ಶಿರಸಿ: ವೈಕುಂಠ ಏಕಾದಶಿ ನಿಮಿತ್ತ ಸೋಮವಾರ ನಗರದ ರಾಯರಪೇಟೆಯ ವೆಂಕಟರಮಣ ದೇವಾಲಯದಲ್ಲಿ ವಿಶೇಷ ಪೂಜೆ ನಡೆಯಿತು.
ಬೆಳಗಿನ ಜಾವ 4.15ಕ್ಕೆ ವೈಕುಂಠ ದ್ವಾರದ ಬಾಗಿಲು ಮುಚ್ಚಿ, ಪೂಜೆ ಮತ್ತಿತರ ಧಾರ್ಮಿಕ ವಿಧಾನಗಳನ್ನು ನೆರವೇರಿಸಲಾಯಿತು. 4.30ಕ್ಕೆ ವೈಕುಂಠ ದ್ವಾರದ ಬಾಗಿಲು ತೆರೆದಾಗ ದೇವರ ದರ್ಶನ ಪಡೆಯಲು, 2000ಕ್ಕೂ ಅಧಿಕ ಜನರು ಸರದಿಯಲ್ಲಿ ನಿಂತಿದ್ದರು. ಬೆಳಕು ಹರಿಯುವ ಮುನ್ನ ರಾಯರಪೇಟೆಯ ಬೀದಿ ಜನಜಂಗುಳಿಯಿಂದ ತುಂಬಿತ್ತು.
ವಿಶೇಷ ದೀಪಾಲಂಕಾರದಲ್ಲಿ ದೇವರ ವಿಶ್ವರೂಪ ದರ್ಶನವನ್ನು ಕಂಡು ಭಕ್ತರು ಭಾವಪರವಶರಾದರು. ವೈಕುಂಠ ದ್ವಾರವನ್ನು ಪ್ರವೇಶಿಸಿದರೆ ಮೋಕ್ಷ ಸಿಗುವುದೆಂಬ ಪ್ರತೀತಿಯಿರುವ ಹಿನ್ನೆಲೆಯಲ್ಲಿ ದ್ವಾರ ಪ್ರವೇಶಿಸಿದ ಭಕ್ತರು, ಭಗವಂತನಲ್ಲಿ ಪ್ರಾರ್ಥಿಸಿದರು. ಸಾಕ್ಷಾತ್ ತಿರುಪತಿ ವೆಂಕಟರಮಣನ ಅಲಂಕಾರದ ಮಾದರಿಯಲ್ಲೇ ಇಲ್ಲಿನ ದೇವರಿಗೆ ಅಲಂಕಾರ ಮಾಡಲಾಗಿತ್ತು. ಅರ್ಚಕ ಕಿಶೋರ ಭಟ್ಟ ನೇತೃತ್ವದಲ್ಲಿ ರವಿ ಭಟ್ಟ, ಅನಂತ ಭಟ್ಟ, ಶಾಂತಾರಾಮ ಭಟ್ಟ ಅವರು ಹೂ ಮಾಲೆ ಅಲಂಕಾರ ಮಾಡಿದ್ದರು. ಸಂಜೆ ಭಕ್ತರು ಸಹಸ್ರಾಧಿಕ ನಂದಾದೀಪ ಬೆಳಗಿದರು. ವಿದ್ಯುತ್ ದೀಪಗಳನ್ನು ಆರಿಸಿ, ಎಣ್ಣೆ ದೀಪ, ತುಪ್ಪದ ದೀಪ ಬೆಳಕಿನಲ್ಲಿ ದೇವರ ದರ್ಶನ ಪಡೆದು ಪುನೀತರಾದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.