ಶಿರಸಿ: ‘ಕಾರ್ಯಕರ್ತರು ಪಕ್ಷದ ನಿಜವಾದ ಆಸ್ತಿ. ಈಚಿನ ಚುನಾವಣೆಗಳಲ್ಲಿ ಬಿಜೆಪಿ ಗೆಲುವಿಗೆ ಕ್ರಿಯಾಶೀಲ ಕಾರ್ಯಕರ್ತರು ಕಾರಣ. ಸಂಘಟನಾ ಪರ್ವ ಯಶಸ್ಸಿಗೆ ಪಕ್ಷದ ಹಿರಿಯರು ಹಾಕಿಕೊಟ್ಟ ಮಾರ್ಗದಲ್ಲಿ ಎಲ್ಲರೂ ಕೆಲಸ ಮಾಡಬೇಕು’ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ನಗರದ ದೀನ್ ದಯಾಳ್ ಸಭಾಭವನದಲ್ಲಿ ಶನಿವಾರ ನಡೆದ ಶಿರಸಿ ನಗರ ಮಂಡಲದ ಸಂಘಟನಾ ಪರ್ವ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ‘ಸಂಘಟನೆಯ ವಿವಿಧ ಹಂತಗಳನ್ನು ಬೂತ್ ಮಟ್ಟದಿಂದಲೇ ಪಕ್ಷದ ಸಂವಿಧಾನ ಮತ್ತು ಆಶಯದಂತೆ ಗಟ್ಟಿಗೊಳಿಸುವಲ್ಲಿ ಪ್ರಮುಖರು ಕಾರ್ಯ ಪ್ರವೃತ್ತರಾಗಬೇಕು ಎಂದರು.
‘ಮಹಿಳೆಯರು ಹಾಗೂ ಯುವಕರು ಬಿಜೆಪಿ ಸದಸ್ಯರಾಗಿ ನೋಂದಣಿಯಾಗುವ ಮೂಲಕ ದೇಶವನ್ನು ಮುನ್ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರ ಕೈಯನ್ನು ಬಲಪಡಿಸಬೇಕು. ರಾಜಕೀಯ ಕ್ಷೇತ್ರದಲ್ಲಿ ಮಹಿಳೆಯರಿಗೆ ಶೇ33ರಷ್ಟು ಅವಕಾಶವನ್ನು ಕಲ್ಪಿಸುತ್ತಿರುವ ಆಶಯಕ್ಕೆ ಪೂರಕವಾಗಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಸದಸ್ಯರಾಗಿ ಮುಖ್ಯ ವಾಹಿನಿಯಲ್ಲಿ ಕ್ರಿಯಾಶೀಲವಾಗಿ ಗುರುತಿಸಿಕೊಳ್ಳಬೇಕು’ ಎಂದರು.
ಇದೇ ವೇಳೆ ಬೂತ್ ಮಟ್ಟದಲ್ಲಿ ಸಂಘಟನೆ ಬಲಗೊಳಿಸಲು ಶಕ್ತಿಕೇಂದ್ರ ಸಂಘಟನಾ ಸಹಯೋಗಿ ನೇಮಿಸಿ ಆದೇಶಿಸಲಾಯಿತು. ಬಿಜೆಪಿ ಶಿರಸಿ ನಗರ ಮಂಡಲ ಅಧ್ಯಕ್ಷ ಆನಂದ ಸಾಲೇರ್ ಹಾಗೂ ಮಂಡಲ ಪ್ರಭಾರಿ ಚಂದ್ರಕಲಾ ಭಟ್ ಕಾರ್ಯಾಗಾರ ನಡೆಸಿಕೊಟ್ಟರು.
ನಗರಸಭೆ ಅಧ್ಯಕ್ಷೆ ಶರ್ಮಿಳಾ ಮಾದನಗೇರಿ, ಉಪಾಧ್ಯಕ್ಷ ರಮಾಕಾಂತ ಭಟ್, ಸ್ಥಾಯಿ ಸಮಿತಿ ಅಧ್ಯಕ್ಷ ಕುಮಾರ ಬೋರ್ಕರ್, ಸಂಘಟನಾ ಪರ್ವ ಪ್ರಮುಖ ನಂದನ ಸಾಗರ್, ಪ್ರಧಾನ ಕಾರ್ಯದರ್ಶಿ ನಾಗರಾಜ ನಾಯ್ಕ, ಮಹಾಂತೇಶ್ ಹಾದಿಮನಿ, ನಗರಸಭೆ ಸದಸ್ಯರು, ಮೋರ್ಚಾ ಪದಾಧಿಕಾರಿಗಳು, ಜಿಲ್ಲಾ ಪದಾಧಿಕಾರಿಗಳು, ಶಕ್ತಿಕೇಂದ್ರ ಪ್ರಮುಖರು ಹಾಗೂ ಕಾರ್ಯಕರ್ತರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.