ಶಿರಸಿ: ಜನರ ಬದುಕಿನ ಕ್ರಮವಾಗಿದ್ದ ಪಶುಸಂಗೋಪನೆ ಉದ್ಯಮದ ದಾರಿ ಹಿಡಿದ ಕಾರಣ ಜಾನುವಾರುಗಳಲ್ಲಿ ರೋಗ ಹೆಚ್ಚುತ್ತಿದೆ ಎಂದು ಧಾರವಾಡ ಕೃಷಿ ವಿಶ್ವವಿದ್ಯಾಲಯದ ನೋಡಲ್ ಅಧಿಕಾರಿ ಶ್ರೀಪಾದ ಕುಲಕರ್ಣಿ ಹೇಳಿದರು.
ಬುಧವಾರ ಇಲ್ಲಿ ಆಯೋಜಿಸಿದ್ದ ಜಾನುವಾರುಗಳ ರಾಷ್ಟ್ರೀಯ ಕೃತಕ ಗರ್ಭಧಾರಣೆ, ಕಾಲು ಬಾಯಿ ಜ್ವರ ಮತ್ತು ಕಂದು ರೋಗಗಳ ನಿಯಂತ್ರಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಜಾನುವಾರುಗಳಿಗೆ ನೀಡುವ ಆಹಾರ ಕ್ರಮ ಬದಲಾಗಿದ್ದು, ರೋಗ ಹೆಚ್ಚುತ್ತಿದೆ. ಜಾನುವಾರುಗಳ ವಿವಿಧ ರೋಗಗಳ ನಿಯಂತ್ರಿಸಲು ಲಸಿಕೆಯ ಜೊತೆಗೆ ಅವುಗಳ ಆಹಾರ ಕ್ರಮ ಬದಲಿಸುವುದು ಅಗತ್ಯವಾಗಿದೆ ಎಂದರು.
ಜಿಲ್ಲಾ ಪಂಚಾಯ್ತಿ ಸದಸ್ಯ ಬಸವರಾಜ ದೊಡ್ಮನಿ ಮಾತನಾಡಿ, ‘ರೈತರಿಗೆ ಅನುಕೂಲ ಕಲ್ಪಿಸುವ ಜೊತೆಗೆ ಆರ್ಥಿಕ ಸಬಲತೆಗೆ ಪೂರಕವಾದ ಕಾರ್ಯಕ್ರಮ ಇದಾಗಿದೆ. ಕೃತಕ ಗರ್ಭಧಾರಣೆಯಿಂದ ಹೊಸ ತಳಿಗಳ ಪರಿಚಯ, ಉತ್ಪಾದನೆ ಹೆಚ್ಚಳ ಸೇರಿದಂತೆ ವಿವಿಧ ಪ್ರಯೋಜನಗಳಿವೆ. ಹಾಗಾಗಿ ಇದರತ್ತ ರೈತರ ಗಮನ ಸೆಳೆಯಬೇಕು’ ಎಂದರು.
ಜಿಲ್ಲಾ ಪಂಚಾಯ್ತಿ ಸದಸ್ಯೆ ಉಷಾ ಹೆಗಡೆ, ಅರಣ್ಯ ಕಾಲೇಜಿನ ಡೀನ್ ಜಗದೀಶ ಮಾತನಾಡಿದರು. ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಶ್ರೀಲತಾ ಕಾಳೇರಮನೆ ಅಧ್ಯಕ್ಷತೆ ವಹಿಸಿದ್ದರು. ಪಶುವೈದ್ಯ ಗಣೇಶ ಹೆಗಡೆ ಇದ್ದರು. ಪಶು ಸಂಗೋಪನೆ ಇಲಾಖೆ ಉಪನಿರ್ದೇಶಕ ಸುಬ್ರಾಯ ಭಟ್ಟ ಪ್ರಾಸ್ತಾವಿಕವಾಗಿ ಮಾತನಾಡಿದರು. ಇಲಾಖೆ ಸಹಾಯಕ ನಿರ್ದೇಶಕ ಆರ್.ಜಿ.ಹೆಗಡೆ ಸ್ವಾಗತಿಸಿದರು. ಶ್ವೇತಾ ಬಿರಾದಾರ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.