ಶಿರಸಿ: ಹವಾಮಾನ ವೈಪರಿತ್ಯದ ಜತೆ ಶಿಲೀಂದ್ರ, ದುಂಡಾಣು, ಫೈಟೋಪ್ಲಾಸ್ಮ ರೋಗಾಣುಗಳಿಂದ ಬಾಧಿತ ಅಡಿಕೆ ಮರಗಳಿಗೆ ಈಗ ತೀವ್ರ ತರದಲ್ಲಿ ವಿಸ್ತರಿಸುವ ವೈರಸ್ ಬಾಧೆ ಕಾಣಿಸಿಕೊಂಡಿದೆ. ಇದು ರೈತರನ್ನು ಆತಂಕಗೊಳ್ಳುವಂತೆ ಮಾಡಿದೆ.
ತಾಲ್ಲೂಕಿನ ಪೂರ್ವಭಾಗದ ತೋಟಗಳಲ್ಲಿ ಇದೇ ಮೊದಲ ಬಾರಿ ಕಂಡುಬಂದ ವೈರಸ್ ರೋಗವನ್ನು ‘ರಿಂಗ್ ಸ್ಪಾಟ್ ಡಿಸೀಸ್’ ಎಂದು ತೋಟಗಾರಿಕೆ ತಜ್ಞರು ಗುರುತಿಸಿದ್ದಾರೆ.
ಕೊಳೆರೋಗ, ಎಲೆ ಚುಕ್ಕಿರೋಗಗಳಿಂದ ಕಂಗೆಟ್ಟಿರುವ ಅಡಿಕೆ ಬೆಳೆಗಾರರಿಗೆ ಹೊಸ ರೋಗದ ಭೀತಿ ಗಾಯದ ಮೇಲೆ ಬರೆ ಎಳೆದಂತಾಗಿದೆ. ಹೊಸ ಅಡಿಕೆ ಗಿಡಗಳ ಜತೆ ಹಳೆಯ ಮರಗಳಲ್ಲೂ ಈ ರೋಗ ಕಾಣಿಸಿಕೊಂಡಿದೆ. ವೈರಸ್ ಬಾಧಿತ ಎಲೆಗಳಲ್ಲಿ ಹಸುರು ಸೋಗೆಗಳಲ್ಲಿ ಮಚ್ಚೆ ರೀತಿಯಾಗಿ ಹಳದಿ ಗುರುತು ಕಾಣಿಸಿಕೊಳ್ಳುತ್ತದೆ. ವೈರಸ್‌ಗಳು ಹರಿತ್ತನ್ನು ತಿನ್ನುತ್ತಾ ಹೋಗುತ್ತವೆ. ಇದರಿಂದ ಅಡಿಕೆ ಮರಗಳ ಎಲೆಗಳು ಸೊರಗಿ ಮರ ಸಾಯುವ ಪರಿಸ್ಥಿತಿ ಉಂಟಾಗುತ್ತಿದೆ.
‘ಲಂಡಕನಹಳ್ಳಿ, ಗೋಣೂರು, ದಾಸನಕೊಪ್ಪ, ಅಂಡಗಿ, ಬನವಾಸಿ ಸೇರಿ 50 ಎಕರೆಗೂ ಹೆಚ್ಚು ತೋಟ ಪ್ರದೇಶದಲ್ಲಿ ರೋಗ ವ್ಯಾಪಕವಾಗಿದೆ. ಅಕ್ಕಪಕ್ಕದ ತೋಟಗಳಲ್ಲಿ ರೋಗ ಲಕ್ಷಣ ಕಾಣಿಸಿಕೊಂಡಿದ್ದು, ಬೆಳೆಗಾರರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಎಲೆಗಳನ್ನು ಗಮನಿಸಿದರೆ ಎಲೆಚುಕ್ಕಿ ರೋಗವೆಂದೇ ಭಾವಿಸಿದ್ದೆವು. ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲು ಸಾಧ್ಯವಾಗಿರಲಿಲ್ಲ. ಹೀಗಾಗಿ ರೋಗ ಉಲ್ಬಣಿಸುತ್ತಿದೆ’ ಎನ್ನುತ್ತಾರೆ ಗೋಣೂರಿನ ಅಡಿಕೆ ಬೆಳೆಗಾರ ಸಹದೇವ ಕೊರಗರ.
‘ವೈರಸ್ ರೋಗವು ಬಹುಬೇಗನೆ ತೋಟದಿಂದ ತೋಟಕ್ಕೆ ಹರಡುತ್ತದೆ. ಈ ವೈರಸ್ ಹರಡಬೇಕಾದರೆ ವಾಹಕವಾಗಿ ಯಾವುದಾದರೂ ಕೀಟ ಬೇಕಾಗುತ್ತದೆ. ರಿಂಗ್‌ಸ್ಪಾಟ್ ವೈರಸ್ ಹರಡುವ ಕೀಟ ಯಾವುದು ಎನ್ನುವ ಬಗ್ಗೆ ಇನ್ನೂ ಖಚಿತ ಮಾಹಿತಿ ಇಲ್ಲ. ಮೀಲಿ ಬಗ್ ಎನ್ನುವ ಬಿಳಿ ಕೀಟವಿರಬಹುದು ಎನ್ನುವ ಶಂಕೆಯಷ್ಟೇ ಇದೆ. ಪೂರಕ ಮಾದರಿ ಸಂಗ್ರಹಿಸಿ ತೋಟಗಾರಿಕೆ ಕಾಲೇಜಿನಲ್ಲಿ ಆರ್‌ಟಿಪಿಸಿಆರ್ ಪರೀಕ್ಷೆಗೆ ಒಳಪಡಿಸಲಾಗಿತ್ತು. ಇದು ಅರೆಪಾ ವೈರಸ್ ವರ್ಗಕ್ಕೆ ಸೇರಿದ ಹೊಸ ನೆಕ್ರೋಟಿಕ್ ರಿಂಗ್ ಸ್ಪಾಟ್ ವೈರಸ್ 2 (ಎಎನ್‌ಆರ್‌ಎಸ್‌ವಿ2) ಎಂದು ದೃಢಪಟ್ಟಿದೆ’ ಎಂಬುದಾಗಿ ತೋಟಗಾರಿಕಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಸತೀಶ ಹೆಗಡೆ ಹೇಳುತ್ತಾರೆ.
ಇದೊಂದು ವೈರಸ್ ರೋಗವಾಗಿದ್ದು ಅದರ ಲಕ್ಷಣ ಹಾಗೂ ಪರಿಣಾಮಗಳ ಬಗ್ಗೆ ಇನ್ನೂ ಸರಿಯಾದ ಮಾಹಿತಿಯಿಲ್ಲ. ರೋಗಗ್ರಸ್ತ ಮರಗಳ ನಿರ್ಮೂಲನೆ ಮತ್ತು ರೋಗವಾಹಕ ಕೀಟಗಳ ನಿಯಂತ್ರಣವಷ್ಟೇ ಸದ್ಯಕ್ಕಿರುವ ಪರಿಹಾರ ಕ್ರಮವಿನಾಯಕ ಹೆಗ್ಡೆ ಸಿಪಿಸಿಆರ್‌ಐ ವಿಜ್ಞಾನಿ
ವೈರಸ್ ಬಾಧಿತ ಗರಿಗಳನ್ನು ಕತ್ತರಿಸಿ ನಾಶ ಮಾಡಿ ಇಮಿಡಾಕ್ಲೋರೋಫಿಡ್ 0.75 ಮೀಲಿ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. ವಾರದ ನಂತರ ಥಯೋಮೆತಾಕ್ಸಮ್ 0.50 ಗ್ರಾಂ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. ರೋಗಬಾಧಿತ ತೋಟಗಳ ಬೀಜಗಳನ್ನು ಸಸಿಗಳನ್ನು ಇತರ ತೋಟದಲ್ಲಿ ಬಳಸಬಾರದುಸತೀಶ ಹೆಗಡೆ ತೋಟಗಾರಿಕಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.