ADVERTISEMENT

ನಡುಗಡ್ಡೆಗೆ ಕೊನೆಗೂ ಸೇತುವೆ ಮಂಜೂರು: ಕಾಮಗಾರಿಗೆ ಶಾಸಕಿ ರೂಪಾಲಿ ಭೂಮಿ ಪೂಜೆ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2021, 14:17 IST
Last Updated 7 ಮಾರ್ಚ್ 2021, 14:17 IST
ಕಾರವಾರ ತಾಲ್ಲೂಕಿನ ಉಮ್ಮಳೆಜೂಗ ನಡುಗಡ್ಡೆಗೆ ಸೇತುವೆ ನಿರ್ಮಾಣದ ನಾಮಫಲಕವನ್ನು ಶಾಸಕಿ ರೂಪಾಲಿ ನಾಯ್ಕ ಭಾನುವಾರ ಅನಾವರಣಗೊಳಿಸಿದರು
ಕಾರವಾರ ತಾಲ್ಲೂಕಿನ ಉಮ್ಮಳೆಜೂಗ ನಡುಗಡ್ಡೆಗೆ ಸೇತುವೆ ನಿರ್ಮಾಣದ ನಾಮಫಲಕವನ್ನು ಶಾಸಕಿ ರೂಪಾಲಿ ನಾಯ್ಕ ಭಾನುವಾರ ಅನಾವರಣಗೊಳಿಸಿದರು   

ಕಾರವಾರ: ತಾಲ್ಲೂಕಿನ ವೈಲವಾಡ ಗ್ರಾಮದ ಉಮ್ಮಳೆಜೂಗ ದ್ವೀಪದ ಜನರ ದಶಕಗಳ ಕನಸು ನನಸಾಗುವ ಹಂತಕ್ಕೆ ತಲುಪಿದೆ. ಕಾಳಿ ನದಿಗೆ ಸೇತುವೆ ನಿರ್ಮಾಣದ ಬೇಡಿಕೆಗೆ ರಾಜ್ಯ ಸರ್ಕಾರ ಮನ್ನಣೆ ನೀಡಿದೆ. ₹ 10 ಕೋಟಿ ವೆಚ್ಚದ ಕಾಮಗಾರಿಗೆ ಶಾಸಕಿ ರೂಪಾಲಿ ನಾಯ್ಕ ಭಾನುವಾರ ಭೂಮಿಪೂಜೆ ನೆರವೇರಿಸಿದರು.

ಕಾಳಿ ನದಿಯಲ್ಲಿ ಸುಮಾರು 45 ಎಕರೆ ವಿಸ್ತೀರ್ಣದಲ್ಲಿರುವ ಈ ನಡುಗಡ್ಡೆಯಲ್ಲಿ 100ಕ್ಕೂ ಹೆಚ್ಚು ಜನಸಂಖ್ಯೆಯಿದೆ. ಅಲ್ಲಿನ ನಿವಾಸಿಗಳಿಗೆ ದಡದ ಈಚೆಗೆ ಬರಲು ಸಣ್ಣ ಸಣ್ಣ ದೋಣಿಗಳೇ ಆಸರೆಯಾಗಿವೆ. ರಸ್ತೆ ಸಂಪರ್ಕ ಇಲ್ಲ ಎಂಬ ಕಾರಣಕ್ಕಾಗಿ ಅಲ್ಲಿನ ಕುಟುಂಬಗಳ ಯುವಕರನ್ನು ಮದುವೆಯಾಗಲು ಬೇರೆ ಗ್ರಾಮಗಳ ಯುವತಿಯರು ಹಿಂದೇಟು ಹಾಕುತ್ತಿರುವ ಉದಾಹರಣೆಗಳಿವೆ. ಆರೋಗ್ಯ ಹದಗೆಟ್ಟರೆ, ದಿನವೂ ಮಕ್ಕಳು ಶಾಲೆಗೆ ಹೋಗಲು ಅಥವಾ ದಿನಸಿ ಸಾಮಗ್ರಿ ತರಲು ದೋಣಿಗಳನ್ನೇ ಬಳಸಬೇಕಿದೆ.

2019ರಲ್ಲಿ ಉಂಟಾದ ಭಾರಿ ಪ್ರವಾಹದಲ್ಲಿ ಇಡೀ ದ್ವೀಪವೇ ಮುಳುಗಿತ್ತು. ಅಲ್ಲಿನ ನಿವಾಸಿಗಳನ್ನು ಸುರಕ್ಷಿತವಾಗಿ ಕರೆದುಕೊಂಡು ಬರಲು ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು ಹರಸಾಹಸ ಪಡಬೇಕಾಯಿತು.

ADVERTISEMENT

ಇದಕ್ಕೂ ಮೊದಲೇ ‘ಪ್ರಜಾವಾಣಿ’ಯ 2018ರ ಜೂನ್ 15ರ ಸಂಚಿಕೆಯಲ್ಲಿ ‘ಯುವಕರ ಮದುವೆಗೆ ಕಾಳಿ ಅಡ್ಡಿ’ ಎಂಬ ಶೀರ್ಷಿಕೆಯಲ್ಲಿ ವಿಶೇಷ ವರದಿ ಪ್ರಕಟವಾಗಿತ್ತು. ಮಾಧ್ಯಮ ವರದಿಗೆ ಸ್ಪಂದಿಸಿದ ಶಾಸಕಿ ರೂಪಾಲಿ ನಾಯ್ಕ, ದ್ವೀಪದ ಸಮಸ್ಯೆಯ ಬಗ್ಗೆ ವಿಧಾನಮಂಡಲ ಅಧಿವೇಶನದಲ್ಲಿ ಗಮನ ಸೆಳೆದರು. ಅಲ್ಲದೇ ಸೇತುವೆ ನಿರ್ಮಾಣಕ್ಕೆ ಅನುದಾನ ಮಂಜೂರು ಮಾಡಿಸುವಲ್ಲಿ ಯಶಸ್ವಿಯಾದರು. ಒಟ್ಟು 100 ಮೀಟರ್ ಉದ್ದದ ಸೇತುವೆ ಕಾಮಗಾರಿಯು ಶೀಘ್ರವೇ ಆರಂಭವಾಗಲಿದೆ.

ಇದೇ ರೀತಿ, ತಾಲ್ಲೂಕಿನ ಮಖೇರಿ ಗ್ರಾಮದಿಂದ ಸುಲ್ತಾನಪುರಕ್ಕೆ ಕೂಡ ಸೇತುವೆ ನಿರ್ಮಾಣವಾಗಲಿದೆ. ₹ 7.5 ಕೋಟಿ ವೆಚ್ಚದ ಕಾಮಗಾರಿಗೆ ರೂಪಾಲಿ ನಾಯ್ಕ ಚಾಲನೆ ನೀಡಿದರು.

‘ಅಭಿವೃದ್ಧಿಗೆ ಸದಾ ಬದ್ಧ’:ಭೂಮಿಪೂಜೆ ನೆರವೇರಿಸಿ ಮಾತನಾಡಿದ ಶಾಸಕಿ ರೂಪಾಲಿ ನಾಯ್ಕ ‘ಹಿಂದುಳಿದ ಜಾಗದಲ್ಲಿ ಸೇತುವೆ ನಿರ್ಮಾಣದ ಕನಸು ನನಸಾಗುತ್ತಿದೆ. ಕಾಂಗ್ರೆಸ್– ಜೆಡಿಎಸ್ ಸಮ್ಮಿಶ್ರ ಸರ್ಕಾರ ಇದ್ದಾಗ ಸೇತುವೆ ಮಂಜೂರಾಗಲು ಪ್ರಯತ್ನಿಸಿದ್ದರೂ ಪ್ರಯೋಜನವಾಗಲಿಲ್ಲ. ಬಳಿಕ ಈಗಿನ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಲೋಕೋಪಯೋಗಿ ಸಚಿವ ಗೋವಿಂದ ಕಾರಜೋಳ ಸ್ಪಂದಿಸಿ ಅನುದಾನ ನೀಡಿದ್ದಾರೆ. ಈ ರೀತಿ ಹಿಂದುಳಿದ ಪ್ರದೇಶಗಳ ಅಭಿವೃದ್ಧಿಗೆ ಸದಾ ಬದ್ಧರಾಗಿದ್ದೇವೆ’ ಎಂದರು.

ಗ್ರಾಮದ ಹಿರಿಯ ವಿ.ಡಿ. ದೇಸಾಯಿ ಮಾತನಾಡಿ, ‘ಇದು ಉಂಬಳೆಜೂಗಕ್ಕೆ ಸುವರ್ಣಾಕ್ಷರದಲ್ಲಿ ಬರೆಯುವ ದಿನವಾಗಿದೆ. ಈ ಸೇತುವೆ ಆಗುವ ಬಗ್ಗೆ ಯಾರೂ ಊಹಿಸಿರಲಿಲ್ಲ. ಬಹಳ ಸಂತಸವಾಗಿದೆ’ ಎಂದರು.

ತಾಲ್ಲೂಕು ‍ಪಂಚಾಯಿತಿ ಸದಸ್ಯ ಪ್ರಶಾಂತ ಗೋವೆಕರ್, ನಗರಸಭೆ ಅಧ್ಯಕ್ಷ ಡಾ.ನಿತಿನ್ ಪಿಕಳೆ, ಉಪಾಧ್ಯಕ್ಷ ಪಿ.ಪಿ.ನಾಯ್ಕ, ಕಿನ್ನರ ಮತ್ತು ವೈಲವಾಡ ಗ್ರಾಮ ‍ಪಂಚಾಯಿತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷರು, ಲೋಕೋಪಯೋಗಿ ಇಲಾಖೆಯ ಕಾರ್ಯ ನಿರ್ವಾಹಕ ಎಂಜಿನಿಯರ್ ಜಹಗೀರದಾರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.