ಕಾರವಾರ: ರಾಜ್ಯದಲ್ಲಿ ಪಡಿತರ ಸೀಮೆಎಣ್ಣೆ ಬಳಕೆಯನ್ನು ಸ್ಥಗಿತಗೊಳಿಸಿ ಎಲ್ಲ ಫಲಾನುಭವಿಗಳಿಗೆ ಅಡುಗೆ ಅನಿಲ ಸಂಪರ್ಕ ಒದಗಿಸಬೇಕು. ಇಡೀ ರಾಜ್ಯವನ್ನೇ ‘ಸೀಮೆ ಎಣ್ಣೆ ಮುಕ್ತ’ ಎಂದು ಘೋಷಿಸಬೇಕು ಎಂದು ರಾಜ್ಯ ಸರ್ಕಾರವು ಆದೇಶಿಸಿದೆ. ಇದು ಜಿಲ್ಲೆಯ ಗ್ರಾಮೀಣ ಜನರ ಅಸಮಾಧಾನಕ್ಕೆ ಕಾರಣವಾಗಿದೆ.
ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಆಯುಕ್ತರು ಸರ್ಕಾರದ ಆದೇಶವನ್ನು ಮಾರ್ಚ್ 18ರಂದು ಜಾರಿ ಮಾಡಿದ್ದಾರೆ. ಅಲ್ಲದೇ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಒಂದು ತಿಂಗಳ ಕಾಲಾವಕಾಶ ನೀಡಿದ್ದಾರೆ. ಈ ಆದೇಶವನ್ನು ಅರಣ್ಯ ಪ್ರದೇಶವೇ ಅಧಿಕವಾಗಿರುವ ಉತ್ತರ ಕನ್ನಡದಲ್ಲಿ ಜಾರಿ ಮಾಡುವುದು ಕಷ್ಟಸಾಧ್ಯ ಎನ್ನುವುದು ಹಲವರ ಅನಿಸಿಕೆಯಾಗಿದೆ.
ಜಿಲ್ಲೆಯ ಗುಡ್ಡಗಾಡು ಪ್ರದೇಶಗಳಲ್ಲಿ ಮಳೆಗಾಲದ ಜೀವನ ಬಲು ದುಸ್ತರವಾಗಿರುತ್ತದೆ. ಒಲೆಯಲ್ಲಿ ಉರುವಲು ಉರಿಸಲು, ಕುಡಿಯುವ ನೀರಿನ ಪಂಪ್‌ಸೆಟ್‌ಗಳಿಗೆ ಸೀಮೆಎಣ್ಣೆ ಬಳಕೆ ಮಾಡಲಾಗುತ್ತಿದೆ. ಇಂದಿಗೂ ವಿದ್ಯುತ್ ಇಲ್ಲದ ಸಂದರ್ಭದಲ್ಲಿ ರಾತ್ರಿ ಬೆಳಕಿಗೆ ಸೀಮೆಎಣ್ಣೆಯ ದೀಪಗಳನ್ನೇ ಉರಿಸುವ ನೂರಾರು ಕಡು ಬಡ ಕುಟುಂಬಗಳಿವೆ.
ಈ ಕಾರಣಗಳಿಂದ ಪಡಿತರ ವ್ಯವಸ್ಥೆಯಲ್ಲಿ ಸೀಮೆಎಣ್ಣೆಯ ಪೂರೈಕೆಯನ್ನು ನಿಲ್ಲಿಸಬಾರದು. ಜನರ ಒತ್ತಡಕ್ಕೆ ಮಣಿದು ಮುಂದುವರಿಸಿದರೂ ಹಂಚಿಕೆ ಮಾಡುವ ಪ್ರಮಾಣದಲ್ಲಿ ಕಡಿಮೆ ಮಾಡಬಾರದು. ಯಥಾಸ್ಥಿತಿಯನ್ನೇ ಮುಂದುವರಿಸಬೇಕು ಎಂಬುದು ಕಾರವಾರ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಪ್ರಮೀಳಾ ನಾಯ್ಕ ಅವರ ಆಗ್ರಹವಾಗಿದೆ.
ಮಾಲಿನ್ಯ ನಿಯಂತ್ರಣ ಮತ್ತು ಜನರ ಆರೋಗ್ಯದ ದೃಷ್ಟಿಯಿಂದ ಸರ್ಕಾರದ ಆದೇಶವೇನೋ ಸರಿಯಾಗಿದೆ. ಆದರೆ, ಅಡುಗೆ ಅನಿಲದ ಸಿಲಿಂಡರ್ ದರ ನಿರಂತರವಾಗಿ ಏರಿಕೆ ಕಾಣುತ್ತಿದ್ದು, ₹ 840ರ ಆಸುಪಾಸಿನಲ್ಲಿದೆ. ಕೂಲಿ ನಾಲಿ ಮಾಡಿ ಜೀವನ ನಡೆಸುವ ಬಡವರು ಕೋವಿಡ್‌ನ ಈ ಕಾಲದಲ್ಲಿ ಒಪ್ಪತ್ತಿನ ಊಟಕ್ಕೂ ಭಾರಿ ಲೆಕ್ಕಾಚಾರಮಾಡುವಂತ ಸ್ಥಿತಿಯಿದೆ. ಹಾಗಿರುವಾಗ ಅಡುಗೆ ಅನಿಲದ ಸಿಲಿಂಡರ್‌ಗಳನ್ನೇ ಕಡ್ಡಾಯವಾಗಿ ಬಳಸಬೇಕು ಎಂದು ಸರ್ಕಾರ ಮಾಡಿರುವ ಆದೇಶ ಸೂಕ್ತವಾದುದಲ್ಲ ಎನ್ನುತ್ತಾರೆ ಮಂಜುಗುಣಿಯ ರಮೇಶ ನಾಯ್ಕ.
ಸಂಪರ್ಕ ನೀಡಲು ಆದ್ಯತೆ
ಪ್ರಸ್ತುತ ಅಂತ್ಯೋದಯ ಮತ್ತು ಬಿಪಿಎಲ್ ಪಡಿತರ ಚೀಟಿದಾರರಿಗೆ ತಲಾ ಮೂರು ಲೀಟರ್, ಇತರ ಫಲಾನುಭವಿಗಳಿಗೆ ತಲಾ ಒಂದು ಲೀಟರ್ ಸೀಮೆಎಣ್ಣೆ ವಿತರಿಸಲಾಗುತ್ತಿದೆ.
‘ಸೀಮೆಎಣ್ಣೆ ಮುಕ್ತ’ ಕಾರ್ಯಕ್ರಮದಡಿ ಫಲಾನುಭವಿಗಳಿಗೆ ಸೀಮೆಎಣ್ಣೆ ಹಂಚಿಕೆಯನ್ನು ನಿಲ್ಲಿಸಿ, ಎಲ್ಲರಿಗೂ ‘ಪ್ರಧಾನ ಮಂತ್ರಿ ಉಜ್ವಲ ಯೋಜನೆ’ಯಡಿ ಅಡುಗೆ ಅನಿಲ ಸಂಪರ್ಕ ನೀಡಲು ಸರ್ಕಾರ ಸೂಚಿಸಿದೆ. ಈ ಫಲಾನುಭವಿಗಳ ಮಾಹಿತಿಯನ್ನು ಇಲಾಖೆಯ ತಂತ್ರಾಂಶದಲ್ಲಿ ‘ಅನಿಲ ಪಡಿತರ ಚೀಟಿ’ ಎಂದು ನಮೂದಿಸಲು ಸೂಚಿಸಲಾಗಿದೆ.
ಪಡಿತರ ಸೀಮೆಎಣ್ಣೆ ಪಡೆಯುವ ಅಡುಗೆ ಅನಿಲ ರಹಿತ ಫಲಾನುಭವಿಗಳ ಪಟ್ಟಿಯನ್ನು ಸಮೀಪದ ಅನಿಲ ವಿತರಕರಿಗೆ ಹಾಗೂ ತೈಲ ಕಂಪನಿಗಳ ಅಧಿಕಾರಿಗಳಿಗೆ ಒದಗಿಸಬೇಕು. ಆದ್ಯತೆ ಮೇರೆಗೆ ಅಡುಗೆ ಅನಿಲ ಸಂಪರ್ಕ ನೀಡಲು ಕ್ರಮ ವಹಿಸಬೇಕು ಎಂದು ಆದೇಶಿಸಲಾಗಿದೆ.
–––––
* ಜಿಲ್ಲೆಯ ಕುಗ್ರಾಮಗಳಲ್ಲಿ ವಿದ್ಯುತ್ ಸಮಸ್ಯೆ ಎದುರಾದಾಗ ಸೀಮೆಎಣ್ಣೆ ಬಳಕೆ ಅನಿವಾರ್ಯ. ಸರ್ಕಾರ ತನ್ನ ಆದೇಶವನ್ನು ಪುನರ್ ಪರಿಶೀಲಿಸಬೇಕು.
– ಪ್ರಮೀಳಾ ನಾಯ್ಕ, ಕಾರವಾರ ತಾ.ಪಂ ಅಧ್ಯಕ್ಷೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.