ADVERTISEMENT

ಜೊಯಿಡಾ | ಹದಗೆಟ್ಟ ರಸ್ತೆ: ಸಂಪರ್ಕ ಅವ್ಯವಸ್ಥೆ

ಸಮಸ್ಯೆಯ ಸುಳಿಯಲ್ಲಿ ಅಣಶಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನತೆ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2024, 4:16 IST
Last Updated 6 ನವೆಂಬರ್ 2024, 4:16 IST
ಜೊಯಿಡಾ ತಾಲ್ಲೂಕಿನ ಅಣಶಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾಡಪೋಲಿ ಬಾರಾಡೆಗೆ ಸಂಪರ್ಕ ಕಲ್ಪಿಸುವ ಡಾಂಬರು ರಸ್ತೆ ಕಚ್ಚಾ ರಸ್ತೆಯಂತಾಗಿದೆ
ಜೊಯಿಡಾ ತಾಲ್ಲೂಕಿನ ಅಣಶಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾಡಪೋಲಿ ಬಾರಾಡೆಗೆ ಸಂಪರ್ಕ ಕಲ್ಪಿಸುವ ಡಾಂಬರು ರಸ್ತೆ ಕಚ್ಚಾ ರಸ್ತೆಯಂತಾಗಿದೆ   

ಜೊಯಿಡಾ: ಮಳೆಗಾಲದಲ್ಲಿ ವಿದ್ಯುತ್, ಮೊಬೈಲ್ ನೆಟ್‌ವರ್ಕ್ ವ್ಯತ್ಯಯದಿಂದ ಸಮಸ್ಯೆ ಎದುರಿಸುವ ಅಣಶಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನರು ಈಗ ಸಮರ್ಪಕ ಬಸ್ ಮತ್ತು ರಸ್ತೆ ವ್ಯವಸ್ಥೆ ಇಲ್ಲದೇ ಸಮಸ್ಯೆ ಎದುರಿಸುವಂತಾಗಿದ್ದು ಮೂಲಸೌಕರ್ಯಕ್ಕಾಗಿ ಪ್ರತಿಭಟನೆ ನಡೆಸುವ ಹಂತದಲ್ಲಿದ್ದಾರೆ.

ತಾಲ್ಲೂಕಿನ ಹಿಂದುಳಿದ ಗ್ರಾಮ ಪಂಚಾಯಿತಿಗಳಲ್ಲಿ ಒಂದಾದ ಅಣಶಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾರ್ವಜನಿಕರಿಗೆ ಸಾರಿಗೆ ಸಂಪರ್ಕವೇ ಪ್ರಮುಖ ಸಮಸ್ಯೆಯಾಗಿದೆ.

ಅಣಶಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಣಶಿ, ನಿಗುಂಡಿ, ಬಾಡಪೋಲಿ ಮತ್ತು ನುಜ್ಜಿ ಗ್ರಾಮಗಳಿದ್ದು, ಜನಸಂಖ್ಯೆ ಸುಮಾರು 1,950ರಷ್ಟು ಇದೆ. ಈ ವ್ಯಾಪ್ತಿಯಲ್ಲಿ ಸದಾಶಿವಗಡ -ಔರಾದ ರಾಜ್ಯ ಹೆದ್ದಾರಿ 34 ಹಾದು ಹೋಗಿದ್ದು, ಅಣಶಿ, ಬಾಡಪೋಲಿ, ನಿಗುಂಡಿ, ನುಜ್ಜಿ, ಮಾಸೇತ ಮತ್ತು ಗುಂಡಾಳಿಯಲ್ಲಿ ಬಸ್ ನಿಲ್ದಾಣಗಳಿವೆ. ಕೋವಿಡ್–19 ನಂತರದಲ್ಲಿ ಈ ಮಾರ್ಗದಲ್ಲಿ ಸಂಚರಿಸುವ ಬಸ್‌ಗಳ ಸಂಖ್ಯೆ ಕಡಿಮೆಯಾಗಿದ್ದು ಅಣಶಿ ಮತ್ತು ನುಜ್ಜಿ ಬಿಟ್ಟರೆ ಉಳಿದ ಬಸ್ ನಿಲ್ದಾಣಗಳಲ್ಲಿ ಕಾರವಾರ–ಪಿಂಪ್ರೀ, ಬೆಳಗಾವಿ–ಉಡುಪಿ, ಬೆಳಗಾವಿ–ಮಂಗಳೂರು, ಕುಮಟಾ–ಕೊಲ್ಹಾಪುರ ಬಸ್‌ಗಳನ್ನು ನಿಲ್ಲಿಸುವುದಿಲ್ಲ. ಆದ್ದರಿಂದ ಈ ಗ್ರಾಮಗಳ ಜನರು ಆರೋಗ್ಯ, ಸರ್ಕಾರಿ ಇಲಾಖೆ, ಮಾರುಕಟ್ಟೆ ಕಾರ್ಯಗಳಿಗೆ, ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ಪಟ್ಟಣಗಳಿಗೆ ತೆರಳಲು ಪರದಾಡುತ್ತಿದ್ದಾರೆ.

ADVERTISEMENT

ಅಣಶಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಂದು ಸರ್ಕಾರಿ ಪ್ರೌಢಶಾಲೆ ಮತ್ತು 9 ಪ್ರಾಥಮಿಕ ಶಾಲೆಗಳಿದ್ದು ಬಹುತೇಕ ಶಾಲೆಗಳು ಅತಿಥಿ ಶಿಕ್ಷಕರನ್ನು ಅವಲಂಬಿಸಿವೆ. ಅಣಶಿಯಲ್ಲಿ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯವಿದ್ದು, ಬಾಲಕಿಯರ ನಿಲಯಕ್ಕೆ ಸ್ಥಳೀಯರು ಬೇಡಿಕೆ ಸಲ್ಲಿಸುತ್ತಾರೆ. ಹಲವು ಹಳ್ಳಿಗಳ ಬಾಲಕಿಯರು ಬಾಡಿಗೆ ಮನೆ ಅಥವಾ ಸಂಬಂಧಿಕರ ಮನೆಯಲ್ಲಿದ್ದು ಶಿಕ್ಷಣ ಪಡೆಯುತ್ತಿದ್ದಾರೆ.

ಕಟ್ಟೆ–ಕಾಡಪೋಡ– ಥಿಗುರಗಾಳಿ– ಸಾವಂತ ಮಾತ್ಕರ್ಣಿ, ಬಾಡಪೋಲಿ–ಬಾರಾಡೆ, ನಿಗುಂಡಿ–ಬಾಕಿತ, ಆಜ್ಜೆ, ಪಾಟ್ನೇ, ಕುಮಗಾಳಿ, ಮಾಟಗಾಂವ–ಕೈಲವಾಡಾ ಹಳ್ಳಿಗಳ ರಸ್ತೆಗಳು ಸಂಪೂರ್ಣ ಹಾಳಾಗಿ ದಶಕಗಳೇ ಕಳೆದಿವೆ. ಕೆಲವು ಕಡೆಗಳಲ್ಲಿ ರಸ್ತೆಯಲ್ಲಿ ನಡೆದುಕೊಂಡು ಹೋಗಲಾಗದ ಸ್ಥಿತಿ ನಿರ್ಮಾಣವಾಗಿದೆ.

‘ಇಲ್ಲಿನ ಸ್ಥಳೀಯ ಜನಪ್ರತಿನಿಧಿಗಳಿಗೆ ಶಾಸಕರು ಅಥವಾ ಸಂಸದರ ಜೊತೆ ನಿಕಟ ಸಂಪರ್ಕ ಇಲ್ಲ, ರಾಜಕಾರಣದಲ್ಲಿ ಪ್ರಭಾವವೂ ಇಲ್ಲ. ಅಭಿವೃದ್ಧಿ ಕಾಮಗಾರಿಗಳನ್ನು ಮಾಡಬೇಕು ಎಂಬ ಆಸಕ್ತಿಯೂ ಇಲ್ಲ. ಇದರಿಂದಾಗಿ ಅಣಶಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿಲ್ಲ. ಚಾಂದಕುಣಂಗ, ಮಾಸೇತ ಅಂತಹ ಜನವಸತಿ ಇಲ್ಲದ ಕಡೆಗಳಲ್ಲಿ ಸಣ್ಣ ಪುಟ್ಟ ಕಾಮಗಾರಿಗಳನ್ನು ಮಾಡಿ ಅನುದಾನ ದುರ್ಬಳಕೆ ಮಾಡಲಾಗಿದೆ’ ಎನ್ನುತ್ತಾರೆ ಸ್ಥಳೀಯರಾದ ವಿಷ್ಣು ದೇಸಾಯಿ, ಬಾಬು ದೇಸಾಯಿ ಮತ್ತು ಪ್ರಕಾಶ ವೇಳಿಪ.

‘ಬಾಡಪೋಲಿ– ಬಾರಾಡೆ ಬಸ್ ನಿಲ್ದಾಣ ಸಂಪೂರ್ಣ ಹಾಳಾಗಿ ಮೂರು ವರ್ಷ ಕಳೆದಿದೆ. ದುರಸ್ತಿ ಮಾಡುವಂತೆ ಹಲವು ಬಾರಿ ಗ್ರಾಮ ಪಂಚಾಯಿತಿಗೆ ಆಗ್ರಹಿಸಲಾಗಿದೆ. ಒಂದು ಸಣ್ಣ ಬಸ್ ನಿಲ್ದಾಣ ದುರಸ್ತಿ ಮಾಡುವ ಸಾಮರ್ಥ್ಯವೂ ಪಂಚಾಯಿತಿಗೆ ಇಲ್ಲ, ಇವರಿಂದ ಬೇರೆ ಅಭಿವೃದ್ಧಿಯನ್ನು ನಿರೀಕ್ಷೆ ಮಾಡುವುದಾದರೂ ಹೇಗೆ’ ಎಂದು ಆಕ್ರೋಶ ಹೊರಹಾಕುತ್ತಾರೆ ಬಾಡಪೋಲಿಯ ಪಾಂಡುರಂಗ ಮತ್ತು ಹನುಮಂತ ದೇಸಾಯಿ.

‘2018ರಲ್ಲಿ ನಿಗುಂಡಿ ರಸ್ತೆ ಅಭಿವೃದ್ಧಿಗೆ ಅನುದಾನ ಬಂದಿದ್ದು, ರಸ್ತೆಗೆ ಖಡಿ ಹಾಕುವ ಕಾಮಗಾರಿ ಅರ್ಧಕ್ಕೆ ನಿಂತಿದೆ. ಜನರು ನಡೆದುಕೊಂಡು ಹೋಗಲಾಗದ ಸ್ಥಿತಿ ನಿರ್ಮಾಣವಾಗಿದೆ. ಆದಷ್ಟು ಬೇಗ ರಸ್ತೆ ದುರಸ್ತಿ ಮಾಡಬೇಕು’ ಎನ್ನುತ್ತಾರೆ ನಿಗುಂಡಿಯ ಅಶೋಕ ದೇಸಾಯಿ.

ಮೂರು ವರ್ಷಗಳ ಹಿಂದೆ ಹಾಳಾಗಿರುವ ಅಣಶಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾಡಪೋಲಿ ಗ್ರಾಮದ ಬಸ್ ನಿಲ್ದಾಣ ದುರಸ್ತಿಗೆ ಕಾದಿದೆ
ಬಾಡಪೋಲಿ ರಸ್ತೆ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡುವಂತೆ ಪ್ರಸ್ತಾವ ಸಲ್ಲಿಸಲಾಗಿದೆ. ನಿಗುಂಡಿ ರಸ್ತೆ ಅಭಿವೃದ್ಧಿಗೆ ಹೆಚ್ಚಿನ ಅನುದಾನದ ಅವಶ್ಯಕತೆ ಇದೆ
ಮಹಮ್ಮದ್ ಇಜಾನ್ ಸಬೂರ ಎಇಇ ಜಿಲ್ಲಾ ಪಂಚಾಯಿತಿ ಉಪ ವಿಭಾಗ ಜೊಯಿಡಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.