ADVERTISEMENT

ಯಲ್ಲಾಪುರ: ರೈತರ ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿ ಪ್ರತಿಭಟನೆ 20ಕ್ಕೆ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2024, 13:54 IST
Last Updated 17 ನವೆಂಬರ್ 2024, 13:54 IST
<div class="paragraphs"><p>ಪ್ರತಿಭಟನೆ</p></div>

ಪ್ರತಿಭಟನೆ

   

– ಪ್ರಜಾವಾಣಿ ಚಿತ್ರ

ಯಲ್ಲಾಪುರ: `ತಾಲ್ಲೂಕಿನ ರೈತರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರುವ ನಿಟ್ಟಿನಲ್ಲಿ ನ.20ರಂದು ಬೆಳಿಗ್ಗೆ ಪಟ್ಟಣದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿಯ ಮುಂದೆ ರೈತರ ಸಭೆ ನಡೆಸಿ, ಅಲ್ಲಿಂದ ಮೆರವಣಿಗೆಯ ಮೂಲಕ ತೆರಳಿ ತಹಶೀಲ್ದಾರ್‌ಗೆ ಮನವಿ ಸಲ್ಲಿಸಲಾಗುವುದು. ಕೆಲಕಾಲ ರಸ್ತೆತಡೆ ನಡೆಸಲಾಗುವುದು’ ಎಂದು ರೈತರ ಹಕ್ಕು ರಕ್ಷಣಾ ಸಮಿತಿ ಅಧ್ಯಕ್ಷ ಆರ್.ಕೆ.ಭಟ್ಟ ಕಿಚ್ಚುಪಾಲ ಹೇಳಿದರು.

ADVERTISEMENT

ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, `ಸೊಪ್ಪಿನ ಬೆಟ್ಟದ ಹಕ್ಕಿನ ವಿಷಯಕ್ಕೆ ಸಂಬಂಧಿಸಿದಂತೆ ರೈತರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳ ಕುರಿತು ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಈ ಹಿಂದೆ ಮನವಿ ನೀಡಲಾಗಿತ್ತು. ಒಂದು ತಿಂಗಳಲ್ಲಿ ರೈತರ ಸಭೆ  ನಡೆಸಿ ಸಮಸ್ಯೆಗಳಿಗೆ ಪರಿಹಾರ ಸೂಚಿಸುವುದಾಗಿ ತಿಳಿಸಿದ್ದರು. ಆದರೆ ಈವರೆಗೆ ಯಾವುದೇ ಸಭೆ ಕರೆದಿಲ್ಲ’ ಎಂದರು.

`ಕಂದಾಯ ಇಲಾಖೆಯಲ್ಲಿ ಖಾತಾ ಪರಿವರ್ತನೆ ವಿಷಯದಲ್ಲಿ ರೈತರಿಗೆ ತೊಂದರೆಯಾಗುತ್ತಿದೆ. ಉತ್ತರ ಕನ್ನಡ ಜಿಲ್ಲೆಯ ಭೌಗೋಳಿಕ ಸ್ಥಿತಿಯಲ್ಲಿ ರೈತರು ಸೊಪ್ಪಿನ ಬೆಟ್ಟದಲ್ಲಿ ಮನೆ ಕಟ್ಟಲು ಕಾನೂನಿನಲ್ಲಿ ಅವಕಾಶ ಇದ್ದರೂ ಅಧಿಕಾರಿಗಳು ಕಾನೂನಿನ ನೆಪ ಹೇಳಿ ತೊಂದರೆ ನೀಡುತ್ತಾರೆ. ಕಾಡು ಪ್ರಾಣಿಗಳಿಂದ ಬೆಳೆ ನಾಶಕ್ಕೆ ಸೂಕ್ತ ಪರಿಹಾರ ಸಿಗುತ್ತಿಲ್ಲ. ಸೊಪ್ಪಿನ ಬೆಟ್ಟದ ಪಹಣಿ ಪತ್ರಿಕೆಯಲ್ಲಿ ‘ಅ’ ಖರಾಬು ಅಂತ ಇರುವುದನ್ನು ‘ಬ’ ಖರಾಬು ಅಂತ ರೈತರ ಗಮನಕ್ಕೆ ತರದೆ ಬದಲಾವಣೆ ಮಾಡಲಾಗಿದೆ. ಬೆಳೆ ವಿಮೆ ಸಮರ್ಪಕ ರೀತಿಯಲ್ಲಿ ನೀಡುತ್ತಿಲ್ಲ. ರೈತರ ಬೆಳೆಗಳಿಗೆ ಯೋಗ್ಯ ದರ ಸಿಗುತ್ತಿಲ್ಲ. ಈ ಎಲ್ಲಾ ಸಮಸ್ಯೆಗಳಿಂದ ರೈತರು ಕಂಗಾಲಾಗಿದ್ದಾರೆ ' ಎಂದರು.

ಸಮಿತಿಯ ಕಾರ್ಯದರ್ಶಿ ಕೆ.ಟಿ.ಭಟ್ಟ ಗುಂಡ್ಕಲ್, ಸಹ ಕಾರ್ಯದರ್ಶಿ ಸಿ.ಟಿ.ಹೆಗಡೆ ಗೋಳಿಗದ್ದೆ, ಖಜಾಂಚಿ ನಾಗೇಂದ್ರ ಭಟ್ಟ ಲಿಂಗಭಟ್ಟರಮನೆ, ಸದಸ್ಯರಾದ ವಿ.ಎಂ.ಭಟ್ಟ, ಗಣಪತಿ ಕರೂಮನೆ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.