ಕಾರವಾರ: ‘ಜಿಲ್ಲೆಯ ಏಳು ತಾಲ್ಲೂಕುಗಳಲ್ಲಿ ಭತ್ತ ಖರೀದಿ ಕೇಂದ್ರ ತೆರೆಯಬೇಕು ಮತ್ತು ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿಗೆ ನ.15 ರಿಂದ ರೈತರ ನೋಂದಣಿ ಪ್ರಕ್ರಿಯೆ ಆರಂಭಿಸಬೇಕು’ ಎಂದು ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ಅಧಿಕಾರಿಗಳಿಗೆ ಸೂಚಿಸಿದರು.
‘ಶಿರಸಿ, ಹಳಿಯಾಳ, ಮುಂಡಗೋಡ, ಜೊಯಿಡಾ, ಕುಮಟಾ, ಅಂಕೋಲಾ ಮತ್ತು ಭಟ್ಕಳದಲ್ಲಿ ನೋಂದಣಿ ಕೇಂದ್ರಗಳನ್ನು ಆರಂಭಿಸಬೇಕು’ ಎಂದು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿ ಸಭೆಯಲ್ಲಿ ಸೂಚನೆ ನೀಡಿದರು.
‘ಸರ್ಕಾರವು ಪ್ರಸಕ್ತ ಸಾಲಿಗೆ ಕನಿಷ್ಠ ಬೆಂಬಲ ಬೆಲ ಯೋಜನೆಯಡಿ ಸಾಮಾನ್ಯ ಭತ್ತಕ್ಕೆ ಕ್ವಿಂಟಾಲ್‍ಗೆ ₹2,300 ಹಾಗೂ ಎ ಗ್ರೇಡ್ ಭತ್ತಕ್ಕೆ ₹2,320 ನಿಗದಿಪಡಿಸಿದೆ. ಸರ್ಕಾರದಿಂದ ನೇಮಕಗೊಂಡ ಸಂಗ್ರಹಣಾ ಏಜೆನ್ಸಿಗಳು ಸರ್ಕಾರ ನಿಗದಿಪಡಿಸಿದ ಮಾನದಂಡಗಳ ಪ್ರಕಾರ ನೋಂದಣಿ, ಖರೀದಿ ಪ್ರಕ್ರಿಯೆ ನಡೆಸಬೇಕು. ಭತ್ತ ಖರೀದಿ ಹಂತದಲ್ಲಿ ಗುಣಮಟ್ಟವನ್ನು ದೃಢೀಕರಿಸಲು, ಕೃಷಿ ಇಲಾಖೆಯ ವತಿಯಿಂದ ಗ್ರೇಡರ್‌ಗಳನ್ನು ನೇಮಿಸಿಕೊಳ್ಳಬೇಕು’ ಎಂದರು.
‘ಪ್ರತಿ ಖರೀದಿ ಕೇಂದ್ರಗಳಿಗೆ ಖರೀದಿ ಅಧಿಕಾರಿಗಳನ್ನು ನೇಮಿಸಬೇಕು. ರೈತರಿಂದ ಖರೀದಿಸಿದ ಭತ್ತ ಸಂಗ್ರಹಣೆಗೆ ಗೋದಾಮುಗಳ ವ್ಯವಸ್ಥೆಯನ್ನು ಮಾಡಿಕೊಳ್ಳಬೇಕು. ರೈತರಿಗೆ ಮೂಲ ಸೌಲಭ್ಯಗಳನ್ನು ಒದಗಿಸಬೇಕು’ ಎಂದು ಸೂಚಿಸಿದರು.
‘ಭತ್ತವನ್ನು ಸರಬರಾಜು ಮಾಡಿದ ರೈತರಿಗೆ 15 ದಿನಗಳ ಒಳಗೆ ಅವರ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆ ಮಾಡಬೇಕು. ಜಿಲ್ಲೆಯಲ್ಲಿ ಸಂಗ್ರಹವಾದ ಭತ್ತವನ್ನು ಹಲ್ಲಿಂಗ್ ಮಾಡುವ ಕುರಿತಂತೆ ಅಕ್ಕಿ ಗಿರಣಿಗಳನ್ನು ನೋಂದಾವಣೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕು’ ಎಂದರು.
ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಉಪ ನಿರ್ದೇಶಕ ಮಂಜುನಾಥ್ ರೇವಣಕರ್, ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವ ಪ್ರಸಾದ್ ಗಾಂವಕರ, ವಿವಿಧ ಇಲಾಖೆಯ ಅಧಿಕಾರಿಗಳು, ಗಿರಣಿ ಮಾಲೀಕರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.