ಕಾರವಾರ: ಆನೆಗಳ ಹಾವಳಿ ನಿಯಂತ್ರಣಕ್ಕಾಗಿ ‘ಕಾರ್ಯಪಡೆ’ಗಳನ್ನು ರಚಿಸಿ ಅರಣ್ಯ ಮತ್ತು ಪರಿಸರ ಇಲಾಖೆಯು ಸೋಮವಾರ ಆದೇಶಿಸಿದೆ. ಚಿಕ್ಕಮಗಳೂರು, ಹಾಸನ, ಮೈಸೂರು ಮತ್ತು ಕೊಡಗು ಜಿಲ್ಲೆಗಳನ್ನು ಮಾತ್ರ ಪರಿಗಣಿಸಿ, ಉತ್ತರ ಕನ್ನಡವನ್ನು ಕೈಬಿಟ್ಟಿರುವುದಕ್ಕೆ ಆಕ್ಷೇಪ ವ್ಯಕ್ತವಾಗಿದೆ.
ದಾಂಡೇಲಿ ಸುತ್ತಮುತ್ತಲಿನ ದಟ್ಟಾರಣ್ಯದಿಂದ ಪ್ರತಿವರ್ಷ ವಲಸೆ ಹೋಗುವ ಕಾಡಾನೆಗಳು, ಮುಂಡಗೋಡ, ಯಲ್ಲಾಪುರ ಮತ್ತು ಹಳಿಯಾಳ ತಾಲ್ಲೂಕುಗಳಲ್ಲಿ ಕಬ್ಬು, ಭತ್ತ, ಅಡಿಕೆ, ಮೆಕ್ಕೆಜೋಳದ ಫಸಲಿನ ಮೇಲೆ ದಾಳಿ ಮಾಡುತ್ತಿವೆ. ನೆರೆಯ ಕಲಘಟಗಿ, ಹಾನಗಲ್, ಖಾನಾಪುರ ತಾಲ್ಲೂಕುಗಳ ವಿವಿಧ ಅರಣ್ಯ ವಲಯಗಳಲ್ಲಿ ಕೂಡ ಬೆಳೆ ನಾಶ ಮಾಡುತ್ತಿವೆ.
ಗಜಪಡೆಯನ್ನು ಹಿಮ್ಮೆಟ್ಟಿಸುವುದು ರೈತರಿಗೆ ಮತ್ತು ಅರಣ್ಯ ಇಲಾಖೆಗೆ ದೊಡ್ಡ ಸವಾಲಾಗುತ್ತಿದೆ ಎಂದು ಸ್ಥಳೀಯರು ಕಳವಳ ವ್ಯಕ್ತಪಡಿಸುತ್ತಾರೆ.
‘ಜಿಲ್ಲೆಯಲ್ಲಿ ಮೂರು ವರ್ಷಗಳಿಂದ ಕಾಡಾನೆಗಳ ಹಾವಳಿ ಹೆಚ್ಚಿದೆ. ಅವು ದಾಳಿ ಮಾಡಿದಾಗ ಅರಣ್ಯ ಇಲಾಖೆಯ ಸಿಬ್ಬಂದಿ ತಮ್ಮ ಸಾಮರ್ಥ್ಯ ಮೀರಿ ಕಾರ್ಯಾಚರಣೆ ಮಾಡುತ್ತಾರೆ. ಆದರೆ, ಅವರಿಗೆ ಇಲಾಖೆಯ ಇತರ ಜವಾಬ್ದಾರಿಗಳೊಂದಿಗೆ ಆನೆಗಳ ಮೇಲೆ ನಿಗಾ ಇಡುವುದು ಕಷ್ಟವಾಗುತ್ತದೆ. ಸಾರ್ವಜನಿಕರೇ ಪಟಾಕಿ ಸಿಡಿಸಿ, ಗದ್ದಲ ಎಬ್ಬಿಸಿ ಆನೆಗಳನ್ನು ಓಡಿಸಬೇಕಾಗುತ್ತಿದೆ’ ಎನ್ನುತ್ತಾರೆ ವನ್ಯಜೀವಿ ತಜ್ಞ ರವಿ.
‘ಜಿಲ್ಲೆಯಲ್ಲಿ ಸಾಮಾನ್ಯವಾಗಿ ಆಗಸ್ಟ್‌ನಲ್ಲಿ ವಲಸೆ ಶುರು ಮಾಡುತ್ತವೆ. ದಾಂಡೇಲಿಯಿಂದ ಸಾಂಬ್ರಾಣಿ ಅರಣ್ಯ ವಲಯಕ್ಕೆ ಸಾಗುವ ಒಂದು ಹಿಂಡು, ಭರ್ಚಿ ಮೂಲಕ ಖಾನಾಪುರದತ್ತ ಹೆಜ್ಜೆ ಹಾಕುತ್ತವೆ. ಭಗವತಿಯಿಂದ ಕಿರವತ್ತಿ, ಮುಂಡಗೋಡದ ಮೂಲಕ ಹೋಗುವ ಮತ್ತೊಂದು ಹಿಂಡು ಕಾತೂರಿನ ಮುಖಾಂತರ ಹಾನಗಲ್ ತಾಲ್ಲೂಕಿನ ಹೊಲಗಳಿಗೆ ತಲುಪುತ್ತವೆ. ಅದೇ ಹಿಂಡಿನಲ್ಲಿ ಮುಂಡಗೋಡದಿಂದ ಕೆಲವು ಆನೆಗಳು ಕಲಘಟಗಿ ಭಾಗಕ್ಕೆ ನಡೆಯುತ್ತವೆ’ ಎಂದು ವಿವರಿಸುತ್ತಾರೆ.
‘ಜಿಲ್ಲೆಯಲ್ಲಿ ಆನೆಗಳ ಸಂಖ್ಯೆ ಕಡಿಮೆಯಿದ್ದರೂ ಅವುಗಳಿಂದ ಆಗುತ್ತಿರುವ ಹಾನಿ ಬಹಳಷ್ಟಿದೆ. ನಾಲ್ಕು ಜಿಲ್ಲೆಗಳಲ್ಲಿ ಅವುಗಳ ಸಂಚಾರವಿದೆ. ಹಾಗಾಗಿ, ಜಿಲ್ಲೆಯಲ್ಲೂ ಆನೆ ಕಾರ್ಯಪಡೆ ರಚನೆಯಾಗುವುದು ಅತ್ಯಗತ್ಯವಾಗಿದೆ’ ಎಂದು ಅವರು ಅಭಿಪ್ರಾಯಪಡುತ್ತಾರೆ.
ಜಿಲ್ಲೆಯಲ್ಲಿ 30ರಿಂದ 40 ಆನೆಗಳು ಮಾತ್ರ ಇವೆ. ಹಾಗಾಗಿ ಕಾರ್ಯಪಡೆಯ ಅಗತ್ಯವಿಲ್ಲ ಎಂದು ನಿರ್ಧರಿಸಿರಬಹುದು ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಹೇಳುತ್ತಾರೆ.
‘ಹಾನಿ ಪ್ರಮಾಣ ಹೆಚ್ಚು’:
‘ಉತ್ತರ ಕನ್ನಡದಲ್ಲಿ ಗಜಪಡೆಯ ಹಾವಳಿಯು ಕಡಿಮೆಯಿದ್ದಂತೆ ಮೇಲ್ನೋಟಕ್ಕೆ ಕಾಣುತ್ತದೆ. ಆದರೆ, ಇಲ್ಲಿ ಅತಿಕ್ರಮಣ ಜಮೀನಿನಲ್ಲಿ ಕೃಷಿ ಹೆಚ್ಚಿದೆ. ಹಾಗಾಗಿ ಅವುಗಳ ದಾಳಿಯ ಬಗ್ಗೆ ಹೆಚ್ಚು ಪ್ರಕರಣಗಳೂ ನಮೂದಾಗುವುದಿಲ್ಲ’ ಎಂದು ವನ್ಯಜೀವಿ ತಜ್ಞರು ಹೇಳುತ್ತಾರೆ.
‘ಕಾಳಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಆನೆಗಳ ಚಲನವಲನಗಳನ್ನು ದಾಖಲಿಸಲಾಗುತ್ತದೆ. ದಾಂಡೇಲಿಯಲ್ಲೇ ಆನೆ ಕಾರ್ಯಪಡೆಯ ಕೇಂದ್ರವನ್ನು ಆರಂಭಿಸಲು ಅನುಕೂಲವಿದೆ’ ಎಂದು ಸಲಹೆ ನೀಡುತ್ತಾರೆ.
ಕಾರ್ಯಪಡೆ ಹೀಗಿರುತ್ತದೆ:
ಉಪ ಅರಣ್ಯ ಸಂರಕ್ಷಣಾಧಿಕಾರಿ ನೇತೃತ್ವದಲ್ಲಿಪ್ರತಿ ಕಾರ್ಯಪಡೆ ರಚನೆಯಾಗಲಿದೆ. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ವಲಯ ಅರಣ್ಯಾಧಿಕಾರಿ, ನಾಲ್ವರು ಉಪ ವಲಯ ಅರಣ್ಯಾಧಿಕಾರಿಗಳು, ಎಂಟು ಮಂದಿ ಅರಣ್ಯ ರಕ್ಷಕರು, 32 ಹೊರ ಗುತ್ತಿಗೆ ಸಿಬ್ಬಂದಿ ಇರುತ್ತಾರೆ. ಮೂರು ಬೊಲೆರೋ ವಾಹನಗಳು ಮತ್ತು ಬಾಡಿಗೆಗೆ ಪಡೆದ ಕ್ಯಾಂಟರ್‌ಗಳನ್ನು ಒದಗಿಸಲಾಗುತ್ತದೆ. ಸಿಬ್ಬಂದಿಗೆ ವಾಕಿಟಾಕಿ, ಬಂದೂಕು, ಪಟಾಕಿ ಮತ್ತಿತರ ಸಲಕರಣೆಗಳನ್ನು ನೀಡಲಾಗುತ್ತದೆ.
ಆನೆ ಹಾವಳಿ ಇರುವ ಪ್ರದೇಶಗಳಲ್ಲಿ ಈ ತಂಡ ಗಸ್ತು ತಿರುಗಬೇಕು. ಅವುಗಳನ್ನು ಕಾಡಿಗೆ ಹಿಮ್ಮೆಟ್ಟಲು ಕಾರ್ಯ ಪ್ರವೃತ್ತವಾಗಬೇಕು. ಅಲ್ಲದೇ ಆನೆಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ಕೊಡಬೇಕು ಎಂದು ಸರ್ಕಾರವು ಆದೇಶದಲ್ಲಿ ತಿಳಿಸಿದೆ.
ಉತ್ತರ ಕನ್ನಡದಲ್ಲಿ ಆನೆ ಕಾರ್ಯಪಡೆ ರಚನೆಯು ನಾಲ್ಕು ಜಿಲ್ಲೆಗಳಿಗೆ ಸಹಕಾರಿ. ಮುಂದಾಗುವ ಹೆಚ್ಚಿನ ಹಾನಿ ತಡೆಯಲು ಸರ್ಕಾರ ಈಗಲೇ ಕಾರ್ಯಪ್ರವೃತ್ತವಾಗಬೇಕು.
– ರವಿ, ವನ್ಯಜೀವಿ ತಜ್ಞ.
ರಾಜ್ಯದಲ್ಲಿ ಆನೆ ಕಾರ್ಯಪಡೆ ರಚನೆಯ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಳ್ಳುವೆ. ಸರ್ಕಾರದ ಮಟ್ಟದಲ್ಲಿ ಮಾತುಕತೆ ನಡೆಸುತ್ತೇನೆ.
– ಶಿವರಾಮ ಹೆಬ್ಬಾರ, ಕಾರ್ಮಿಕ ಸಚಿವ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.