿನಲ್ಲಿ ಅವರು ತಿಳಿಸಿದ್ದಾರೆ.
ಬೋಟ್‌ನಲ್ಲಿ ಅಗತ್ಯಕ್ಕಿಂತ ಹೆಚ್ಚು ಜನರನ್ನು ತುಂಬಿದ್ದೇ ಅವಘಡಕ್ಕೆ ಕಾರಣ ಎನ್ನಲಾಗಿದೆ. ಎಲ್ಲರೂ ಲೈಫ್ ಜಾಕೆಟ್ ಧರಿಸಿದ ಕಾರಣ ಯಾವುದೇ ಪ್ರಾಣಾಪಾಯವಾಗಿಲ್ಲ. ದುರಂತ ಸಂಭವಿಸುವುದು ತಪ್ಪಿದೆ. ಕೂಡಲೇ ಸ್ಥಳದಲ್ಲಿದ್ದ ಸ್ಥಳೀಯರು ಇತರೆ ಪ್ರವಾಸಿ ಬೋಟಿನ ಸಹಾಯದಿಂದ ಎಲ್ಲರನ್ನೂ ರಕ್ಷಿಸಿ ದಡಕ್ಕೆ ತರಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಕರಾವಳಿ ಕಾವಲುಪಡೆಯ ಸಿ.ಎಸ್.ಪಿ. ಹಾಗೂ ಗೋಕರ್ಣ ಠಾಣಾ ಪೊಲೀಸ್ ನಿರೀಕ್ಷಕ ಯೋಗೀಶ್ ಕೆ.ಎಂ. ಮತ್ತು ಉಳಿದ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ತೆರಳಿ ಪರಿಶೀಲಿಸಿದರು.
ಪ್ರವಾಸಿ ಬೋಟಿಗೆ ಪ್ರವಾಸೋದ್ಯಮದ ಅನುಮತಿಯಿಲ್ಲ. ಅನಧಿಕೃತವಾಗಿ ಪ್ರವಾಸಿಗರನ್ನು ಕರೆದುಕೊಂಡು ಹೋಗುತ್ತಿದ್ದರು ಎಂದು ಸ್ಥಳೀಯ ಕೆಲವರು ದೂರಿದ್ದಾರೆ. ಇವರಿಂದ ಉಳಿದ ಬೋಟಿನವರಿಗೂ ಕೆಟ್ಟ ಹೆಸರು ಬರುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.