ಕಾರವಾರ: ಬಿಸಿಲ ಪ್ರಖರತೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಉಷ್ಣತೆಯಿಂದ ಸಂಭವಿಸಬಹುದಾದ ಕಾಯಿಲೆಗಳ ಚಿಕಿತ್ಸೆಗೆ ಮುನ್ನೆಚ್ಚರಿಕೆ ಕ್ರಮವಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿ ವಿಶೇಷ ಹಾಸಿಗೆ ವ್ಯವಸ್ಥೆ ಕಲ್ಪಿಸಲಾಗಿದೆ.
ಕ್ರಿಮ್ಸ್ ಅಧೀನದಲ್ಲಿರುವ ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ಐದು ಹಾಗೂ ತಾಲ್ಲೂಕು ಆಸ್ಪತ್ರೆಗಳಲ್ಲಿ ಎರಡರಿಂದ ಮೂರು ಹಾಸಿಗೆಯನ್ನು ಪ್ರತ್ಯೇಕವಾಗಿ ಉಷ್ಣತೆಯಿಂದ ಎದುರಾಗಬಹುದಾದ ಆರೋಗ್ಯ ಸಮಸ್ಯೆಗೆ ಚಿಕಿತ್ಸೆ ಒದಗಿಸಲು ಬಳಕೆ ಮಾಡಿಕೊಳ್ಳಲು ನಿರ್ಧರಿಸಲಾಗಿದೆ. ಇದೇ ಮೊದಲ ಬಾರಿಗೆ ಜಿಲ್ಲೆಯಲ್ಲಿ ವ್ಯಾಪಕ ಪ್ರಮಾಣದಲ್ಲಿ ಉಷ್ಣತೆಯ ವಾತಾವರಣ ಉಂಟಾಗಿದ್ದರಿಂದ ಆರೋಗ್ಯ ಇಲಾಖೆಯೂ ಚಿಂತೆಗೆ ಜಾರಿದೆ.
ಪ್ರಖರವಾದ ಬಿಸಿಲಿನಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರು, ಮಕ್ಕಳು, ವೃದ್ಧರಲ್ಲಿ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳತೊಡಗಿದ್ದು ಚಿಕಿತ್ಸೆಗೆ ಆಸ್ಪತ್ರೆಗಳ ಮೊರೆ ಹೋಗುತ್ತಿದ್ದಾರೆ. ಆದರೆ, ಸರ್ಕಾರಿ ಆಸ್ಪತ್ರೆಗಳಲ್ಲಿ ಉಷ್ಣತೆಯ ಪರಿಣಾಮದಿಂದ ಆರೋಗ್ಯ ಸಮಸ್ಯೆಗೆ ತುತ್ತಾದವರ ಮಾಹಿತಿ ಸಿಗುತ್ತಿಲ್ಲ.
‘ಸಾಮಾನ್ಯಕ್ಕಿಂತ ಅಧಿಕ ಉಷ್ಣತೆ ಜಿಲ್ಲೆಯಲ್ಲಿ ದಾಖಲಾಗುತ್ತಿದೆ. ಕರಾವಳಿ ಭಾಗದಲ್ಲಿ ಆರ್ದೃತೆ ವಾತಾವರಣ ಇರುವುದರಿಂದ ಸೆಕೆ ವಿಪರೀತವೆಂದು ಭಾಸವಾಗುತ್ತಿದೆ. ಇದರಿಂದ ಚರ್ಮ ರೋಗ ಸೇರಿದಂತೆ ಹಲವು ಕಾಯಿಲೆಗಳು ಹರಡುವ ಸಾಧ್ಯತೆ ಹೆಚ್ಚಿದೆ. ಅವುಗಳ ನಿಯಂತ್ರಣಕ್ಕೆ ಅಗತ್ಯ ಔಷಧಗಳನ್ನು ದಾಸ್ತಾನು ಮಾಡಿಕೊಂಡಿದ್ದೇವೆ. ಆದರೆ, ಸದ್ಯಕ್ಕೆ ಸರ್ಕಾರಿ ಆಸ್ಪತ್ರೆಗಳಿಗೆ ರೋಗಿಗಳು ದಾಖಲಾಗುತ್ತಿಲ್ಲ. ಸಣ್ಣ ಪುಟ್ಟ ಆರೋಗ್ಯ ಸಮಸ್ಯೆ ಇದ್ದವರು ಹೊರ ರೋಗಿ ವಿಭಾಗದಲ್ಲಿ ಚಿಕಿತ್ಸೆ ಪಡೆದು ಮರಳುತ್ತಿದ್ದಾರೆ’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ನೀರಜ್ ಬಿ.ವಿ ಹೇಳಿದರು.
‘ಉಷ್ಣತೆಯ ಜತೆಗೆ ಕೆಲವೊಂದು ಪ್ರದೇಶಗಳಲ್ಲಿ ನೀರಿನ ಕೊರತೆ ಉಂಟಾಗಿದ್ದು ಸಾರ್ವಜನಿಕರು ಕಲುಷಿತ ನೀರನ್ನು ಕುಡಿಯುವುದರಿಂದ ಸಾಂಕ್ರಾಮಿಕ ರೋಗಗಳಾದ ವಾಂತಿಭೇಧಿ, ಕಾಲರಾ, ಟೈಫಾಯ್ಡ್, ಕಾಮಾಲೆ ರೋಗಗಳು ಬರುವ ಸಾಧ್ಯತೆ ಹೆಚ್ಚು. ಸಾರ್ವಜನಿಕರು ಎಚ್ಚರದಿಂದ ಇರಬೇಕು. ಕುದಿಸಿ ಆರಿಸಿದ ನೀರನ್ನು ಸೇವಿಸುವುದರಿಂದ ಈ ಕಾಯಿಲೆಗಳನ್ನು ತಡೆಯಬಹುದು’ ಎಂದು ಜಿಲ್ಲಾ ಆಶ್ರಿತ ರೋಗವಾಹಕಗಳ ನಿಯಂತ್ರಣಾಧಿಕಾರಿ ಡಾ.ಕ್ಯಾಪ್ಟನ್ ರಮೇಶ ರಾವ್ ತಿಳಿಸಿದರು.
ಬಿಸಿಲ ಝಳದಿಂದ ಪಾರಾಗಲು ಜನರಿಗೆ ಹುಣಸೆ ಹಣ್ಣು ಬಳಸಿ ಚಿಂಚಾ ಪಾನಕ ತಯಾರಿಸಿ ಕುಡಿಯಲು ಆಯುಷ್ ಇಲಾಖೆ ಸಲಹೆ ನೀಡಿದೆ.
‘ಪ್ರಖರ ಬಿಸಿಲಿನಿಂದ ದೇಹದಲ್ಲಿ ನೀರಿನ ಅಂಶ ವಿಪರೀತ ಕಡಿಮೆಯಾಗಲಿದೆ. ಇದರಿಂದ ಜೀರ್ಣಾಂಗವ್ಯೂಹದ ಮೇಎಲ ಅಡ್ಡ ಪರಿಣಾಮ ಬೀರುವ ಸಾಧ್ಯತೆ ಹೆಚ್ಚು. ಅದನ್ನು ತಡೆಯಲು ಚಿಂಚಾ ಪಾನಕ ಸೇವನೆ ಸೂಕ್ತವಾಗಿದೆ. ಹುಣಸೆ ಹಣ್ಣು, ಬೆಲ್ಲದ ಪುಡಿ, ಜೀರಿಗೆ ಪುಡಿ, ಕಾಳು ಮೆಣಸಿನ ಪುಡಿ, ಸೈಂದವ ಲವಣ ಬಳಸಿ ಪಾನಕ ಸಿದ್ಧಪಡಿಸಿಕೊಳ್ಳಬೇಕು. ಆಗಾಗ 50 ರಿಂದ 100 ಮಿ.ಲೀ ಪಾನಕ ಸೇವನೆ ಮಾಡಬಹುದು’ ಎಂದು ಜಿಲ್ಲಾ ಆಯುಷ್ ವೈದ್ಯಾಧಿಕಾರಿ ಡಾ.ಲಲಿತಾ ಶೆಟ್ಟಿ ಸಲಹೆ ನೀಡುತ್ತಾರೆ.
ಮಧ್ಯಾಹ್ನ 12 ರಿಂದ 3 ಗಂಟೆವರೆಗೆ ಹೊರಹೋಗುವುದನ್ನು ತಪ್ಪಿಸಬೇಕು. ಈ ಅವಧಿಯಲ್ಲಿ ಶ್ರಮದಾಯಕ ಹೊರಾಂಗಣ ಚಟುವಟಿಕೆಗಳನ್ನು ಕೈಗೊಳ್ಳಬಾರದು.
ಚಪ್ಪಲಿ ಧರಿಸದೆ ಹೊರಹೋಗುವ ಅಭ್ಯಾಸವನ್ನು ತಪ್ಪಿಸಬೇಕು.
ಮಧ್ಯಾಹ್ನದ ಸಮಯದಲ್ಲಿ ಅಡುಗೆ ಮಾಡುವುದು ತಪ್ಪಿಸಬೇಕು.
ದ್ಯಪಾನ, ಟೀ , ಕಾಫಿ ಮತ್ತು ಕಾರ್ಬೊನೇಟೆಡ್ ಪಾನೀಯಗಳು ಅಥವಾ ಹೆಚ್ಚು ಸಕ್ಕರೆ ಅಂಶವನ್ನು ಹೊಂದಿದ ಪಾನೀಯಗಳಿಂದ ದೂರವಿರಬೇಕು.
ಹೆಚ್ಚು ಪ್ರೊಟೀನ್ ಭರಿತವಾದ ಹಾಗೂ ಹಳೆಯದಾದ ಆಹಾರ ಪದಾರ್ಥಗಳನ್ನು ಸೇವಿಸಬಾರದು.
ಕೆಲಸದ ಸ್ಥಳದಲ್ಲಿ ಕಾರ್ಮಿಕರಿಗೆ ಕುಡಿಯಲು ತಣ್ಣನೆಯ ನೀರಿನ ವ್ಯವಸ್ಥೆ ಮಾಡಬೇಕು.
ಪ್ರತಿ 20 ನಿಮಿಷಗಳಿಗೊಮ್ಮೆ ಒಂದು ಗ್ಲಾಸ್ ಅಥವಾ ಅದಕ್ಕಿಂತ ಹೆಚ್ಚು ನೀರು ಕುಡಿಯುವಂತೆ ಗಮನ ವಹಿಸಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.