ADVERTISEMENT

ಕಾರವಾರ: ಮತ್ಸ್ಯ ಬೇಟೆಗಿಳಿದ ಟ್ರಾಲರ್ ಬೋಟು

60 ದಿನಗಳ ಬಳಿಕ ಗರಿಗೆದರಿದ ಚಟುವಟಿಕೆ: ಮೊದಲ ದಿನ ಸಮಾಧಾನಕರ ಫಸಲು

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2023, 13:42 IST
Last Updated 1 ಆಗಸ್ಟ್ 2023, 13:42 IST
ಯಾಂತ್ರೀಕೃತ ಮೀನುಗಾರಿಕೆ ಆರಂಭಗೊಂಡ ಹಿನ್ನೆಲೆಯಲ್ಲಿ ಮೀನು ಬೇಟೆಯಾಡಿ ಬಂದರಿಗೆ ಮರಳಿದ ಎಂಜಿನ್ ಬೋಟ್‍ನಿಂದ ಮೀನು ಇಳಿಸಿಕೊಳ್ಳುವ ಪ್ರಕ್ರಿಯೆ ನಡೆಯಿತು.
ಪ್ರಜಾವಾಣಿ ಚಿತ್ರ/ದಿಲೀಪ್ ರೇವಣಕರ್
ಯಾಂತ್ರೀಕೃತ ಮೀನುಗಾರಿಕೆ ಆರಂಭಗೊಂಡ ಹಿನ್ನೆಲೆಯಲ್ಲಿ ಮೀನು ಬೇಟೆಯಾಡಿ ಬಂದರಿಗೆ ಮರಳಿದ ಎಂಜಿನ್ ಬೋಟ್‍ನಿಂದ ಮೀನು ಇಳಿಸಿಕೊಳ್ಳುವ ಪ್ರಕ್ರಿಯೆ ನಡೆಯಿತು. ಪ್ರಜಾವಾಣಿ ಚಿತ್ರ/ದಿಲೀಪ್ ರೇವಣಕರ್   

ಕಾರವಾರ: ಬರೋಬ್ಬರಿ 60 ದಿನಗಳ ಬಳಿಕ ಮಂಗಳವಾರ ಟ್ರಾಲರ್ ಬೋಟುಗಳು ಮೀನು ಬೇಟೆಯಾಡಲು ಸಮುದ್ರಕ್ಕೆ ಇಳಿದವು. ಮೊದಲ ದಿನ ಮೀನುಗಾರರು ಖುಷಿಪಡುವಷ್ಟು ಮೀನುಗಳು ಲಭಿಸದಿದ್ದರೂ, ಇಡೀ ದಿನದ ಶ್ರಮವೂ ವ್ಯರ್ಥ ಎಂದು ಮರುಗುವಷ್ಟು ನಿರಾಸೆಯೂ ಆಗಲಿಲ್ಲ.

ಎರಡೂ ಬದಿಯಿಂದಲೂ ಗುಡ್ಡಗಳಿಂದ ಆವೃತವಾಗಿರುವ ಇಲ್ಲಿನ ಮೀನುಗಾರಿಕೆ ಬಂದರು ರಾಜ್ಯದ ಅಪರೂಪದ ನೈಸರ್ಗಿಕ ಬಂದರು ಪ್ರಸಿದ್ಧಿ ಪಡೆದಿದೆ. ಹೀಗಾಗಿಯೇ ಮಳೆ, ಗಾಳಿ ಅಬ್ಬರ ಇದ್ದರೂ ಆಗಸ್ಟ್ 1ರಂದೇ ಯಾಂತ್ರೀಕೃತ ಮೀನುಗಾರಿಕೆ ಇಲ್ಲಿ ಆರಂಭಗೊಳ್ಳುತ್ತಿದೆ. ಮೊದಲ ದಿನ ಇಲ್ಲಿಂದ ಸುಮಾರು 75ಕ್ಕೂ ಅಧಿಕ ಟ್ರಾಲರ್ ಬೋಟ್‍ಗಳು ಮೀನುಬೇಟೆಗೆ ತೆರಳಿದವು.

ಎರಡು ತಿಂಗಳುಗಳಿಂದ ಮೀನುಗಾರಿಕೆಯ ಭರಾಟೆ, ಮೀನು ಸಾಗಣೆ ವಾಹನಗಳ ಓಡಾಟ, ಕಾರ್ಮಿಕರ ಕಾಲ್ನಡಿಗೆಯ ಸಪ್ಪಳ ಇಲ್ಲದೆ ಮೌನಕ್ಕೆ ಜಾರಿದ್ದ ಬಂದರು ಪ್ರದೇಶದಲ್ಲಿ ಮಂಗಳವಾರದಿಂದಲೇ ಗೌಜು ಗದ್ದಲಗಳು ಶುರುವಾದವು.

ADVERTISEMENT

ಹತ್ತಾರು ಸಂಖ್ಯೆಯ ಕಾರ್ಮಿಕರು ದೋಣಿಗಳನ್ನು ಏರಿ ಮೀನುಗಾರಿಕೆಗೆ ತೆರಳಿದರೆ, ನೂರಾರು ಕಾರ್ಮಿಕರು ದಡದಲ್ಲಿ ಬುಟ್ಟಿಗಳನ್ನು ಹಿಡಿದು ಮೀನು ಇಳಿಸಲು ಕಾದು ನಿಂತಿದ್ದರು. ಸಂಜೆಯ ವೇಳೆಗೆ ಬೋಟುಗಳು ದಡದತ್ತ ಧಾವಿಸುತ್ತಿದ್ದಂತೆ ಮೀನು ಇಳಿಸಿ ವಾಹನಗಳಿಗೆ ತುಂಬಲು ಪೈಪೋಟಿ ನಡೆದಿತ್ತು.

ಮಹಿಳಾ ಕಾರ್ಮಿಕರು, ಮೀನು ಖರೀದಿಗೆ ಮುಗಿಬಿದ್ದ ಮಹಿಳಾ ವ್ಯಾಪಾರಿಗಳು ಬಂದರಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಂಡರು. ಮೊದಲ ದಿನ ಓತ್ಲೆ (ಪಚಕಿ) ಮೀನು, ಸಿಗಡಿ, ತಾರ್ಲೆ, ಇನ್ನಿತರ ಸಣ್ಣಪುಟ್ಟ ಮೀನುಗಳು ಮಾತ್ರ ಲಭಿಸಿದ್ದವು. ಸ್ಥಳೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ಸಲುವಾಗಿ ಮಹಿಳಾ ವ್ಯಾಪಾರಿಗಳು ಮೀನು ಖರೀದಿಸಲು ಪೈಪೋಟಿಗೆ ಬಿದ್ದಿದ್ದರು. ಸಿಗಡಿ ಮೀನುಗಳನ್ನು ಕಂಟೇನರ್ ಇದ್ದ ವಾಹನದಲ್ಲಿ ತುಂಬಿ ಕೇರಳಕ್ಕೆ ಕಳುಹಿಸಲಾಯಿತು.

‘ಮೊದಲ ದಿನ ತೀರಾ ಆಳದ ಪ್ರದೇಶಕ್ಕೆ ಮೀನುಗಾರಿಕೆಗೆ ಬೋಟುಗಳು ತೆರಳಲು ಸಾಧ್ಯವಾಗಿಲ್ಲ. 20ರಿಂದ 25 ನಾಟಿಕಲ್ ಮೈಲು ದೂರದವರೆಗೆ ಮಾತ್ರ ಬೋಟುಗಳು ಸಾಗಿದ್ದವು. ನಿರೀಕ್ಷೆಯಷ್ಟು ಮೀನು ಲಭಿಸಿಲ್ಲ. ಪರ್ಸಿನ್ ಬೋಟುಗಳು ಆಗಸ್ಟ್ 7ರ ಬಳಿಕ ಮೀನುಗಾರಿಕೆಗೆ ತೆರಳಲಿವೆ’ ಎಂದು ಟ್ರಾಲರ್ ಬೋಟ್ ಮಾಲೀಕ ಸಚಿನ್ ಹರಿಕಂತ್ರ ‘ಪ್ರಜಾವಾಣಿ’ಗೆ ತಿಳಿಸಿದರು.

ಟ್ರಾಲರ್ ಬೋಟ್ ಬೇಟೆಯಾಡಿ ತಂದ ಮೀನನ್ನು ತೂಕ ಮಾಡುವಲ್ಲಿ ಕಾರ್ಮಿಕರು ನಿರತರಾಗಿದ್ದರು. ಪ್ರಜಾವಾಣಿ ಚಿತ್ರ/ದಿಲೀಪ್ ರೇವಣಕರ್
ಯಾಂತ್ರೀಕೃತ ಮೀನುಗಾರಿಕೆ ಆರಂಭಗೊಂಡ ಮೊದಲ ದಿನ ದೋಣಿಯೊಂದಕ್ಕೆ ಲಭಿಸಿದ ಓತ್ಲೆ (ಪಚಕಿ) ಮೀನುಗಳು.
ಟ್ರಾಲರ್ ಬೋಟುಗಳು ಬೇಟೆಯಾಡಿ ತಂದ ಮೀನು ಖರೀದಿಗೆ ಕಾರವಾರದ ಬೈತಕೋಲದಲ್ಲಿರುವ ಮೀನುಗಾರಿಕಾ ಬಂದರಿನಲ್ಲಿ ಕಾದು ಕುಳಿತಿದ್ದ ಮಹಿಳಾ ಮೀನು ವ್ಯಾಪಾರಿಗಳು. ಪ್ರಜಾವಾಣಿ ಚಿತ್ರ/ದಿಲೀಪ್ ರೇವಣಕರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.