ಶಿರಸಿ: ಯಲ್ಲಾಪುರ ವಿಧಾನಸಭಾ ಕ್ಷೇತ್ರಕ್ಕೆ ಗುರುವಾರ ನಡೆದ ಉಪಚುನಾವಣೆಯಲ್ಲಿ ಹಳ್ಳಿಗರು ಮತದಾನದಲ್ಲಿ ವಿಶೇಷ ಉತ್ಸಾಹ ತೋರಿದರೆ, ಪಟ್ಟಣಿಗರು ಮಾತ್ರ ಎಂದಿನಂತೆ ನಿರಾಸಕ್ತಿ ಪ್ರದರ್ಶಿಸಿದ್ದಾರೆ.
ಯಲ್ಲಾಪುರ ತಾಲ್ಲೂಕಿನ ಬಂಕೊಳ್ಳಿ ಶಾಲೆಯ ಮತಗಟ್ಟೆಯಲ್ಲಿ ಶೇ 92.15ರಷ್ಟು ಮತದಾನವಾಗಿರುವುದು ಈ ಚುನಾವಣೆಯ ಗರಿಷ್ಠ ದಾಖಲೆ. ಕಸಳೂರು ಬೂತ್‌ನಲ್ಲಿ ಶೇ 90.94ರಷ್ಟು, ಮುಂಡಗೋಡಿನ ಆಲಳ್ಳಿ ಬೂತ್‌ನಲ್ಲಿ ಶೇ 90.80ರಷ್ಟು ಮತದಾರರು ಹಕ್ಕು ಚಲಾಯಿಸಿದ್ದಾರೆ.
ಕಾಳಮ್ಮನಗರ ಮತಗಟ್ಟೆಯಲ್ಲಿ ಕನಿಷ್ಠ ಶೇ 55.08ರಷ್ಟು ಮತದಾನವಾಗಿದೆ. ಕಾಳಮ್ಮನಗರ ದಕ್ಷಿಣ ಬೂತ್‌ನಲ್ಲಿ ಶೇ 62.20, ಯಲ್ಲಾಪುರ ದಕ್ಷಿಣ ಮತಗಟ್ಟೆಯಲ್ಲಿ ಶೇ 55.20ರಷ್ಟು, ಮಹಿಳಾಮಂಡಳ ಸಮೀಪದ ಮತಗಟ್ಟೆಯಲ್ಲಿ ಶೇ 62.43ರಷ್ಟು ಮತದಾರರು ಮಾತ್ರ ಮತ ಹಾಕಲು ಬಂದಿದ್ದಾರೆ.
ಯಲ್ಲಾಪುರ, ಮುಂಡಗೋಡ ತಾಲ್ಲೂಕುಗಳು, ಶಿರಸಿ ತಾಲ್ಲೂಕಿನ ಬನವಾಸಿ ಹೋಬಳಿ ಸೇರಿ 80ಕ್ಕೂ ಹೆಚ್ಚು ಮತಗಟ್ಟೆಗಳಲ್ಲಿ ಶೇ 80ಕ್ಕಿಂತ ಹೆಚ್ಚು ಮತದಾನವಾಗಿದೆ.
ಸೋಲು–ಗೆಲುವಿನ ಲೆಕ್ಕಾಚಾರ:ಬಿಜೆಪಿ ಕಾರ್ಯಕರ್ತರು ಪ್ರತಿ ಬೂತ್‌ನಲ್ಲಿ ಪಕ್ಷಕ್ಕೆ ಬರುವ ಮತಗಳ ಸಂಖ್ಯೆ ಲೆಕ್ಕಹಾಕಿದ್ದಾರೆ. ಪೇಜ್ ಪ್ರಮುಖರ ಮೂಲಕ ಮಾಹಿತಿ ಪಡೆದು, ಪಕ್ಷಕ್ಕೆ ಬರುವ ಖಚಿತ ಮತಗಳ ಆಧಾರದ ಮೇಲೆ, ಗೆಲುವು ಸುಲಭವಾಗಬಹುದೆಂದು ಬೀಗುತ್ತಿದ್ದಾರೆ. ಇತ್ತ ಕಾಂಗ್ರೆಸ್ ಕಾರ್ಯಕರ್ತರು ಕೂಡ, ಪಕ್ಷದ ಮೂಲ ಮತಗಳು, ಶಾಸಕ ಆರ್.ವಿ.ದೇಶಪಾಂಡೆ ಅವರ ಪ್ರಭಾವದಿಂದ ಬಂದಿರುವ ಮತಗಳು ಜೊತೆಗೆ, ಬಿಜೆಪಿ ಅತೃಪ್ತರ ಮತಗಳು ಸೇರಿದರೆ, ಕಡಿಮೆ ಅಂತರದಲ್ಲಿ ಗೆಲುವು ಲಭಿಸಬಹುದೆಂದು ವಿಶ್ಲೇಷಿಸುತ್ತಿದ್ದಾರೆ.
ವಿಶ್ರಾಂತಿಯಲ್ಲಿ ಅಭ್ಯರ್ಥಿಗಳು:ಬಿಜೆಪಿ ಅಭ್ಯರ್ಥಿ ಶಿವರಾಮ ಹೆಬ್ಬಾರ್ ಅವರು ಶುಕ್ರವಾರ ಇಡೀ ದಿನ ಯಲ್ಲಾಪುರದ ಮನೆಯಲ್ಲಿ ಕಾಲ ಕಳೆದರು. ಬೆಳಿಗ್ಗೆ ಪಕ್ಷದ ಕಾರ್ಯಕರ್ತರೊಂದಿಗೆ ಬೂತ್‌ನಲ್ಲಿ ನಡೆದಿರುವ ಮತದಾನ, ಮತದಾರರ ಒಲವು, ಪಕ್ಷಕ್ಕೆ ಬಂದಿರಬಹುದಾದ ಮತಗಳ ಮಾಹಿತಿ ಪಡೆದರು. ಮನೆಯಲ್ಲೇ ಕಾರ್ಯಕರ್ತರ ಸಭೆ ನಡೆಸಿದರು. ಆಪ್ತರು, ಬೆಂಬಲಿಗರ ಜೊತೆ ಕೆಲ ಹೊತ್ತು ಹರಟೆ ಹೊಡೆದರು. ಮಧ್ಯಾಹ್ನ ಕುಟುಂಬದ ಸದಸ್ಯರೊಂದಿಗೆ ಮನೆಯಲ್ಲೇ ಊಟ ಮಾಡಿದರು. ಆತ್ಮೀಯರು, ಪಕ್ಷದ ಕಾರ್ಯಕರ್ತರ ದೂರವಾಣಿ ಕರೆಗಳನ್ನು ಸ್ವತಃ ಸ್ವೀಕರಿಸಿದ ಹೆಬ್ಬಾರ್, ಚುನಾವಣೆಯ ಭಾರ ಕಳೆದು ನಿರಾಳರಾದವರಂತೆ, ಖುಷಿಯಿಂದ ನಗುತ್ತ ಮಾತನಾಡಿದರು.
ಕಳೆದ 15–20 ದಿನಗಳಿಂದ ಬಿಡುವಿಲ್ಲದೇ ತಿರುಗಾಟ ಮಾಡುತ್ತಿದ್ದ ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ ಅವರು ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು, ತೋಟದ ಮನೆಯಲ್ಲಿ ಕಾಲ ಕಳೆದರು. ಅವರು ದೂರವಾಣಿ ಕರೆಗೂ ಲಭ್ಯರಾಗಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.