ಕಾರವಾರ: ಇದೇ ಡಿ. 30 ರಿಂದ ಮಂಗಳೂರು ಸೆಂಟ್ರಲ್‍ನಿಂದ ಗೋವಾದ ಮಡಗಾಂವಗೆ ಸಂಚರಿಸಲಿರುವ ‘ವಂದೇ ಭಾರತ್ ಎಕ್ಸಪ್ರೆಸ್’ ರೈಲಿನ ಪ್ರಾಯೋಗಿಕ ಚಾಲನೆ ಮಂಗಳವಾರ ನಡೆದಿದ್ದು ಇದೇ ಮೊದಲ ಬಾರಿಗೆ ಈ ವಿಶೇಷ ರೈಲು ಕಾರವಾರಕ್ಕೆ ಆಗಮಿಸಿತು.
ಬೆಳಿಗ್ಗೆ 8.30ಕ್ಕೆ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಿಂದ ಹೊರಟಿದ್ದ ರೈಲು 11.45ಕ್ಕೆ ಕಾರವಾರ ರೈಲು ನಿಲ್ದಾಣ ತಲುಪಿತು. ಆದರೆ ಇಲ್ಲಿ ನಿಲುಗಡೆ ಮಾಡಲಿಲ್ಲ. ನೇರವಾಗಿ ಮಡಗಾಂವಗೆ ತಲುಪಿದ ಬಳಿಕ ಮಧ್ಯಾಹ್ನ 2 ಗಂಟೆಗೆ ಮರಳಿ ಬಂದಿತು.
ದೇಶದ ಹಲವು ನಗರಗಳನ್ನು ಸಂಪರ್ಕಿಸಲು ಸಂಚರಿಸುತ್ತಿರುವ ವಂದೇ ಭಾರತ್ ಸಾಕಷ್ಟು ಖ್ಯಾತಿ ಪಡೆದಿದೆ. ಐಷಾರಾಮಿ ಕೋಚ್‍ಗಳನ್ನು ಹೊಂದಿರುವ ರೈಲು ಸಂಪೂರ್ಣ ಸ್ವದೇಶಿ ನಿರ್ಮಿತವಾಗಿದೆ.
‘ಡಿ.30 ರಂದು ದೇಶದ ವಿವಿಧೆಡೆ ಹೊಸದಾಗಿ ವಂದೇ ಭಾರತ್ ರೈಲು ಸಂಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ. ಮಂಗಳೂರು–ಮಡಗಾಂವ ನಡುವೆ ಸಂಚರಿಸಲಿರುವ ರೈಲು ಉಡುಪಿ ಮತ್ತು ಕಾರವಾರದಲ್ಲಿ ನಿಲುಗಡೆಯಾಗಲಿದೆ. ತಾತ್ಕಾಲಿಕ ವೇಳಾಪಟ್ಟಿಯ ಅನ್ವಯ ಮಂಗಳೂರಿನಿಂದ ಬೆಳಿಗ್ಗೆ 8.30ಕ್ಕೆ ಹೊರಡುವ ರೈಲು ಕಾರವಾರಕ್ಕೆ ಮಧ್ಯಾಹ್ನ 12.10ಕ್ಕೆ ತಲುಪಲಿದೆ. ಮಡಗಾಂವದಿಂದ ಸಂಜೆ ಹೊರಡುವ ರೈಲು 6.57ಕ್ಕೆ ಪುನಃ ಕಾರವಾರಕ್ಕೆ ತಲುಪಲಿದೆ’ ಎಂದು ಕೊಂಕಣ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.