ADVERTISEMENT

ಉತ್ತರ ಕನ್ನಡ ಲೋಕಸಭಾ ಕ್ಷೇತ್ರ | ಜಯದ ಮಾಲೆ ಯಾರಿಗೆ?

ತುದಿಗಾಲಿನಲ್ಲಿ ನಿಲ್ಲಿಸಿದ ಲೋಕಸಭೆ ಚುನಾವಣೆ ಫಲಿತಾಂಶ

ಗಣಪತಿ ಹೆಗಡೆ
Published 4 ಜೂನ್ 2024, 4:20 IST
Last Updated 4 ಜೂನ್ 2024, 4:20 IST

ಡಾ.ಅಂಜಲಿ ನಿಂಬಾಳ್ಕರ

ಡಾ.ಅಂಜಲಿ ನಿಂಬಾಳ್ಕರ

ಕಾರವಾರ: ಉತ್ತರ ಕನ್ನಡ ಲೋಕಸಭಾ ಕ್ಷೇತ್ರಕ್ಕೆ ಸಂಸದರು ಯಾರಾಗಲಿದ್ದಾರೆ ಎಂಬ ಕುತೂಹಲಕ್ಕೆ ಇಂದು ತೆರೆ ಬೀಳಲಿದೆ. ಕುತೂಹಲದ ಚರ್ಚೆ ಎಲ್ಲೆಡೆ ಆರಂಭಗೊಂಡಿದೆ.

ADVERTISEMENT

ಮೇ 7 ರಂದು ಕ್ಷೇತ್ರದಲ್ಲಿ ಚುನಾವಣೆ ನಡೆದಿದೆ. ಬರೋಬ್ಬರಿ 28 ದಿನಗಳ ಬಳಿಕ ಫಲಿತಾಂಶ ಪ್ರಕಟಗೊಳ್ಳಲಿದೆ. ಸದ್ಯ ಕ್ಷೇತ್ರದ ಜನರ ಚಿತ್ತವು ಮತ ಎಣಿಕೆ ನಡೆಯುವ ಕುಮಟಾದತ್ತ ನೆಟ್ಟಿದೆ. ಪ್ರಬಲ ಪೈಪೋಟಿ ನಡೆಸಿರುವ ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳ ಪೈಕಿ ಯಾರತ್ತ ವಿಜಯಲಕ್ಷ್ಮಿ ಒಲಿಯಬಹುದು ಎಂಬ ಲೆಕ್ಕಾಚಾರದ ಕುರಿತು ಚರ್ಚೆ ನಡೆಯತೊಡಗಿದೆ.

ಬೆಳಗಾವಿ ಜಿಲ್ಲೆಯ ಕಿತ್ತೂರು ಮತ್ತು ಖಾನಾಪುರ ಕ್ಷೇತ್ರವನ್ನೂ ಒಳಗೊಂಡಂತೆ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರ ಸೇರಿರುವ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ 16.41 ಲಕ್ಷ ಮತದಾರರ ಪೈಕಿ 12.56 ಲಕ್ಷದಷ್ಟು ಮತಗಳು ಚಲಾವಣೆಗೊಂಡಿವೆ. ಒಟ್ಟಾರೆ ಶೇ 76.53 ರಷ್ಟು ಮತದಾನವಾಗಿದೆ.

ಬಿಜೆಪಿಯಿಂದ ಅನುಭವಿ ರಾಜಕಾರಣಿ ವಿಶ್ವೇಶ್ವರ ಹೆಗಡೆ ಕಾಗೇರಿ ಸ್ಪರ್ಧಿಸಿದ್ದರೆ, ಕಾಂಗ್ರೆಸ್‍ನಿಂದ ಡಾ.ಅಂಜಲಿ ನಿಂಬಾಳ್ಕರ್ ಅಭ್ಯರ್ಥಿಯಾಗಿ ಸೆಣಸಿದ್ದಾರೆ. ಕಾಗೇರಿ ಆರು ಬಾರಿ ಶಾಸಕರಾಗಿ, ಸಚಿವರಾಗಿ, ವಿಧಾನಸಭಾ ಅಧ್ಯಕ್ಷರಾಗಿದ್ದವರು. ಡಾ.ಅಂಜಲಿ ಒಂದು ಅವಧಿಗೆ ಖಾನಾಪುರದ ಶಾಸಕರಾಗಿದ್ದವರು. ಆದರೆ, ಇಬ್ಬರೂ ಇದೇ ಮೊದಲ ಬಾರಿಗೆ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ನಡೆಸಿದ್ದರು. ಹೀಗಾಗಿ ಇಬ್ಬರಲ್ಲಿ ಯಾರೇ ಗೆದ್ದರೂ ಮೊದಲ ಬಾರಿಗೆ ಸಂಸತ್ ಪ್ರವೇಶಿಸುವುದು ಖಚಿತವಾಗಿದೆ.

‘ಮೋದಿ ಅಲೆಯ ಪ್ರಭಾವ ಬಲವಾಗಿದ್ದ ಕಾರಣ ಪಕ್ಷದ ಅಭ್ಯರ್ಥಿ ಗೆಲುವು ನಿಶ್ಚಿತ. ಅಲ್ಲದೆ ಕಾಂಗ್ರೆಸ್‍ ಪಕ್ಷದೊಳಗಿನ ಆಂತರಿಕ ಕಲಹ, ಭಿನ್ನಮತದ ಪರಿಣಾಮದಿಂದ ಬಿಜೆಪಿಯತ್ತ ಹೆಚ್ಚು ಮತಗಳು ವಾಲಿವೆ. ಉತ್ತರ ಕನ್ನಡ ಕ್ಷೇತ್ರ ಬಿಜೆಪಿ ಪಾಲಿನ ಭದ್ರಕೋಟೆ ಎನಿಸಿರುವುದು ಈ ಬಾರಿಯೂ ಸಾಬೀತುಗೊಳ್ಳಲಿದೆ. ಪಕ್ಷದ ಅಭ್ಯರ್ಥಿಯು ಕನಿಷ್ಠ 1 ರಿಂದ ಒಂದೂವರೆ ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ’ ಎಂಬುದು ಬಿಜೆಪಿ ನಾಯಕರ ಅಭಿಪ್ರಾಯ.

ವಿಶ್ವೇಶ್ವರ ಹೆಗಡೆ ಕಾಗೇರಿ

‘ಬಿಜೆಪಿಯಲ್ಲಿ ಹಾಲಿ ಸಂಸದರಿಗೆ ಟಿಕೆಟ್ ತಪ್ಪಿಸಿ, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋತವರಿಗೆ ಟಿಕೆಟ್ ನೀಡಿದ್ದು ಆ ಪಕ್ಷದೊಳಗೆ ದೊಡ್ಡ ಅಸಮಾಧಾನವನ್ನು ಸೃಷ್ಟಿಸಿತ್ತು. ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ, ಅನಂತಕುಮಾರ ಹೆಗಡೆ ಪ್ರಚಾರದಿಂದ ದೂರ ಇದ್ದರು. ಇದು ಬಿಜೆಪಿಯ ಭಿನ್ನಮತವನ್ನು ಬಯಲು ಮಾಡಿತು. ಜತೆಗೆ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆ ಈ ಚುನಾವಣೆಯಲ್ಲಿ ದೊಡ್ಡ ಮಟ್ಟದಲ್ಲಿ ಪಕ್ಷದ ಕೈ ಹಿಡಿದಿದೆ. ಕನಿಷ್ಠ 60 ರಿಂದ 80 ಸಾವಿರ ಮತಗಳ ಅಂತರದಿಂದ ಡಾ.ಅಂಜಲಿ ಗೆಲ್ಲಲಿದ್ದಾರೆ’ ಎಂದು ಕಾಂಗ್ರೆಸ್ ಮುಖಂಡರೊಬ್ಬರು ವಿಶ್ವಾಸ ವ್ಯಕ್ತಪಡಿಸಿದರು.

ಪಿ.ಎಂ, ಸಿ.ಎಂ ಪ್ರಭಾವದ ನಂಬಿಕೆ

ಪ್ರಸಕ್ತ ಚುನಾವಣೆಯಲ್ಲಿ ಗೆಲುವಿಗೆ ಪ್ರಧಾನಿ ನರೇಂದ್ರ ಮೋದಿ ಪರವಾದ ಅಲೆಯನ್ನು ಬಿಜೆಪಿ ಬಲವಾಗಿ ನಂಬಿಕೊಂಡಿತ್ತು. ಸ್ವತಃ ನರೇಂದ್ರ ಮೋದಿ ಪಕ್ಷದ ಅಭ್ಯರ್ಥಿ ಪರ ಪ್ರಚಾರಕ್ಕೆ ಬಂದಿದ್ದು ಗೆಲುವಿಗೆ ನೆರವಾಗಲಿದೆ ಎಂಬುದು ಬಿಜೆಪಿಯ ಲೆಕ್ಕಾಚಾರ.

ಇನ್ನೊಂದೆಡೆ ಕಾಂಗ್ರೆಸ್ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಭಾವದ ಕುರಿತು ನಂಬಿಕೆ ಹೊಂದಿದೆ. ರಾಜ್ಯದಲ್ಲಿ ಗ್ಯಾರಂಟಿ ಯೋಜನೆ ಜಾರಿಗೆ ತರುವ ಮೂಲಕ ಹೆಸರು ಮಾಡಿರುವ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಖುದ್ದು ಜಿಲ್ಲೆಯ ಎರಡು ಕಡೆಗಳಲ್ಲಿ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿರುವುದು ಗೆಲುವಿಗೆ ವರವಾಗಬಹುದು ಎಂಬ ಲೆಕ್ಕಾಚಾರದಲ್ಲಿದೆ ಕಾಂಗ್ರೆಸ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.