ಸಿದ್ದಾಪುರ: ಭಾರತೀಯ ಸೈನ್ಯದಲ್ಲಿ 17 ವರ್ಷ ಕರ್ತವ್ಯ ನಿರ್ವಹಿಸಿ ನಿವೃತ್ತಿಯಾದ ಸೈನಿಕರೊಬ್ಬರನ್ನು ತಾಲ್ಲೂಕಿನ ಬೇಡ್ಕಣಿ ಗ್ರಾಮ ಪಂಚಾಯಿತಿಯ ಕಲಕೈನಲ್ಲಿ ಮಂಗಳವಾರ ಅದ್ಧೂರಿಯಾಗಿ ಬರ ಮಾಡಿಕೊಳ್ಳಲಾಯಿತು.
ಯೋಧ ಷಣ್ಮುಖ ಗೌಡ ಏ.1ರಂದು ನಿವೃತ್ತರಾಗಿ ಸ್ವ ಗ್ರಾಮಕ್ಕೆ ಮರಳಿದ್ದರು. ಈ ವೇಳೆ ಸ್ಥಳೀಯರು ಅವರಿಗೆ ಹೂ ಹಾರ ಹಾಕಿ ಪುಷ್ಪವೃಷ್ಟಿ ಮಾಡಿ ಗೌರವಿಸಿದರು. ಅವರ ಪತ್ನಿ ಹಾಗೂ ಮಗಳು ಕೂಡ ಉಡುಗೊರೆ ನೀಡಿದರು. ಸ್ವಗ್ರಾಮಕ್ಕೆ ಮರಳಿದಾಗ ಬೇಡ್ಕಣಿ ಶಾಲಾ ವಿದ್ಯಾರ್ಥಿಗಳು, ವಿವಿಧ ಸಂಘಟನೆಗಳ ಕಾರ್ಯಕರ್ತರು, ಸ್ಥಳೀಯರು ಹೆಮ್ಮೆಯಿಂದ ಸ್ವಾಗತಿಸಿದರು.
ಷಣ್ಮುಖ ಗೌಡ ಅವರು 2005ರಮಾರ್ಚ್ ತಿಂಗಳಲ್ಲಿ ಸೈನ್ಯಕ್ಕೆ ಸೇರ್ಪಡೆಯಾಗಿದ್ದರು. ಉತ್ತರಪ್ರದೇಶದ ಲಖನೌದಲ್ಲಿ ಕರ್ತವ್ಯ ಪ್ರಾರಂಭಿಸಿದ ಅವರು, ರಾಜಸ್ಥಾನದ ಬರ್ಮರ್, ಪಂಜಾಬ್‌ನ ಜಲಂಧರ್, ಜಮ್ಮು ಮತ್ತು ಕಾಶ್ಮೀರ, ಅಹಮದಾಬಾದ್, ಅಸ್ಸಾಂ, ಅರುಣಾಚಲ ಪ್ರದೇಶಗಳಲ್ಲಿ ನಿಯೋಜನೆಗೊಂಡಿದ್ದರು.
ತವರಿನ ಜನರ ಅಭಿಮಾನವನ್ನು ಕಂಡು ಷಣ್ಮುಖ ಗೌಡ ಅಚ್ಚರಿಗೊಂಡರು. ಚಿಕ್ಕ ಊರಿನಲ್ಲೂ ಎಲ್ಲರೂ ಸೇರಿ ಅದ್ಧೂರಿಯಾಗಿ ಸ್ವಾಗತಿಸಿದ್ದು ಸಂತಸ ತಂದಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.