ADVERTISEMENT

ಕಾರವಾರ | 4 ತಿಂಗಳಲ್ಲಿ 28 ಸಾವಿರ ಜನರ ಸೆಳೆದ ‘ಟುಪಲೇವ್’

ಪ್ರವಾಸೋದ್ಯಮ ಕ್ಷೇತ್ರಕ್ಕೆ ವರವಾದ ಯುದ್ಧ ವಿಮಾನ ವಸ್ತು ಸಂಗ್ರಹಾಲಯ

ಗಣಪತಿ ಹೆಗಡೆ
Published 26 ಅಕ್ಟೋಬರ್ 2024, 6:18 IST
Last Updated 26 ಅಕ್ಟೋಬರ್ 2024, 6:18 IST
ಕಾರವಾರದ ಟ್ಯಾಗೋರ್ ಕಡಲತೀರದಲ್ಲಿರುವ ಟುಪಲೇವ್ (143–ಎಂ) ಯುದ್ಧವಿಮಾನ ವಸ್ತು ಸಂಗ್ರಹಾಲಯ
ಕಾರವಾರದ ಟ್ಯಾಗೋರ್ ಕಡಲತೀರದಲ್ಲಿರುವ ಟುಪಲೇವ್ (143–ಎಂ) ಯುದ್ಧವಿಮಾನ ವಸ್ತು ಸಂಗ್ರಹಾಲಯ   

ಕಾರವಾರ: ಇಲ್ಲಿನ ಟ್ಯಾಗೋರ್ ಕಡಲತೀರದಲ್ಲಿ ‘ಟುಪಲೇವ್ (143–ಎಂ)’ ಯುದ್ಧವಿಮಾನ ವಸ್ತು ಸಂಗ್ರಹಾಲಯ ಸಾರ್ವಜನಿಕ ವೀಕ್ಷಣೆಗೆ ತೆರೆದ ನಾಲ್ಕು ತಿಂಗಳ ಅವಧಿಯಲ್ಲೇ 28 ಸಾವಿರದಷ್ಟು ವೀಕ್ಷಕರನ್ನು ಸೆಳೆದಿದೆ.

ರಾಷ್ಟ್ರೀಯ ಹೆದ್ದಾರಿ–66ರ ಸರ್ವೀಸ್ ರಸ್ತೆಯ ಪಕ್ಕದಲ್ಲಿರುವ ಐಎನ್ಎಸ್ ಚಪಲ್ ಯುದ್ಧನೌಕೆ ವಸ್ತು ಸಂಗ್ರಹಾಲಯ ಉದ್ಯಾನದಲ್ಲಿಯೇ ಯುದ್ಧವಿಮಾನ ವಸ್ತು ಸಂಗ್ರಹಾಲಯ ಇರಿಸಲಾಗಿದೆ. ಹೆದ್ದಾರಿಯ ಮೇಲ್ಸೇತುವೆಯು ಸಮೀಪದಲ್ಲಿದ್ದು, ಅಲ್ಲಿಂದ ಹಾದುಹೋಗುವ ಪ್ರವಾಸಿಗರಿಗೆ ಹಚ್ಚ ಹಸಿರಿನ ಉದ್ಯಾನದಲ್ಲಿ ನೆಲೆನಿಂತ ಯುದ್ಧವಿಮಾನ ಸೆಳೆಯುತ್ತಿದೆ.

53.6 ಮೀ. ಉದ್ದ ಮತ್ತು 35 ಮೀ.ನಷ್ಟು ಅಗಲವಿರುವ ಯುದ್ಧ ವಿಮಾನ ಸಂಗ್ರಹಾಲಯಕ್ಕೆ ಭೇಟಿ ನೀಡುತ್ತಿರುವವರಲ್ಲಿ ಹೊರ ರಾಜ್ಯ, ದೂರದ ಮಹಾನಗರಗಳಿಂದ ಬಂದ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

ADVERTISEMENT

ಜೂನ್ 29 ರಂದು ಸಾರ್ವಜನಿಕ ವೀಕ್ಷಣೆಗೆ ತೆರೆದುಕೊಂಡಿದ್ದ ಯುದ್ಧವಿಮಾನವನ್ನು ಅಂದಿನಿಂದ ಈವರೆಗೆ (ಅ.25) ಅಂದಾಜು 28 ಸಾವಿರ ಪ್ರವಾಸಿಗರು ವೀಕ್ಷಿಸಿರಬಹುದು ಎಂದು ಪ್ರವಾಸೋದ್ಯಮ ಇಲಾಖೆ ಅಂದಾಜಿಸಿದೆ. ನೌಕಾದಳ ಯುದ್ಧವಿಮಾನ ಪೂರೈಸಿದ್ದರಿಂದ ಒಡಂಬಡಿಕೆ ಪ್ರಕಾರ ಅಲ್ಲಿನ ಸಿಬ್ಬಂದಿಗೆ ಮಾತ್ರ ಉಚಿತ ಪ್ರವೇಶಾವಕಾಶ ನೀಡಲಾಗುತ್ತಿದೆ. ಕುಟುಂಬ ಸಮೇತರಾಗಿ ನೌಕಾದಳ, ರಕ್ಷಣಾ ಇಲಾಖೆಯ ಸಾವಿರಾರು ಜನರು ಅಲ್ಪ ಅವಧಿಯಲ್ಲೇ ವಸ್ತು ಸಂಗ್ರಹಾಲಯಕ್ಕೆ ಭೇಟಿ ನೀಡಿದ್ದಾರೆ.

‘ಟುಪಲೇವ್ ಯುದ್ಧವಿಮಾನವು ಕಡಲತೀರದ ಉದ್ಯಾನದಲ್ಲಿ ಅಳವಡಿಕೆಯಾದ ಬಳಿಕ ಪ್ರವಾಸಿಗರನ್ನು ಸೆಳೆಯಲು ಮತ್ತಷ್ಟು ಬಲ ಸಿಕ್ಕಂತಾಗಿದೆ. ರಾಜ್ಯದಲ್ಲಿ ಉಳಿದೆಡೆ ಎಲ್ಲೂ ಇಲ್ಲದ ಯುದ್ಧ ವಿಮಾನ ವಸ್ತುಸಂಗ್ರಹಾಲಯ ಇದಾಗಿದೆ. ಹೀಗಾಗಿ ಜನರು ಕುತೂಹಲದಿಂದ ವೀಕ್ಷಣೆಗೆ ಬರುತ್ತಿದ್ದಾರೆ’ ಎನ್ನುತ್ತಾರೆ ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಎಚ್.ವಿ.ಜಯಂತ್.

‘ಜೂ.30 ರಿಂದ ಅ.25ರ ವರೆಗಿನ ಅವಧಿಯಲ್ಲಿ ವಸ್ತು ಸಂಗ್ರಹಾಲಯ ವೀಕ್ಷಣೆಯ 26,110 ಟಿಕೆಟ್‍ಗಳು ಮಾರಾಟ ಕಂಡಿವೆ. ₹4.10 ಲಕ್ಷದಷ್ಟು ಆದಾಯ ಟಿಕೆಟ್ ಮಾರಾಟದಿಂದ ಸಂಗ್ರಹವಾಗಿದೆ. ಸೆಪ್ಟೆಂಬರ್ ತಿಂಗಳೊಂದರಲ್ಲೇ 8 ಸಾವಿರದಷ್ಟು ಜನರು ಭೇಟಿ ನೀಡಿದ್ದಾರೆ. ಸ್ಥಳೀಯ ಪ್ರವಾಸಿಗರಿಷ್ಟೆ ಅಲ್ಲದೇ ನೆರೆಯ ಮಹಾರಾಷ್ಟ್ರ, ಗೋವಾ, ಕೇರಳ ಭಾಗದಿಂದಲೂ ಸಾಕಷ್ಟು ಜನರು ಭೇಟಿ ನೀಡುತ್ತಿದ್ದಾರೆ’ ಎಂದರು.

ಜೂನ್ 29 ರಂದು ಉದ್ಘಾಟನೆಯಾಗಿದ್ದ ವಸ್ತು ಸಂಗ್ರಹಾಲಯ ₹4.10 ಲಕ್ಷದಷ್ಟು ಆದಾಯ ಸಂಗ್ರಹ ಹೆದ್ದಾರಿಯ ಮೇಲ್ಸೇತುವೆಯಿಂದ ಆಕರ್ಷಣೆ

ಯುದ್ಧವಿಮಾನ ವಸ್ತುಸಂಗ್ರಹಾಲಯದ ಒಳಭಾಗದಲ್ಲಿ ತಂಪನೆಯ ವಾತಾವರಣ ಇರುವಂತೆ ಕೇಂದ್ರಿತ ಹವಾನಿಯಂತ್ರಕ ವ್ಯವಸ್ಥೆ ಕಲ್ಪಿಸಲಾಗಿದೆ. ಉದ್ಯಾನವನ್ನು ಮತ್ತಷ್ಟು ಸೌಕರ್ಯದೊಂದಿಗೆ ಅಭಿವೃದ್ಧಿಪಡಿಸಲಿದ್ದೇವೆ
ಎಚ್.ವಿ.ಜಯಂತ್ ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.