ADVERTISEMENT

ಉತ್ತರ ಕನ್ನಡ | ಸಾಂಕ್ರಾಮಿಕ ಕಾಯಿಲೆ ಉಲ್ಬಣದ ಭೀತಿ

ಕಾರ್ಮಿಕರ ಕಾಲೊನಿ, ಮೀನುಗಾರಿಕೆ ಬಂದರಿನಲ್ಲಿ ನಿಗಾ

ಗಣಪತಿ ಹೆಗಡೆ
Published 3 ಜೂನ್ 2024, 5:47 IST
Last Updated 3 ಜೂನ್ 2024, 5:47 IST
ಕಾರವಾರದ ಬೈತಕೋಲದ ಮೀನುಗಾರಿಕಾ ಬಂದರಿನಲ್ಲಿ ದೋಣಿಗಳನ್ನು ಮುಚ್ಚದೆ ತೆರೆದಿಟ್ಟಿರುವುದು 
ಕಾರವಾರದ ಬೈತಕೋಲದ ಮೀನುಗಾರಿಕಾ ಬಂದರಿನಲ್ಲಿ ದೋಣಿಗಳನ್ನು ಮುಚ್ಚದೆ ತೆರೆದಿಟ್ಟಿರುವುದು    

ಕಾರವಾರ: ಬಿರು ಬೇಸಿಗೆಯಿಂದ ಬಳಲಿದ್ದ ಜನರು ಮಳೆಗಾಲಕ್ಕೆ ಎದುರು ನೋಡುತ್ತಿದ್ದಾರೆ. ಮಳೆ ಬೀಳುವ ದಿನಗಳು ಸಮೀಪಿಸಿದ್ದು ಸಾಂಕ್ರಾಮಿಕ ಕಾಯಿಲೆಗಳು ಹರಡುವ ಭೀತಿಯೂ ಎದುರಾಗಿದೆ.

ಅರಣ್ಯ ಭೂಮಿ ಹೆಚ್ಚಿರುವ ಜಿಲ್ಲೆಯಲ್ಲಿ ಅಷ್ಟಾಗಿ ಸೆಕೆಯ ವಾತಾವರಣ ಈ ಹಿಂದೆ ಇರಲಿಲ್ಲವಾದರೂ ಈ ಬಾರಿ ವಿಪರೀತ ಸೆಕೆಗೆ ಜನರು ಬಸವಳಿದಿದ್ದಾರೆ. ಭೀಕರ ಬರದಿಂದ ಆರೋಗ್ಯದಲ್ಲೂ ಏರುಪೇರಾಗಿದೆ. ಬೇಸಿಗೆಯಲ್ಲಿ ಉಂಟಾದ ಬರದ ಸ್ಥಿತಿ ಹಾಗೂ ಈಚೆಗೆ ಆಗಾಗ ಸುರಿದ ಮಳೆಯಿಂದ ರೋಗ ವಾಹಕ ಸೊಳ್ಳೆಗಳ ಉತ್ಪತ್ತಿ ಹೆಚ್ಚಿದೆ. ಇದು ರೋಗಗಳನ್ನು ಹರಡುವ ಆತಂಕಕ್ಕೆ ಎಡೆಮಾಡಿಕೊಟ್ಟಿದೆ.

ಹವಾಮಾನದಲ್ಲಿ ಉಂಟಾದ ವೈಪರಿತ್ಯದ ಪರಿಣಾಮ ಈ ಬಾರಿಯ ಮಳೆಗಾಲದಲ್ಲಿ ಸಾಂಕ್ರಾಮಿಕ ಕಾಯಿಲೆಗಳು ಜಿಲ್ಲೆಯಲ್ಲಿ ಉಲ್ಬಣಗೊಳ್ಳಬಹುದು ಎಂಬ ಎಚ್ಚರಿಕೆಯನ್ನು ಆರೋಗ್ಯ ಇಲಾಖೆ ನೀಡುತ್ತಿದೆ. ಇದಕ್ಕೆ ಪೂರಕ ಎಂಬಂತೆ ಕಳೆದ ಐದು ತಿಂಗಳ ಅವಧಿಯಲ್ಲೇ ಡೆಂಗಿ ಪ್ರಕರಣಗಳ ಸಂಖ್ಯೆ ಹೆಚ್ಚಿದೆ.

ADVERTISEMENT

ಅದರಲ್ಲಿಯೂ ಕಾರ್ಮಿಕರು ಹೆಚ್ಚು ವಾಸಿಸುವ ಸ್ಥಳಗಳಲ್ಲಿ, ಮೀನುಗಾರಿಕೆ ಬಂದರು ಪ್ರದೇಶದಲ್ಲಿ ಡೆಂಗಿ ಪ್ರಕರಣಗಳ ಸಂಖ್ಯೆ ಹೆಚ್ಚು ವರದಿಯಾಗಿದೆ. ಇಲ್ಲಿ ಮಳೆನೀರು ನಿಲ್ಲಲು ಪೂರಕ ವಾತಾವರಣ ಸೃಷ್ಟಿಯಾಗಿರುವುದು, ಜತೆಗೆ ಸ್ವಚ್ಛತೆ ಕಾಯ್ದುಕೊಳ್ಳದಿರುವುದು ಇದಕ್ಕೆ ಕಾರಣ ಎಂಬುದಾಗಿ ಅಧಿಕಾರಿಗಳು ಹೇಳುತ್ತಿದ್ದಾರೆ.

ಇನ್ನೊಂದೆಡೆ ಜಿಲ್ಲೆಯ ಬಹುತೇಕ ನಗರ, ಪಟ್ಟಣ ಮತ್ತು ಗ್ರಾಮೀಣ ಪ್ರದೇಶದಲ್ಲಿ ಚುನಾವಣೆ ನೀತಿ ಸಂಹಿತೆ ನೆಪವೊಡ್ಡಿ ಈ ಬಾರಿ ಮಳೆಗಾಲದ ಮುನ್ನೆಚ್ಚರಿಕೆ ಕ್ರಮಗಳನ್ನು ಸರಿಯಾಗಿ ಕೈಗೊಂಡಿಲ್ಲ ಎಂಬ ದೂರು ವ್ಯಾಪಕವಾಗಿದೆ. ಇದರಿಂದ ಚರಂಡಿಯಲ್ಲಿ ಸರಾಗವಾಗಿ ಮಳೆನೀರು ಹರಿದು ಹೋಗಲಾರದ ಸ್ಥಿತಿ ಉಂಟಾಗಿದೆ. ಇದೇ ವಾರದಲ್ಲಿ ಮುಂಗಾರು ಆರಂಭಗೊಳ್ಳುವ ನಿರೀಕ್ಷೆ ಇದ್ದು, ಅದಕ್ಕೆ ಮುನ್ನ ಸ್ವಚ್ಛತೆ ನಡೆಯದಿದ್ದರೆ ಸೊಳ್ಳೆ ಉತ್ಪತ್ತಿಗೆ ಪೂರಕ ವಾತಾವರಣ ನಿರ್ಮಾಣಗೊಳ್ಳಬಹುದು ಎಂಬ ಆತಂಕ ಜನರನ್ನು ಕಾಡುತ್ತಿದೆ.

ಕಾರವಾರದಲ್ಲಿ ಮಳೆನೀರು ಸರಾಗವಾಗಿ ಹರಿದು ಸಮುದ್ರ ಸೇರುವ ಕೋಣೆನಾಲಾ ರಾಜಕಾಲುವೆ ವ್ಯವಸ್ಥಿತವಾಗಿ ಹೂಳೆತ್ತಿಲ್ಲ ಎಂಬ ದೂರು ಹೆಚ್ಚಿದೆ. ಯಲ್ಲಾಪುರ, ದಾಂಡೇಲಿ, ಶಿರಸಿ ಸೇರಿದಂತೆ ಹಲವೆಡೆ ಚರಂಡಿ ಹೂಳೆತ್ತದೆ ಹಾಗೆಯೇ ಬಿಡಲಾಗಿರುವ ಆರೋಪಗಳಿವೆ.

ಕಾರವಾರದ ಬೈತಕೋಲದ ಮೀನುಗಾರಿಕಾ ಬಂದರು ಪ್ರದೇಶ, ಅಂಕೋಲಾದ ಬೇಲೆಕೇರಿ, ಬೆಳಂಬಾರ, ಹೊನ್ನಾವರದ ಕಾಸರಕೋಡ ಭಾಗದಲ್ಲಿ ಮಳೆನೀರು ನಿಲ್ಲಲು ಅನುಕೂಲ ಮಾಡಿಕೊಟ್ಟ ರೀತಿಯಲ್ಲಿ ದೋಣಿಗಳನ್ನು ತೆರೆದಿಟ್ಟು ನಿಲ್ಲಿಸಲಾಗಿದೆ. ಜತೆಗೆ ಹಾಳಾದ ರೆಫ್ರಿಜರೇಟರ್, ಪ್ಲಾಸ್ಟಿಕ್ ಟ್ರೇಗಳು, ಒಡೆದ ಬಕೆಟ್, ದೋಣಿಯ ಬಿಡಿಭಾಗಗಳನ್ನು ಮಳೆನೀರು ನಿಲ್ಲುವಂತೆ ತೆರೆದಿಡಲಾಗಿದೆ. ಇಂತಹ ಸ್ಥಳಗಳಲ್ಲಿ ಕೆಲಸ ಮಾಡುವ ಕಾರ್ಮಿಕರು, ಅದರಲ್ಲಿಯೂ ವಿಶೇಷವಾಗಿ ಹೊರರಾಜ್ಯದ ಕಾರ್ಮಿಕರು ಆರೋಗ್ಯದ ಕುರಿತು ಕಾಳಜಿ ವಹಿಸದೆ ಸಾಂಕ್ರಾಮಿಕ ರೋಗಕ್ಕೆ ತುತ್ತಾಗುತ್ತಿದ್ದಾರೆ. ಅವರಿಂದ ರೋಗ ಸುತ್ತಮುತ್ತಲಿನವರಿಗೂ ಹರಡಬಹುದು ಎಂಬ ಆತಂಕವನ್ನು ಆರೋಗ್ಯ ಇಲಾಖೆ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.

‘ಡೆಂಗಿ ಮಾತ್ರವಲ್ಲದೆ ಮಲೇರಿಯಾ, ಚಿಕುನ್ ಗುನ್ಯಾ, ಮಿದುಳು ಜ್ವರದಂತಹ ಸಾಂಕ್ರಾಮಿಕ ಕಾಯಿಲೆಗಳನ್ನು ತಡೆಯುವ ಸಲುವಾಗಿ ಕಟ್ಟೆಚ್ಚರ ವಹಿಸಲಾಗುತ್ತಿದೆ. ಮಳೆಗಾಲಕ್ಕೆ ತಿಂಗಳ ಮುಂಚಿನಿಂದಲೂ ಸಾರ್ವಜನಿಕರಿಗೆ ಮಳೆನೀರು ನಿಲ್ಲದಂತೆ ಸುರಕ್ಷತಾ ಕ್ರಮ ವಹಿಸಲು ಮನೆ ಮನೆ ಭೇಟಿ ಮೂಲಕ ಎಚ್ಚರಿಕೆ ನೀಡಲಾಗುತ್ತಿದೆ. ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಸಾಂಕ್ರಾಮಿಕ ಕಾಯಿಲೆ ನಿಯಂತ್ರಣ ಸಂಬಂಧ ಅಗತ್ಯ ಕ್ರಮಗಳ ಕುರಿತು ಚರ್ಚಿಸಿದ್ದು ಅಧೀನ ಸಿಬ್ಬಂದಿಗೆ ಸೂಚನೆ ಕೊಡಲಾಗಿದೆ’ ಎನ್ನುತ್ತಾರೆ ಜಿಲ್ಲಾ ಆಶ್ರಿತ ರೋಗವಾಹಕಗಳ ನಿಯಂತ್ರಣಾಧಿಕಾರಿ ಡಾ.ಕ್ಯಾಪ್ಟನ್ ರಮೇಶ ರಾವ್.

‘ಜಿಲ್ಲೆಯಲ್ಲಿ ಈವರೆಗೆ 64 ಡೆಂಗಿ ಪ್ರಕರಣಗಳು ವರದಿಯಾಗಿದ್ದು, ಅವುಗಳಲ್ಲಿ ಬಹುತೇಕ ಹೊರರಾಜ್ಯದಿಂದ ವಲಸೆ ಬಂದ ಕಾರ್ಮಿಕರಲ್ಲಿ ಕಾಣಿಸಿಕೊಂಡಿದೆ. ಹೀಗಾಗಿ, ಹೊರ ರಾಜ್ಯದ ಕಾರ್ಮಿಕರು ಕೆಲಸ ಮಾಡುವ ಪ್ರದೇಶಗಳಿಗೆ ಆಗಾಗ ಭೇಟಿ ನೀಡಿ ಅವರ ಆರೋಗ್ಯ ತಪಾಸಣೆ ನಡೆಸುವ ಜತೆಗೆ ಅಗತ್ಯ ಸೂಚನೆ ನೀಡುವ ಕೆಲಸ ಮಾಡುತ್ತಿದ್ದೇವೆ’ ಎಂದೂ ಹೇಳಿದರು.

‘ಮನೆಗಳ ಸುತ್ತಮುತ್ತ ಮಳೆನೀರು ನಿಲ್ಲಲು ಅವಕಾಶ ಮಾಡಿಕೊಡದಂತೆ ಜಾಗೃತಿ ಮೂಡಿಸುವ ಕೆಲಸವನ್ನು ಆಶಾ ಕಾರ್ಯಕರ್ತೆಯರ ಮೂಲಕ ಮಾಡುತ್ತಿದ್ದೇವೆ. ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿಯೂ ತಂಡ ರಚಿಸಿ ಮೀನುಗಾರಿಕಾ ಬಂದರು, ಕಾರ್ಮಿಕರ ಕಾಲೊನಿಗಳಿಗೆ ಭೇಟಿ ನೀಡಿ ಜಾಗೃತಿ ಮೂಡಿಸಲಾಗುತ್ತಿದೆ’ ಎಂದು ವಿವರಿಸಿದರು.

ಅಂಕಿ–ಅಂಶ

ಡೆಂಗಿ ಪ್ರಕರಣದ ಮಾಹಿತಿ

ವರ್ಷ;ಶಂಕಿತ ಪ್ರಕರಣ;ಮಾದರಿ ತಪಾಸಣೆ;ದೃಢಪಟ್ಟ ಪ್ರಕರಣ

2018;503;325;95

2019;591;509;125

2020;286;168;37

2021;546;385;70

2022;574;528;62

2023;834;618;105

2024 (ಮೇ 31ರ ವರೆಗೆ);904;831;64

ಮೀನು ಮಂಜುಗಡ್ಡೆ ಸಾಗಾಟಕ್ಕೆ ಬಳಸುವ ಟ್ರೇಗಳನ್ನು ಬೈತಕೋಲ ಬಂದರು ಪ್ರದೇಶದಲ್ಲಿ ಬೇಕಾಬಿಟ್ಟಿ ಎಸೆಯಲಾಗಿದ್ದು ಮಳೆನೀರು ನಿಲ್ಲಲು ಅನುಕೂಲವಾಗುವಂತಿದೆ
ಕಾರವಾರದ ಕ್ರಿಮ್ಸ್ ಹಿಂಭಾಗದಲ್ಲಿರುವ ಕಾರ್ಮಿಕರ ಕಾಲೊನಿಗೆ ಜಿಲ್ಲಾ ಆಶ್ರಿತ ರೋಗವಾಹಕಗಳ ನಿಯಂತ್ರಣಾಧಿಕಾರಿ ಡಾ.ಕ್ಯಾಪ್ಟನ್ ರಮೇಶ ರಾವ್ ನೇತೃತ್ವದ ತಂಡ ಭೇಟಿ ನೀಡಿ ಕಾರ್ಮಿಕರಿಗೆ ಸ್ವಚ್ಛತೆ ಕಾಯ್ದುಕೊಳ್ಳಲು ಸಲಹೆ ನೀಡಿತು
ಅಂಕೋಲಾದ ಬೇಲೆಕೇರಿ ಬಂದರು ಪ್ರದೇಶದಲ್ಲಿ ತೆರೆದಿಟ್ಟ ದೋಣಿಯಲ್ಲಿ ಮಳೆನೀರು ನಿಂತಿದ್ದನ್ನು ಜಿಲ್ಲಾ ಆಶ್ರಿತ ರೋಗವಾಹಕಗಳ ನಿಯಂತ್ರಣಾಧಿಕಾರಿ ಡಾ.ಕ್ಯಾಪ್ಟನ್ ರಮೇಶ ರಾವ್ ಪರಿಶೀಲಿಸಿದರು

ಬರ ಸ್ಥಿತಿ ಅತಿಯಾದ ಮಳೆಯ ಪರಿಣಾಮ ಡೆಂಗಿ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆ ಇದೆ. ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಅಗತ್ಯ ಮುನ್ನೆಚ್ಚರಿಕೆ ಕ್ರಮವಹಿಸಿದೆ.

-ಡಾ.ಕ್ಯಾಪ್ಟನ್ ರಮೇಶ ರಾವ್ ಜಿಲ್ಲಾ ಆಶ್ರಿತ ರೋಗವಾಹಕಗಳ ನಿಯಂತ್ರಣಾಧಿಕಾರಿ

ಕಾರವಾರ ನಗರ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಚರಂಡಿ ಹೂಳೆತ್ತುವ ಮಳೆಗಾಲಕ್ಕೆ ಮುನ್ನ ಸ್ವಚ್ಛತೆ ಕೆಲಸದ ಗಮನಹರಿಸಿಲ್ಲ. ಇದರಿಂದ ಸಾಂಕ್ರಾಮಿಕ ಕಾಯಿಲೆ ಹರಡಲು ಪೂರಕ ವಾತಾವರಣ ಮಾಡಿಕೊಟ್ಟಂತಾಗಿದೆ.

-ರಾಹುಲ ನಾಯ್ಕ ಕಾರವಾರ ನಿವಾಸಿ

ಯಲ್ಲಾಪುರದಲ್ಲಿ ಚರಂಡಿ ಹೂಳೆತ್ತುವ ಕೆಲಸ ನಡೆದಿಲ್ಲ. ಸೊಳ್ಳೆಗಳ ನಿಯಂತ್ರಣಕ್ಕೆ ಫಾಗಿಂಗ್ ಮಾಡಬೇಕು. -ರವಿ ದೇವಾಡಿಗ ಯಲ್ಲಾಪುರ ನಿವಾಸಿ

ಔಷಧಗಳ ದಾಸ್ತಾನು ‘ಮಳೆಗಾಲ ಆರಂಭವಾದ ಬಳಿಕ ವಾತಾವರಣದ ಏರುಪೇರಿನಿಂದ ಜ್ವರ ಶೀತ ಸೇರಿದಂತೆ ಹಲವು ರೀತಿಯ ಆರೋಗ್ಯ ಸಮಸ್ಯೆ ಜನರನ್ನು ಕಾಡುತ್ತವೆ. ಜತೆಗೆ ವಿಪರೀತ ಮಳೆಗಾಲದಲ್ಲಿ ಆರೋಗ್ಯ ಸಮಸ್ಯೆಗಳು ಕಾಡುತ್ತವೆ. ಇವುಗಳ ಚಿಕಿತ್ಸೆಗೆ ಅಗತ್ಯ ಔಷಧಗಳ ದಾಸ್ತಾನು ಮಾಡಿಟ್ಟುಕೊಳ್ಳಲಾಗಿದೆ. ಜಿಲ್ಲೆಯ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರ ತಾಲ್ಲೂಕು ಆಸ್ಪತ್ರೆ ಹಾಗೂ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗೆ ಬೇಕಿರುವ ಸೌಕರ್ಯಗಳನ್ನು ಕಲ್ಪಿಸಿಕೊಳ್ಳಲಾಗಿದೆ. ತಾಲ್ಲೂಕು ಆಸ್ಪತ್ರೆಯಲ್ಲಿ ವಿಶೇಷ ಹಾಸಿಗೆ ವ್ಯವಸ್ಥೆಯನ್ನೂ ಮಾಡಿಕೊಳ್ಳಲು ಸೂಚಿಸಲಾಗುವುದು. ಸಾಂಕ್ರಾಮಿಕ ರೋಗಗಳು ಹರಡದಂತೆ ಎಚ್ಚರ ವಹಿಸಲು ಪ್ರತಿ 15 ದಿನಗಳಿಗೊಮ್ಮೆ ಲಾರ್ವಾ ಸಮೀಕ್ಷೆ ನಡೆಸಲು ಸೂಚನೆ ನೀಡಲಾಗಿದೆ’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ನೀರಜ್ ಬಿ.ವಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.