ADVERTISEMENT

ಮೈಸೂರಿನಿಂದ ದಾಂಡೇಲಿಗೆ ಜಿಂಕೆ, ಕಡವೆ!

2016ರಲ್ಲಿ ರದ್ದು ಮಾಡಲಾಗಿದ್ದ ಪ್ರಸ್ತಾವಕ್ಕೆ ಈಗ ಪುನಃ ಮನ್ನಣೆ

ಸದಾಶಿವ ಎಂ.ಎಸ್‌.
Published 16 ನವೆಂಬರ್ 2022, 3:45 IST
Last Updated 16 ನವೆಂಬರ್ 2022, 3:45 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕಾರವಾರ: ಮೈಸೂರಿನ ಮೃಗಾಲಯದಲ್ಲಿ ಹೆಚ್ಚುವರಿಯಾಗಿರುವ 30 ಕಡವೆ ಗಳು ಮತ್ತು 40 ಜಿಂಕೆಗಳು ಇನ್ನೊಂದು ತಿಂಗಳ ಒಳಗಾಗಿ ಉತ್ತರ ಕನ್ನಡದ ಕಾಳಿ ಹುಲಿ ಸಂರಕ್ಷಿತ ಪ್ರದೇಶಕ್ಕೆ (ಕೆ.ಟಿ.ಆರ್) ಸ್ಥಳಾಂತರವಾಗಲಿವೆ. ಇದಕ್ಕೆ ಬೇಕಾದ ಸಿದ್ಧತೆಗಳನ್ನು ಮೃಗಾಲಯದಲ್ಲಿ ಆರಂಭಿಸಲಾಗಿದೆ.

ಕೇಂದ್ರೀಯ ಮೃಗಾಲಯ ಪ್ರಾಧಿಕಾರದ (ಸಿ.ಝೆಡ್.ಎ) ನಿಯಮದ ಪ್ರಕಾರ, ಮೃಗಾಲಯದಲ್ಲಿ 30ರಿಂದ 40 ಜಿಂಕೆಗಳನ್ನು ಸಲಹಬಹುದು. ಆದರೆ, ಮೈಸೂರಿನಲ್ಲಿ ಅವುಗಳ ಸಂಖ್ಯೆ ಹೆಚ್ಚಿದೆ. ಆದ್ದರಿಂದ ಸ್ಥಳಾಂತರಿಸಲು ಮೃಗಾಲಯ ಪ್ರಾಧಿಕಾರ ನಿರ್ಧರಿಸಿದೆ.

‘ಪ್ರಜಾವಾಣಿ’ ಜೊತೆ ಮಾತನಾಡಿದ ಮೈಸೂರು ಮೃಗಾಲಯದ ಕಾರ್ಯಪಾಲಕ ನಿರ್ದೇಶಕ ಅಜಿತ್ ಕುಲ ಕರ್ಣಿ, ‘ಕೆ.ಟಿ.ಆರ್ ವ್ಯಾಪ್ತಿಯಲ್ಲಿ ಹುಲಿ ಮತ್ತು ಚಿರತೆಗಳ ಸಂಖ್ಯೆ ಉತ್ತಮವಾಗಿದೆ. ಅವುಗಳ ಆಹಾರವಾಗಿರುವ ಜಿಂಕೆ ಸಂಖ್ಯೆ ಹೆಚ್ಚಳವಾದರೆ ಅನುಕೂಲವಾಗುತ್ತದೆ ಎಂದು ದಾಂಡೇಲಿ ಆಯ್ಕೆ ಮಾಡಿಕೊಳ್ಳಲಾಗಿದೆ’ ಎಂದರು.

ADVERTISEMENT

‘ಎರಡು ವರ್ಷಗಳ ಹಿಂದೆ ಮೃಗಾಲಯದಿಂದ ಮೈಸೂರು ಜಿಲ್ಲೆಯ ಅರಭಿತಿಟ್ಟು ವನ್ಯಜೀವಿ ಸಂರಕ್ಷಣಾ ಪ್ರದೇಶಕ್ಕೆ 52 ಜಿಂಕೆಗಳನ್ನು ಯಶಸ್ವಿಯಾಗಿ ಸ್ಥಳಾಂತರಿಸಿದ್ದೇವೆ. ಅದರ ಅನುಭವದ ಹಿನ್ನೆಲೆಯಲ್ಲಿ ದಾಂಡೇಲಿಗೂ ರವಾನಿಸಲಾಗುತ್ತಿದೆ’ ಎಂದರು.

ವಿಶೇಷವಾದ ಪೆಟ್ಟಿಗೆ:

ಮೈಸೂರಿನಿಂದ ದಾಂಡೇಲಿಗೆ ಸುಮಾರು 550 ಕಿಲೋಮೀಟರ್ ದೂರವಿದೆ. ಜಿಂಕೆಗಳು ಮತ್ತು ಕಡವೆಗಳನ್ನು ಸಾಗಿಸಲು ವಿಶೇಷ ವಾದ ಬೃಹತ್ ಪೆಟ್ಟಿಗೆಗಳನ್ನು (ಕ್ರೇಟ್) ಸಿದ್ಧಪಡಿಸಲಾಗಿದೆ. ಅವುಗಳ ತಳಭಾಗಕ್ಕೆ ಮಣ್ಣು, ಹುಲ್ಲು ಹಾಸಿ ನೆಲದಂಥ ವಾತಾವರಣವನ್ನೇ ಕಟ್ಟಿಕೊಡಲಾಗಿದೆ.

‘ಪೆಟ್ಟಿಗೆಗಳಲ್ಲಿ ಹುಲ್ಲು ತುಂಬಿಟ್ಟು, ದಿನ ಜಿಂಕೆಗಳು ನಿರಾತಂಕವಾಗಿ ಅದರೊಳಗೆ ಬಂದು ಹೋಗುವಂತೆ ನೋಡಿಕೊಳ್ಳಲಾಗುತ್ತದೆ. ಅವುಗಳಿಗೆ ಅದು ರೂಢಿಯಾದ ಬಳಿಕವೇ ಸ್ಥಳಾಂತರಿಸಲಾಗುತ್ತದೆ’ ಎಂದು ವಿವರಿಸಿದರು.

ಕಾಳಿ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕ ಮರಿಯಾ ಕ್ರಿಸ್ತರಾಜು ಪ್ರತಿಕ್ರಿಯಿಸಿ, ‘ಕೆ.ಟಿ.ಆರ್.ನಲ್ಲಿ ಹುಲಿ, ಚಿರತೆಗಳ ಸಂಖ್ಯೆ ಹೆಚ್ಚಾಗಿದೆ. ಸುತ್ತಮುತ್ತ ಸಾಕು ಪ್ರಾಣಿಗಳು, ಜಾನುವಾರುಗಳ ಮೇಲೆ ದಾಳಿಯ ಪ್ರಕರಣಗಳು ಹೆಚ್ಚುತ್ತಿವೆ. ಜಿಂಕೆ ಮತ್ತು ಕಡವೆಗಳಿಗೆ ಅಗತ್ಯವಾದ ಹುಲ್ಲು ಕೆ.ಟಿ.ಆರ್.ನಲ್ಲಿ ಯಥೇಚ್ಛವಾಗಿದೆ. ಆದ್ದರಿಂದ ಅವುಗಳಿಗೆ ಇಲ್ಲಿ ಸಮಸ್ಯೆಯಾಗದು. ಡಿಸೆಂಬರ್ ಅಂತ್ಯದೊಳಗೆ ಮೈಸೂರಿ ನಿಂದ ತರಬಹುದು’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಹೊಂದಿಕೊಳ್ಳುವುದು ಕಷ್ಟ’:

ಕೆ.ಟಿ.ಆರ್.ಗೆ ಹೊರಗಿನಿಂದ ಜಿಂಕೆಗಳು ಮತ್ತು ಕಡವೆಗಳನ್ನು ತಂದು ಬಿಡುವ ಬಗ್ಗೆ 2016ರಲ್ಲೂ ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗಕ್ಕೆ ಪ್ರಸ್ತಾವ ಸಲ್ಲಿಕೆಯಾಗಿತ್ತು. ಅದಕ್ಕೆ ಆ ವರ್ಷ ಅ.6ರಂದು ರಾಷ್ಟ್ರೀಯ ಹುಲಿ ಸಂರಕ್ಷಣೆ ಪ್ರಾಧಿಕಾರವು (ಎನ್.ಟಿ.ಸಿ.ಎ) ಅನುಮತಿಯನ್ನೂ ನೀಡಿತ್ತು.

ಆದರೆ, ಈ ರೀತಿ ಸ್ಥಳಾಂತರ ಮಾಡುವುದರಿಂದ ದಟ್ಟವಾದ ಕಾಡಿನ ವಾತಾವರಣಕ್ಕೆ ಅವು ಹೊಂದಿಕೊಳ್ಳುವುದು ಕಷ್ಟ ಎಂದು ಕೆ.ಟಿ.ಆರ್.ನ ಅಂದಿನ ನಿರ್ದೇಶಕರು ಅಭಿಪ್ರಾಯ ಪಟ್ಟಿದ್ದರು. 2016ರ ನ.11ರಂದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗೆ ಪತ್ರ ಬರೆದಿದ್ದರು. ಬಳಿಕ ಪ್ರಸ್ತಾವವನ್ನು ತಿರಸ್ಕರಿಸಿ ಸ್ಥಳಾಂತರವನ್ನು ರದ್ದು ಮಾಡಲಾಗಿತ್ತು.

----

* ಜಿಂಕೆ, ಕಡವೆಗಳನ್ನು ತಂಡಗಳಲ್ಲಿ ದಾಂಡೇಲಿಗೆ ತಂದು 45 ದಿನ ಪೆಟ್ಟಿಗೆಯಲ್ಲೇ ಉಳಿಸಿಕೊಳ್ಳಲಾಗುತ್ತದೆ. ಅಲ್ಲಿನ ವಾತಾವರಣಕ್ಕೆ ಹೊಂದಿಕೊಂಡ ನಂತರ ಬಿಡಲಾಗುತ್ತದೆ.
– ಅಜಿತ್ ಕುಲಕರ್ಣಿ, ಕಾರ್ಯ ನಿರ್ವಾಹಕ ನಿರ್ದೇಶಕ, ಮೈಸೂರು ಮೃಗಾಲಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.