ಕಾರವಾರ: ಜಿಲ್ಲೆಯ 13 ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿಯೂ ಸ್ವಚ್ಛತೆ ಕಾರ್ಯ ಕೈಗೊಳ್ಳಲು ಪೌರಕಾರ್ಮಿಕರ ಕೊರತೆ ಹೆಚ್ಚಿದೆ. ಸೀಮಿತ ಸಿಬ್ಬಂದಿ ಮೇಲೆ ಹೆಚ್ಚು ಒತ್ತಡ ಸೃಷ್ಟಿಯಾಗುತ್ತಿದೆ ಎಂಬ ದೂರು ವ್ಯಾಪಕವಾಗಿದೆ.
ಮೂರು ನಗರಸಭೆ, ನಾಲ್ಕು ಪುರಸಭೆ ಹಾಗೂ ಆರು ಪಟ್ಟಣ ಪಂಚಾಯಿತಿ ವ್ಯಾಪ್ತಿಯಿಂದ ಜಿಲ್ಲೆಗೆ 598 ಪೌರಕಾರ್ಮಿಕ ಹುದ್ದೆಗಳು ಮಂಜೂರಾಗಿವೆ. ಅವುಗಳ ಪೈಕಿ 294 ಕಾಯಂ, 24 ನೇರ ಪಾವತಿ ಆಧಾರದಲ್ಲಿ ಕಾರ್ಯನಿರ್ವಹಿಸುವ ಪೌರ ಕಾರ್ಮಿಕರಿದ್ದಾರೆ. 280 ಹುದ್ದೆಗಳು ಖಾಲಿ ಉಳಿದಿದೆ ಎನ್ನುತ್ತಿದೆ ಜಿಲ್ಲಾ ನಗರಾಭಿವೃದ್ಧಿ ಕೋಶದ ಅಂಕಿ–ಅಂಶಗಳು.
ಕಾರವಾರ, ಶಿರಸಿ ಮತ್ತು ದಾಂಡೇಲಿ ನಗರಸಭೆಯಲ್ಲಿ ಕೆಲವು ತಿಂಗಳ ಹಿಂದಷ್ಟೇ ಕಾಯಂ ಆದ ಪೌರಕಾರ್ಮಿಕರನ್ನು ನಿಯೋಜನೆ ಆಧಾರದಲ್ಲಿ ಬೇರೆ ಬೇರೆ ನಗರ ಸ್ಥಳೀಯ ಸಂಸ್ಥೆಗಳಿಗೆ ನಿಯೋಜಿಸಲಾಗಿದೆ. ಕಾರವಾರ ನಗರಸಭೆಯೊಂದರಲ್ಲೇ ನಾಗರಿಕ ಮತ್ತು ವೃಂದ ನಿಯಮಾವಳಿ (ಸಿ ಆ್ಯಂಡ್ ಆರ್) ಪ್ರಕಾರ 92 ಪೌರಕಾರ್ಮಿಕರ ಹುದ್ದೆ ಇರಬೇಕಿದ್ದು, ಕೇವಲ 41 ಮಂದಿ ಕಾರ್ಯನಿರ್ಹಿಸುವ ಸ್ಥಿತಿ ಇದೆ. ಉಳಿದ ಸ್ಥಳೀಯ ಸಂಸ್ಥೆಗಳ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ.
‘ನಗರ ಸ್ಥಳೀಯ ಸಂಸ್ಥೆಗಳಲ್ಲಿ ಪ್ರತಿ 500 ಜನಸಂಖ್ಯೆಗೆ ಒಬ್ಬ ಪೌರಕಾರ್ಮಿಕ ರನ್ನು ನೇಮಕ ಮಾಡುವಂತೆ ಐಪಿಡಿ ಸಾಲಪ್ಪ ಸಮಿತಿ ವರದಿ ಹೇಳಿದೆ. ಸರ್ಕಾರ ಪ್ರತಿ 700 ಜನಸಂಖ್ಯೆಗೆ ಒಬ್ಬರು ಪೌರಕಾರ್ಮಿಕರನ್ನು ನಿಯೋಜಿಸಲು ಒಪ್ಪಿಗೆ ಸೂಚಿಸಿತ್ತು. ಆದರೆ, ಈಗಲೂ ನಾಗರಿಕ ಮತ್ತು ವೃಂದ ನಿಯಮ ಪ್ರಕಾರ ಪ್ರತಿ 1,000 ಜನರಿಗೆ ಒಬ್ಬ ಪೌರಕಾರ್ಮಿಕನನ್ನು ನೇಮಕ ಮಾಡಿಕೊಳ್ಳುತ್ತಿದೆ. ಸೀಮಿತ ಸಂಖ್ಯೆಯ ಕಾರ್ಮಿಕರು ಇಡೀ ನಗರ, ಪಟ್ಟಣದ ಸ್ವಚ್ಛತೆ ಕೈಗೊಳ್ಳಬೇಕಾದ ಒತ್ತಡಕ್ಕೆ ಸಿಲುಕುತ್ತಿದ್ದಾರೆ’ ಎಂದು ಕರ್ನಾಟಕ ಮುನ್ಸಿಪಲ್ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಡಿ.ಸ್ಯಾಮ್ಸನ್ ಹೇಳುತ್ತಾರೆ.
‘ಪೌರಕಾರ್ಮಿಕರಾಗಿ ನೇಮಕ ಗೊಂಡ ವರು ಅನ್ಯ ಕೆಲಸಗಳಿಗೆ ನಿಯೋಜನೆಗೊಂಡಿದ್ದರೆ ರದ್ದುಪಡಿಸುವಂತೆ ಪೌರಾಡಳಿತ ನಿರ್ದೇಶನಾಲಯ ಸೂಚಿಸಿದೆ. ಆದರೂ ನಿಯಮ ಪಾಲನೆ ಮಾಡದ ಅಧಿಕಾರಿಗಳ ವಿರುದ್ಧ ಸಫಾಯಿ ಕರ್ಮಚಾರಿ ಆಯೋಗ, ಜಾರಿ ನಿರ್ದೇಶನಾಲಯಕ್ಕೆ ದೂರು ಸಲ್ಲಿಸಲಾಗುವುದು’ ಎಂದು ಅವರು ತಿಳಿಸಿದರು.
‘ಹುದ್ದೆ, ವೇತನ ಬೇಕು; ಕೆಲಸ ಬೇಡ’
ಜಿಲ್ಲೆಯ ಕೆಲವು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಪೌರಕಾರ್ಮಿಕ ಹುದ್ದೆಗೆ ನೇಮಕಗೊಂಡಿರುವ ಪರಿಶಿಷ್ಟರಲ್ಲದ ಹಲವು ಸಿಬ್ಬಂದಿ ಅನ್ಯ ಕೆಲಸಕ್ಕೆ ನಿಯೋಜನೆಗೊಳ್ಳುತ್ತಿರುವುದಕ್ಕೆ ಆಕ್ಷೇಪ ಹೆಚ್ಚುತ್ತಿದೆ.
‘ಪೌರ ಕಾರ್ಮಿಕ ಹುದ್ದೆಗೆ ನೇಮಕಗೊಳ್ಳುವ ಪರಿಶಿಷ್ಟರಲ್ಲದ ನೌಕರರು ಕಸ ಸ್ವಚ್ಛಗೊಳಿಸಲು, ಲೋಡರ್ಸ್ ಕೆಲಸ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಇವೆಲ್ಲ ಕೆಲಸ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ಸೀಮಿತ ಎಂಬಂತೆ ಬಿಂಬಿಸುವ ಕೆಲಸ ನಡೆಯುತ್ತಿದೆ. ಆದರೆ, ಪೌರಕಾರ್ಮಿಕ ಹುದ್ದೆಯನ್ನೇ ಪಡೆದು, ಅವರಿಗೆ ಸಿಗುವಷ್ಟೇ ವೇತನ ಪಡೆದು ಚಾಲಕ, ಗುಮಾಸ್ತ, ಮೇಲ್ವಿಚಾರಕ ಹುದ್ದೆಗಳನ್ನು ನಿಭಾಯಿಸುತ್ತಿದ್ದಾರೆ. ಕೆಲ ಅಧಿಕಾರಿಗಳ ಬೆಂಬಲದಿಂದ ಹೀಗೆ ಮಾಡಲಾಗುತ್ತಿದೆ’ ಎಂದು ಆರೋಪಿಸಿದ್ದಾರೆ ಡಿ.ಸ್ಯಾಮ್ಸನ್.
ಜಿಲ್ಲಾ ಕೇಂದ್ರವಾಗಿರುವ ಕಾರವಾರದಲ್ಲಿ ಪೌರಕಾರ್ಮಿಕರ ಕೊರತೆ ಹೆಚ್ಚುತ್ತಿದೆ. ಹೆಚ್ಚುವರಿ ಪೌರಕಾರ್ಮಿಕರ ನಿಯೋಜನೆಗೆ ಜಿಲ್ಲಾಧಿಕಾರಿಗೆ ಮನವಿ ಮಾಡಲಾಗಿದೆರವಿರಾಜ್ ಅಂಕೋಲೇಕರ್, ಕಾರವಾರ ನಗರಸಭೆ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.