ಅಂಕೋಲಾ: ಗುಡ್ಡ ಕುಸಿತದ ಅವಘಡದಿಂದ ತಲ್ಲಣಗೊಂಡಿರುವ ತಾಲ್ಲೂಕಿನ ಶಿರೂರು ಗ್ರಾಮದಲ್ಲಿ ಗುಡ್ಡದ ಬುಡದಲ್ಲಿರುವ ಕೆಲ ನಿವಾಸಿಗಳು ಆತಂಕದಲ್ಲೇ ದಿನ ಕಳೆಯುವಂತಾಗಿದೆ.
ಶಿರೂರಿನಲ್ಲಿ ಸದ್ಯ ಕುಸಿತಗೊಂಡಿರುವ ಗುಡ್ಡದಿಂದ ಸ್ವಲ್ಪ ದೂರದಲ್ಲೇ ಹತ್ತಾರು ಮನೆಗಳಿವೆ. ಹೆದ್ದಾರಿ ಅಂಚಿನಲ್ಲಿರುವ ಗುಡ್ಡದ ಮೇಲೆ ಎರಡು ಮನೆಗಳಿದ್ದು, ಈಗಾಗಲೆ ಇಲ್ಲಿನ ನಿವಾಸಿಗಳನ್ನು ಬೆಳಸೆಯಲ್ಲಿ ತೆರೆಯಲಾದ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಇದೇ ಗುಡ್ಡದ ಬುಡದಲ್ಲಿ ನಾಲ್ಕೈದು ಮನೆಗಳಿದ್ದು, ಅಲ್ಲಿನ ಜನರು ರಾತ್ರಿ ನಿದ್ದೆಯಿಲ್ಲದೆ ಕಳೆಯುತ್ತಿದ್ದಾರೆ.
‘ಗುಡ್ಡದ ತಪ್ಪಲಿನಲ್ಲಿಯೇ ಮನೆ ಕಟ್ಟಿಕೊಂಡು ಹಲವಾರು ವರ್ಷಗಳಿಂದ ವಾಸವಿದ್ದೇವೆ. ನಮ್ಮ ಪೂರ್ವಿಕರೂ ಇದೇ ಸ್ಥಳದಲ್ಲಿ ವಾಸವಿದ್ದರು. ಇಷ್ಟು ವರ್ಷವಾದರೂ ನಮಗೆ ಗುಡ್ಡ ಕುಸಿತದ ಆತಂಕವೇ ಇರಲಿಲ್ಲ. ಇದೇ ಮೊದಲ ಬಾರಿ ಭಯದಲ್ಲಿ ದಿನ ಕಳೆಯುವ ಸ್ಥಿತಿ ಬಂದೊದಗಿದೆ’ ಎಂದು ಗ್ರಾಮಸ್ಥ ಮಾರುತಿ ಗೌಡ ಹೇಳಿದರು.
‘ಚಥುಷ್ಪತ ರಸ್ತೆ ನಿರ್ಮಾಣಕ್ಕಾಗಿ ಹೆದ್ದಾರಿ ಅಂಚಿನಲ್ಲಿರುವ ಗುಡ್ಡಗಳನ್ನು ಬೇಕಾಬಿಟ್ಟಿ ಕೊರೆಯಲಾಗಿದೆ. ಬೃಹತ್ ಯಂತ್ರಗಳು, ಸ್ಪೋಟಕಗಳನ್ನು ಬಳಸಿ ಬೃಹತ್ ಬಂಡೆಗಳನ್ನು ಸ್ಪೋಟಿಸಲಾಗಿದೆ. ಸ್ಪೋಟದ ತೀವ್ರತೆಗೆ ಬಂಡೆಗಳಲ್ಲಿ ಬಿರುಕು ಉಂಟಾಗಿ ಬೆಟ್ಟ ಪ್ರದೇಶದಿಂದ ಹರಿದು ಬರುವ ನೀರು ಬಿರುಕುಗೊಂಡ ಬಂಡೆಗಳಲ್ಲಿ ಹರಿದು ಬರುವಾಗ ಗುಡ್ಡ ಕುಸಿತಕ್ಕೆ ಕಾರಣವಾಗುತ್ತಿದೆ. ದೂರದಲ್ಲಿ ಗುಡ್ಡ ಕುಸಿದಿದ್ದರೂ ನಾವು ಉಳಿದುಕೊಂಡ ಮನೆಗಳ ಬಳಿಯ ಗುಡ್ಡದ ಮಣ್ಣು ಸಡಿಲಗೊಳ್ಳಬಹುದು ಎಂಬ ಭಯವಿದೆ’ ಎಂದರು.
‘ಸುರಕ್ಷತೆ ದೃಷ್ಟಿಯಿಂದ ಸ್ಥಳಾಂತರಕ್ಕೆ ಅಧಿಕಾರಿಗಳು ಸೂಚಿಸುತ್ತಿದ್ದಾರೆ. ಕಾಳಜಿ ಕೇಂದ್ರ ತಾತ್ಕಾಲಿಕ ವಸತಿ ನೀಡಬಹುದೇ ಹೊರತು, ಗುಡ್ಡ ಕುಸಿದು ಅವಘಡ ಸಂಭವಿಸಿದರೆ ಯಾರು ಹೊಣೆ ಹೊರುತ್ತಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಶಿರೂರು ಸೇರಿದಂತೆ ಬೆಳಸೆಯಿಂದ ಗೋಕರ್ಣ ಕ್ರಾಸ್‍ವರೆಗೆ ಗುಡ್ಡ ಕುಸಿಯುವ ಸಂಭವಿಸುವ ಸಾಧ್ಯತೆ ಇದ್ದು ಸುರಕ್ಷತೆ ದೃಷ್ಟಿಯಿಂದ ಗುಡ್ಡದ ಅಂಚಿನಲ್ಲಿ ವಾಸವಿರುವ ಜನರನ್ನು ಸ್ಥಳಾಂತರಿಸಲು ಸೂಚಿಸಲಾಗಿದೆಅನಂತ್ ಶಂಕರ್ ಬಿ ಅಂಕೋಲಾ ತಹಶೀಲ್ದಾರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.