ADVERTISEMENT

ಸಂಸತ್‌: ಉತ್ತರ ಕನ್ನಡ ಜಿಲ್ಲೆಯ ಧ್ವನಿಯಾಗುವರೇ ವಿಶ್ವೇಶ್ವರ ಹೆಗಡೆ ಕಾಗೇರಿ?

ಉತ್ತರ ಕನ್ನಡಕ್ಕೆ ಏಮ್ಸ್, ರೈಲ್ವೆ ಯೋಜನೆ ಜಾರಿಯ ಸವಾಲು

ಗಣಪತಿ ಹೆಗಡೆ
Published 7 ಜೂನ್ 2024, 6:49 IST
Last Updated 7 ಜೂನ್ 2024, 6:49 IST
<div class="paragraphs"><p>ವಿಶ್ವೇಶ್ವರ ಹೆಗಡೆ ಕಾಗೇರಿ</p></div>

ವಿಶ್ವೇಶ್ವರ ಹೆಗಡೆ ಕಾಗೇರಿ

   

ಕಾರವಾರ: ಉತ್ತರ ಕನ್ನಡ ಲೋಕಸಭಾ ಕ್ಷೇತ್ರವನ್ನು ನಿರಂತರವಾಗಿ ಪ್ರತಿನಿಧಿಸುತ್ತಿದ್ದ ಬಿಜೆಪಿಯ ಅನಂತಕುಮಾರ ಹೆಗಡೆ ಪ್ರಖರ ಭಾಷಣಕ್ಕೆ ಹೆಸರಾಗಿದ್ದವರು. ಮಾತನ್ನೇ ಬಂಡವಾಳವಾಗಿಸಿಕೊಂಡು ಗೆದ್ದು ಬಂದವರು. ‘ಗೆದ್ದ ಬಳಿಕ ಸಂಸತ್‍ನಲ್ಲಿ ಮಾತನಾಡಿದ್ದು ಅಪರೂಪ!’ ಎಂಬುದು ಅವರ ಮೇಲಿದ್ದ ಆರೋಪ.

ಈಗ ಅನಂತಕುಮಾರ ಹೆಗಡೆ ಬದಲು ವಿಶ್ವೇಶ್ವರ ಹೆಗಡೆ ಕಾಗೇರಿ ಸಂಸತ್ ಸದಸ್ಯರಾಗಿ ಆಯ್ಕೆ ಆಗಿದ್ದಾರೆ. ರಾಜ್ಯ ವಿಧಾನಸಭೆಗೆ ಆರು ಬಾರಿ ಸದಸ್ಯರಾಗಿ, ಒಂದು ಅವಧಿಗೆ ಅಧ್ಯಕ್ಷರಾಗಿ ಕೆಲಸ ಮಾಡಿದ್ದ ಅವರಿಗೆ ಸಂಸತ್‍ ಸದಸ್ಯತ್ವ ಹೊಸ ಅನುಭವ. ಅವರಾದರೂ ಸಂಸತ್‍ನಲ್ಲಿ ಕ್ಷೇತ್ರದ ಸಮಸ್ಯೆಯ ಬಗ್ಗೆ ಧ್ವನಿ ಎತ್ತಬಹುದೇ ಎಂಬ ನಿರೀಕ್ಷೆಯಲ್ಲಿ ಜನರಿದ್ದಾರೆ.

ADVERTISEMENT

ಉತ್ತರ ಕನ್ನಡ ಜಿಲ್ಲೆ ಮತ್ತು ಬೆಳಗಾವಿಯ ಕಿತ್ತೂರು ಹಾಗೂ ಖಾನಾಪುರ ತಾಲ್ಲೂಕನ್ನು ಒಳಗೊಂಡ ಲೋಕಸಭಾ ಕ್ಷೇತ್ರದಲ್ಲಿ ಶೇ 80ಕ್ಕಿಂತ ಹೆಚ್ಚು ಅರಣ್ಯ ಭೂಮಿ ಇದೆ. 78 ಸಾವಿರಕ್ಕೂ ಹೆಚ್ಚು ಕುಟುಂಬಗಳು ಹಲವು ದಶಕಗಳಿಂದ ಭೂಮಿ ಹಕ್ಕು ಸಿಗದೆ ಅತಂತ್ರರಾಗಿದ್ದಾರೆ. ಹಕ್ಕಿಗಾಗಿ ಹೋರಾಟ ನಿರಂತರವಾಗಿ ನಡೆದುಕೊಂಡು ಬಂದಿದೆ. ಈ ಗಂಭೀರ ಸಮಸ್ಯೆಗೆ ಈ ಅವಧಿಯಲ್ಲಾದರೂ ಮುಕ್ತಿ ಸಿಗಬಹದೇ ಎಂಬ ಯೋಚನೆಯಲ್ಲಿ ಅರಣ್ಯವಾಸಿಗಳಿದ್ದಾರೆ.

ಕರಾವಳಿ ಪ್ರದೇಶವನ್ನು ಒಳಗೊಂಡ ಜಿಲ್ಲೆಯಲ್ಲಿ ವಾಣಿಜ್ಯ ಬಂದರು ಇದೆ. ಖಾಸಗಿ ಸಹಭಾಗಿತ್ವದಲ್ಲಿ ಹೊಸ ಬಂದರು ನಿರ್ಮಾಣ ಕಾರ್ಯ ಆರಂಭಗೊಂಡಿದೆ. ಆದರೆ, ಉತ್ತರ ಕರ್ನಾಟಕದಿಂದ ಸಂಪರ್ಕ ಸಾಧಿಸುವ ಹುಬ್ಬಳ್ಳಿ–ಅಂಕೋಲಾ ರೈಲ್ವೆ ಯೋಜನೆ ನನೆಗುದಿಗೆ ಬಿದ್ದು ಎರಡು ದಶಕಗಳಿಗೂ ಹೆಚ್ಚು ಕಾಲವಾಗಿದೆ.

‘ಮೊದಲ ಬಾರಿಗೆ ಲೋಕಸಭೆಗೆ ಸ್ಪರ್ಧಿಸಿದ ವಿಶ್ವೇಶ್ವರ ಹೆಗಡೆ ಕಾಗೇರಿ ಹುಬ್ಬಳ್ಳಿ–ಅಂಕೋಲಾ, ತಾಳಗುಪ್ಪ–ಶಿರಸಿ–ಹುಬ್ಬಳ್ಳಿ, ಧಾರವಾಡ–ಕಿತ್ತೂರು–ಬೆಳಗಾವಿ ರೈಲ್ವೆ ಯೋಜನೆ ಪೂರ್ಣಗೊಳಿಸುವ ಭರವಸೆ ನೀಡಿ ಮತ ಕೇಳಿದ್ದರು. ಗೆಲುವು ಸಾಧಿಸಿರುವ ಅವರು ಈ ಯೋಜನೆ ಪೂರ್ಣಗೊಳಿಸುವ ಸವಾಲನ್ನು ನಿಭಾಯಿಸಬೇಕಾಗಿದೆ. ರಾಜಕಾರಣದಲ್ಲಿ ಸುದೀರ್ಘ ಅನುಭವ ಹೊಂದಿರುವ ಅವರು ಮನಸ್ಸು ಮಾಡಿದರೆ ಇದೇನು ಕಷ್ಟವಾಗದು’ ಎನ್ನುತ್ತಾರೆ ಹುಬ್ಬಳ್ಳಿ–ಅಂಕೋಲಾ ರೈಲ್ವೆ ಹೋರಾಟ ಸಮಿತಿಯ ಸದಸ್ಯರೊಬ್ಬರು.

‘ನೌಕಾನೆಲೆ, ಅಣು ಸ್ಥಾವರ ಸೇರಿದಂತೆ ಕೇಂದ್ರ ಯೋಜನೆಗಳಿರುವ ಜಿಲ್ಲೆ ಆರೋಗ್ಯ ಕ್ಷೇತ್ರದಲ್ಲಿ ಹಿಂದುಳಿದಿದೆ. ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್) ಮಂಜೂರು ಮಾಡಿದರೆ ಅನುಕೂಲವಾಗಲಿದೆ. ಈ ನಿಟ್ಟಿನಲ್ಲಿ ಪ್ರಯತ್ನ ನಡೆಯಬೇಕಿದೆ’ ಎಂದು ಒತ್ತಾಯಿಸುತ್ತಾರೆ ಸಾಮಾಜಿಕ ಕಾರ್ಯಕರ್ತ ಪ್ರಶಾಂತ ನಾಯ್ಕ.

ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಅವಧಿಯಲ್ಲಿ ಕರಾವಳಿ ಪ್ರದೇಶಕ್ಕೆ ತಾರತಮ್ಯ ಎಸಗಿದ್ದರು ಎಂಬುದು ಕಾಗೇರಿ ಅವರ ಮೇಲಿದ್ದ ಗಂಭೀರ ಆರೋಪ. ಜಿಲ್ಲೆಯ ಜತೆಗೆ ಕಿತ್ತೂರು, ಖಾನಾಪುರದ ಸಮಸ್ಯೆಗೆ ಪಕ್ಷಪಾತತನ ತೋರದೆ ನ್ಯಾಯ ಒದಗಿಸಬೇಕಾದ ಸವಾಲು ಅವರ ಎದುರಿಗಿದೆ.

ಕ್ಷೇತ್ರದ ಪ್ರಮುಖ ಬೇಡಿಕೆಗಳು

* ಹುಬ್ಬಳ್ಳಿ–ಅಂಕೋಲಾ ತಾಳಗುಪ್ಪ–ಶಿರಸಿ–ಹುಬ್ಬಳ್ಳಿ ಧಾರವಾಡ–ಕಿತ್ತೂರು–ಬೆಳಗಾವಿ ರೈಲ್ವೆ ಯೋಜನೆ ಪೂರ್ಣಗೊಳಿಸುವುದು

* ಅರಣ್ಯ ಅತಿಕ್ರಮಣದಾರರಿಗೆ ಭೂಮಿ ಹಕ್ಕು ನೀಡುವುದು

* ಏಮ್ಸ್ ಅಥವಾ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ಸ್ಥಾಪನೆ

* ಮಂದಗತಿಯಲ್ಲಿ ಸಾಗಿರುವ ಚತುಷ್ಪಥ ಹೆದ್ದಾರಿ ಹಾಗೂ ಹುಬ್ಬಳ್ಳಿ–ರಾಮನಗರ–ಗೋವಾ ಹೆದ್ದಾರಿ ಕಾಮಗಾರಿ ಪೂರ್ಣಗೊಳಿಸುವುದು

ಅಭಿವೃದ್ಧಿ ವಿಚಾರದಲ್ಲಿ ನಿರ್ದಿಷ್ಟ ವಿಷಯಕ್ಕೆ ಆದ್ಯತೆ ನೀಡುವ ಮಾತು ಆಡಲಾರೆ. ಸಮಗ್ರ ಅಭಿವೃದ್ಧಿಗೆ ಒತ್ತು ನೀಡಿ ಕೆಲಸ ಮಾಡುತ್ತೇನೆ.
-ವಿಶ್ವೇಶ್ವರ ಹೆಗಡೆ ಕಾಗೇರಿ, ಸಂಸದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.