ADVERTISEMENT

ಹಾಲು ಹಾಗೂ ಹಾಲಿನ ಉತ್ಪನ್ನಗಳ ಗುಣಮಟ್ಟ: ಹೊಸ ಮಾನದಂಡ ಜಾರಿಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2018, 15:05 IST
Last Updated 18 ಡಿಸೆಂಬರ್ 2018, 15:05 IST
ಸುರೇಶ್ಚಂದ್ರ ಹೆಗಡೆ
ಸುರೇಶ್ಚಂದ್ರ ಹೆಗಡೆ   

ಶಿರಸಿ: ಹಾಲು ಹಾಗೂ ಹಾಲಿನ ಉತ್ಪನ್ನಗಳ ಗುಣಮಟ್ಟವನ್ನು ನಿರ್ಧರಿಸುವ ಮಾನದಂಡದಲ್ಲಿ ಬದಲಾವಣೆ ಮಾಡಿಕೊಳ್ಳಲು ಎಫ್‌ಎಸ್‌ಎಸ್‌ಎಐ (Food Safety and Standard Authority of India) ಅಧಿಸೂಚನೆ ಹೊರಡಿಸಿದ್ದು, ರಾಜ್ಯ ಸರ್ಕಾರ ಸಂಬಂಧಪಟ್ಟ ಇಲಾಖೆಯಿಂದ ಮಾಹಿತಿ ಪಡೆದು ಹೊಸ ಮಾನದಂಡ ಜಾರಿಗೆ ತರಬೇಕು ಎಂದು ಧಾರವಾಡ ಹಾಲು ಒಕ್ಕೂಟದ ನಿರ್ದೇಶಕ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ ಒತ್ತಾಯಿಸಿದ್ದಾರೆ.

ಪ್ರಸ್ತುತ ಕರ್ನಾಟಕದಲ್ಲಿ 14 ಹಾಲು ಒಕ್ಕೂಟಗಳು ಕಾರ್ಯನಿರ್ವಹಿಸುತ್ತಿದ್ದು, ಈ ಒಕ್ಕೂಟಗಳ ವ್ಯಾಪ್ತಿಯಲ್ಲಿ ಸುಮಾರು 15ಸಾವಿರಕ್ಕೂ ಹೆಚ್ಚು ಸಂಘಗಳು ಕಾರ್ಯನಿರ್ವಹಿಸುತ್ತಿವೆ. 20 ಲಕ್ಷಕ್ಕೂ ಅಧಿಕ ಹಾಲು ಉತ್ಪಾದಕ ಸದಸ್ಯರಿದ್ದಾರೆ. ಭಾರತ ಜಗತ್ತಿನಲ್ಲಿಯೇ 2ನೇ ಅತಿ ದೊಡ್ಡ ಹಾಲು ಉತ್ಪಾದಿಸುವ ದೇಶವಾಗಿ ಬೆಳೆದು ನಿಂತಿದೆ. ಆದರೆ, ಹಾಲಿನ ಗುಣಮಟ್ಟದ ವಿಚಾರಕ್ಕೆ ಬಂದರೆ ಸಾಧನೆ ಸಾಧ್ಯವಾಗಿಲ್ಲ. ಈಗ ಹಾಲಿನ ಗುಣಮಟ್ಟವನ್ನು ಪರೀಕ್ಷಿಸಲು ಬಳಸುವ ಮಾನದಂಡವನ್ನು ಕೆಲವು ದಶಕಗಳ ಹಿಂದೆ ಇದ್ದ ಆಯಾ ರಾಜ್ಯದ ಭೌಗೋಳಿಕ ವಾತಾರಣದ ಮೇಲೆ ನಿರ್ಧರಿಸಲಾಗಿತ್ತು, ಅಂತೆಯೇ ಕರ್ನಾಟಕದಲ್ಲಿ ಕೂಡ ಆಕಳು ಹಾಲಿಗೆ ಕನಿಷ್ಠ 3.5 ಫ್ಯಾಟ್ ಹಾಗೂ 8.5 ಎಸ್ಎನ್ಎಫ್ ಹಾಗೂ ಎಮ್ಮೆ ಹಾಲಿಗೆ 6.0 ಫ್ಯಾಟ್ ಹಾಗೂ 9 ಎಸ್ಎನ್ಎಫ್ ಎಂದು ನಿರ್ಧರಿಸಲಾಯಿತು. ಆದರೆ, ಬದಲಾಗುತ್ತಿರುವ ಭೌಗೋಳಿಕ ವಾತಾವರಣ ಗಮನಿಸಿ ಎಫ್‌ಎಸ್‌ಎಸ್‌ಎಐ, ಹಾಲು ಹಾಗೂ ಹಾಲಿನ ಉತ್ಪನ್ನಗಳ ಗುಣಮಟ್ಟ ನಿರ್ಧರಿಸುವ ಮಾನದಂಡದಲ್ಲಿ ಬದಲಾವಣೆ ಮಾಡಿಕೊಳ್ಳಲು ತಿಳಿಸಿದೆ ಎಂದು ಮುಖ್ಯಮಂತ್ರಿಗೆ ಬರೆದಿರುವ ಪತ್ರದಲ್ಲಿ ಅವರು ವಿವರಿಸಿದ್ದಾರೆ.

ಆಕಳ ಹಾಲಿಗೆ ಕನಿಷ್ಠ 3.2 ಫ್ಯಾಟ್, 8.3 ಎಸ್ಎನ್ಎಫ್ ಹಾಗೂ ಎಮ್ಮೆ ಹಾಲಿಗೆ 5 ಫ್ಯಾಟ್ ಹಾಗೂ 9 ಎಸ್ಎನ್ಎಫ್ ಇರಬೇಕೆಂದು ನಿರ್ಧರಿಸಿ ಅಧಿಸೂಚನೆ ಹೊರಡಿಸಿದೆ. ರಾಜ್ಯ ಸರ್ಕಾರ ಈ ಹೊಸ ಮಾನದಂಡ ಜಾರಿಗೆ ತರಬೇಕು. ಹಾಲು ಉತ್ಪಾದಕರ ಸಹಕಾರಿ ಸಂಘಗಳಲ್ಲಿ ಕನಿಷ್ಠ 3.5 ಫ್ಯಾಟ್ ಹಾಗೂ 8.5 ಎಸ್ಎನ್ಎಫ್ ಇರುವ ಹಾಲನ್ನು ಮಾತ್ರ ಸ್ವೀಕರಿಸಲು ಕಾಯ್ದೆ ಪ್ರಕಾರ ಅನುಮತಿ ಇದ್ದು, ಕಡಿಮೆ ಗುಣಮಟ್ಟ ಬಂದ ಹಾಲನ್ನು ತಿರಸ್ಕರಿಸಲಾಗುತ್ತಿದೆ. ಇದರಿಂದ ಸರ್ಕಾರ ಪ್ರತಿ ಲೀಟರ್ ಹಾಲಿಗೆ ನೀಡುವ ₹ 5 ಪ್ರೋತ್ಸಾಹಧನವು ರೈತರಿಗೆ ಸಿಗುತ್ತಿಲ್ಲ. ಹೊಸ ಮಾನದಂಡ ಜಾರಿಗೆಯಾದಲ್ಲಿ ಇನ್ನೂ ಹೆಚ್ಚಿನ ಹಾಲು ಉತ್ಪಾದಕರಿಗೆ ಪ್ರೋತ್ಸಾಹಧನ ಪಡೆದುಕೊಳ್ಳಲು ಅನುಕೂಲವಾಗುತ್ತದೆ ಎಂದು ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.