ADVERTISEMENT

ಸದಾಶಿವಗಡದ ಸಾವರ್‌ಪೈಯಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂಗೆ ಪರ-ವಿರೋಧ

ಸದಾಶಿವಗಡದ ತಾರಿವಾಡದಲ್ಲಿ ನಡೆದ ಗ್ರಾಮಸ್ಥರ ಸಭೆಯಲ್ಲಿ ಮೂಡದ ಸ್ಪಷ್ಟ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2021, 13:40 IST
Last Updated 1 ಏಪ್ರಿಲ್ 2021, 13:40 IST
ಕಾರವಾರ ತಾಲ್ಲೂಕಿನ ಸದಾಶಿವಗಡದ ತಾರಿವಾಡದಲ್ಲಿ ಗುರುವಾರ ನಡೆದ ಗ್ರಾಮಸ್ಥರ ಸಭೆಯಲ್ಲಿ ಕಾಂಗ್ರೆಸ್ ಮುಖಂಡ ಸತೀಶ ಸೈಲ್ ಮಾತನಾಡಿದರು
ಕಾರವಾರ ತಾಲ್ಲೂಕಿನ ಸದಾಶಿವಗಡದ ತಾರಿವಾಡದಲ್ಲಿ ಗುರುವಾರ ನಡೆದ ಗ್ರಾಮಸ್ಥರ ಸಭೆಯಲ್ಲಿ ಕಾಂಗ್ರೆಸ್ ಮುಖಂಡ ಸತೀಶ ಸೈಲ್ ಮಾತನಾಡಿದರು   

ಕಾರವಾರ: ತಾಲ್ಲೂಕಿನ ಸದಾಶಿವಗಡದ ಸಾವರ್‌ಪೈಯಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣ ಸಂಬಂಧ ಗ್ರಾಮಸ್ಥರು ಗುರುವಾರ ತಾರಿವಾಡದಲ್ಲಿ ಸಭೆ ನಡೆಸಿದರು. ಹಲವರಿಂದ ಪರ ಮತ್ತು ವಿರೋಧದ ಅಭಿಪ್ರಾಯಗಳು ವ್ಯಕ್ತವಾದವು.

ಕಾಂಗ್ರೆಸ್ ಮುಖಂಡ ಸತೀಶ ಸೈಲ್, ‘ಸ್ಟೇಡಿಯಂ ನಿರ್ಮಾಣದಿಂದ ಇಡೀ ಪ್ರದೇಶದ ಅಭಿವೃದ್ಧಿ ಸಾಧ್ಯವಾಗುತ್ತದೆ. ಸ್ಥಳೀಯರ ಒಂದಿಂಚೂ ಜಮೀನನ್ನು ಕಾಮಗಾರಿಗೆ ಪಡೆಯುವುದಿಲ್ಲ. ಸ್ಟೇಡಿಯಂನಿಂದಾಗಿ ಪ್ರವಾಸೋದ್ಯಮ ಚಟುವಟಿಕೆಗಳಿಗೂ ಉತ್ತೇಜನ ಸಿಗಲಿದೆ. ಹಾಗಾಗಿ ದಯವಿಟ್ಟು ಎಲ್ಲರೂ ಸಹಮತ ವ್ಯಕ್ತಪಡಿಸಬೇಕು’ ಎಂದು ಮನವಿ ಮಾಡಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಗ್ರಾಮಸ್ಥರು, ‘ಸಾವಿರಾರು ಜನ ಕ್ರಿಕೆಟ್ ಸ್ಟೇಡಿಯಂಗೆ ಬರುತ್ತಾರೆ. ಅವರ ವಾಹನಗಳನ್ನು ನಿಲ್ಲಿಸಲು ಎಲ್ಲಿ ವ್ಯವಸ್ಥೆ ಮಾಡುತ್ತಾರೆ? ಗ್ರಾಮಸ್ಥರಿಗೆ ಭದ್ರತೆ ಯಾರು ಕೊಡುತ್ತಾರೆ? ಕಾಮಗಾರಿಯ ಸಂದರ್ಭದಲ್ಲಿ ಕಲ್ಲು, ಬಂಡೆಗಳನ್ನು ತೆರವು ಮಾಡಲು ಸ್ಫೋಟಕಗಳನ್ನು ಬಳಸಿ, ಕಲ್ಲುಗಳು ಉರುಳಿ ಮನೆ ಮೇಲೆ ಬಿದ್ದರೆ ಯಾರು ಜವಾಬ್ದಾರಿ ತೆಗೆದುಕೊಳ್ಳುತ್ತಾರೆ’ ಎಂದು ಪ್ರಶ್ನಿಸಿದರು.

ADVERTISEMENT

‘ನಾವು ಕ್ರಿಕೆಟ್ ಸ್ಟೇಡಿಯಂಗೆ ವಿರೋಧ ವ್ಯಕ್ತಪಡಿಸುವುದಿಲ್ಲ. ಆದರೆ, ಅದರ ನಿರ್ಮಾಣಕ್ಕೆ ಆಯ್ಕೆ ಮಾಡಲು ಉದ್ದೇಶಿಸಿರುವ ಸ್ಥಳ ಸೂಕ್ತವಾದುದಲ್ಲ ಎಂಬ ಅಭಿಪ್ರಾಯ ನಮ್ಮದು. ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯವರು ಬೇರೆ ಕಡೆ ಖಾಸಗಿ ಜಮೀನನ್ನು ಖರೀದಿಸಿ, ಸ್ಟೇಡಿಯಂನಿರ್ಮಾಣ ಮಾಡಲಿ. ಆದರೆ, ಸಾವರ್‌ಪೈಯ ಗೋಮಾಳದಲ್ಲಿ ಕೋಟೆಯ ಕುರುಹುಗಳಿವೆ. ಐತಿಹಾಸಿಕ ಜಾಗವನ್ನು ರಕ್ಷಿಸಿ ಮುಂದಿನ ಪೀಳಿಗೆಯವರಿಗೆ ಅರಿವು ಮೂಡಿಸಬೇಕು’ ಎಂದು ಒತ್ತಾಯಿಸಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಸತೀಶ ಸೈಲ್, ‘ಕರಾವಳಿ ಉತ್ಸವಕ್ಕೆ ಸುಮಾರು 80 ಸಾವಿರ ಜನ ಬಂದಾಗ ಅವರ ವಾಹನಗಳ ಪಾರ್ಕಿಂಗ್, ಭದ್ರತೆಯ ವ್ಯವಸ್ಥೆಯನ್ನು ಜಿಲ್ಲಾಡಳಿತ ನೋಡಿಕೊಳ್ಳುತ್ತದೆ. ಇಲ್ಲೂ ಹಾಗೇ ಆಗುತ್ತದೆ. ಅಲ್ಲದೇ ಜಿಲ್ಲಾಡಳಿತಕ್ಕೆ ವಿಧಿಸಿದ ಷರತ್ತಿನಲ್ಲಿ ಈ ಎಲ್ಲ ಅಂಶಗಳಿವೆ. ಜೊತೆಗೇ ಸ್ಥಳೀಯರಿಗೇ ಉದ್ಯೋಗ ನೀಡಬೇಕು ಎಂದೂ ಒಪ್ಪಂದ ಮಾಡಬಹುದು’ ಎಂದರು.

‘ಗೋವಾದಲ್ಲಿ ಪ್ರವಾಸೋದ್ಯಮ ಯಾವ ರೀತಿ ಅಭಿವೃದ್ಧಿಯಾಗಿದೆ ಎಂದು ನಮಗೆಲ್ಲ ಗೊತ್ತಿದೆ. ಅದಕ್ಕಿಂತ ಹೆಚ್ಚಿನ ಅವಕಾಶಗಳು ಕಾರವಾರದಲ್ಲಿವೆ. ಆ ರಾಜ್ಯದ ಪ್ರವಾಸೋದ್ಯಮಕ್ಕೆ ಆದಾಯ ಬರುತ್ತಿರುವುದೂ ನಮ್ಮಿಂದ. ಅಲ್ಲಿನ ಉದ್ಯಮಗಳಲ್ಲಿ ಕೆಲಸ ಮಾಡುವವರೂ ನಮ್ಮವರೇ. ಅದರ ಬದಲು ಇಲ್ಲೇ ಇರುವ ಅವಕಾಶಗಳನ್ನು ಬಳಸಿಕೊಳ್ಳಬಹುದು’ ಎಂದು ಮನವಿ ಮಾಡಿದರು.

ಸಭೆಯಲ್ಲಿ ಪರ ವಿರೋಧದ ಚರ್ಚೆ ಮುಂದುವರಿದು ಸ್ಪಷ್ಟವಾದ ನಿರ್ಧಾರಕ್ಕೆ ಬರಲು ಸಾಧ್ಯವಾಗಲಿಲ್ಲ. ಹಾಗಾಗಿ, ಸ್ಟೇಡಿಯಂ ನಿರ್ಮಾಣದ ಬಗ್ಗೆ ಗ್ರಾಮ ಪಂಚಾಯಿತಿಗಳಲ್ಲಿ ಠರಾವು ಮಾಡುವಂತೆ ಸೈಲ್ ಸಲಹೆ ನೀಡಿದರು.

ಪತ್ರಕರ್ತ ಗಂಗಾಧರ ಹಿರೇಗುತ್ತಿ, ಪ್ರಮುಖರಾದ ಸದಾನಂದ ನಾಯಕ, ಪ್ರಭಾಕರ ಮಾಳ್ಸೇಕರ್, ರಾಮ ನಾಯ್ಕ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.