ಮುಂಡಗೋಡ (ಉತ್ತರ ಕನ್ನಡ): ತಾಲ್ಲೂಕಿನ ಟಿಬೆಟನ್ ಕ್ಯಾಂಪ್‌ಗೆ ಆಗಮಿಸಿದ ಏಳು ವರ್ಷದ ಲ್ಹಾಗ್ಯಲಾ ರಿನಪೋಚೆ ಬಿಕ್ಕುವನ್ನು, ಟಿಬೆಟನ್ ಸಂಪ್ರದಾಯದಂತೆ ಮಂಗಳವಾರ ಸಂಜೆ ಸ್ವಾಗತಿಸಲಾಯಿತು.
ಕ್ಯಾಂಪ್ ನಂ.3ರ ಬೌದ್ಧ ಮಂದಿರದಲ್ಲಿ ಬಿಕ್ಕುವಿಗೆ ವಿಶೇಷ ಪೂಜೆ ಸಲ್ಲಿಸಿದರು. ಧರ್ಮಶಾಲಾದಿಂದ ಆಗಮಿಸಿದ ಕಿರಿಯ ಬಿಕ್ಕುವಿಗೆ
ಸ್ವಾಗತ ಕೋರಲು ಅರುಣಾಚಲ ಪ್ರದೇಶ, ಲಡಾಖ್, ಭೂತಾನ್ ಭಾಗಗಳಿಂದ ಟಿಬೆಟನ್‌ರು ಆಗಮಿಸಿದ್ದರು. ಬೌದ್ಧ ಮಂದಿರದ ಪೀಠದಲ್ಲಿ ಕಿರಿಯ ಬಿಕ್ಕು ಆಸೀನಗೊಂಡರು. ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದ ಟಿಬೆಟನ್‌ರು, ಬಿಳಿ ರುಮಾಲು, ಧೂಪದಬತ್ತಿ ಹಿಡಿದು ಕಿರಿಯ ಬಿಕ್ಕುವಿಗೆ ನಮಿಸಿದರು. ಕಿರಿಯ ಬಿಕ್ಕು ವಾಹನದಲ್ಲಿಯೇ ಕುಳಿತು ನೆರೆದವರತ್ತ ಕೈಬೀಸಿದರು.
‘ಲಡಾಖ್ನಲ್ಲಿ ಜನಿಸಿರುವ ಲ್ಹಾಗ್ಯಾಲಾ ಧರ್ಮಶಾಲಾದಲ್ಲಿ ವಾಸಿಸುತ್ತಿದ್ದು, ಬೌದ್ಧ ಧರ್ಮದ ಕುರಿತು ದಲೈಲಾಮಾ ಅವರಿಂದ ಮಾರ್ಗದರ್ಶನ ಪಡೆಯುತ್ತಿದ್ದಾರೆ. ಅವರಿಗೆ ಉನ್ನತ ಸ್ಥಾನಮಾನ ನೀಡುವ ಸಾಧ್ಯತೆಯಿದೆ. ಲಡಾಖ್, ಅರುಣಾಚಲ ಪ್ರದೇಶ ಸೇರಿದಂತೆ ಹಿಮಾಲಯ ಪ್ರದೇಶ ವ್ಯಾಪ್ತಿಯಲ್ಲಿ ಬಿಕ್ಕುವಿನ ಪ್ರಭಾವ ಬಹಳಷ್ಟಿದೆ’ ಎಂದು ಅರುಣಾಚಲ ಪ್ರದೇಶದ ಗೊಂಬು ಥಿನ್ಲೆ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.