ಕಾರವಾರ: ಟಿವಿ, ಟ್ಯಾಬ್, ಮೊಬೈಲ್‍ಗಳ ಅತಿಯಾದ ಬಳಕೆಯೂ ಸೇರಿದಂತೆ ನಾನಾ ಕಾರಣದಿಂದ ಜಿಲ್ಲೆಯ ಮಕ್ಕಳಲ್ಲಿ ದೃಷ್ಟಿ ದೋಷ ಸಮಸ್ಯೆ ಹೆಚ್ಚುತ್ತಿದೆ. ಆರೋಗ್ಯ ಇಲಾಖೆಯ ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದಡಿ (ಆರ್.ಬಿ.ಎಸ್.ಕೆ) ಕೈಗೊಂಡ ತಪಾಸಣೆ ವೇಳೆ ಇದು ದೃಢಪಟ್ಟಿದೆ.
ಕಳೆದ ಏಳು ತಿಂಗಳ ಅವಧಿಯಲ್ಲೇ 1 ರಿಂದ 10ನೇ ತರಗತಿವರೆಗಿನ (6 ರಿಂದ 16 ವರ್ಷ ವಯೋಮಿತಿ) 2,039 ವಿದ್ಯಾರ್ಥಿಗಳಲ್ಲಿ ಕಣ್ಣಿನ ಗಂಭೀರ ಸಮಸ್ಯೆ ಇರುವುದು ದೃಢಪಟ್ಟಿದ್ದು, ಅವರಿಗೆ ದೃಷ್ಟಿ ಸುಧಾರಣೆಗೆ ಕನ್ನಡಕ ವಿತರಿಸಲು ವೈದ್ಯರು ಶಿಫಾರಸ್ಸು ಮಾಡಿರುವುದಾಗಿ ಆರೋಗ್ಯ ಇಲಾಖೆ ಹೇಳುತ್ತಿದೆ.
2022–23ನೇ ಸಾಲಿನಲ್ಲಿ 2,233 ಹಾಗೂ 2023–24ನೇ ಸಾಲಿನಲ್ಲಿ 1,290 ವಿದ್ಯಾರ್ಥಿಗಳಲ್ಲಿ ದೃಷ್ಟಿ ದೋಷ ಕಾಣಿಸಿಕೊಂಡಿತ್ತು. ಅವರಿಗೆ ಉಚಿತವಾಗಿ ಕನ್ನಡಕವನ್ನು ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದಡಿ ವಿತರಿಸಲಾಗಿತ್ತು. ಸರಾಸರಿ ಒಂದೂವರೆ ಲಕ್ಷ ವಿದ್ಯಾರ್ಥಿಗಳಲ್ಲಿ ಕಣ್ಣಿನ ತಪಾಸಣೆ ಕೈಗೊಂಡಿದ್ದರಿಂದ ಇಷ್ಟೊಂದು ಸಂಖ್ಯೆಯಲ್ಲಿ ದೃಷ್ಟಿ ದೋಷ ಇರುವುದು ಪತ್ತೆಯಾಗಿತ್ತು. ಈ ಬಾರಿ ಏಳು ತಿಂಗಳಲ್ಲೇ, 85,450 ವಿದ್ಯಾರ್ಥಿಗಳನ್ನು ತಪಾಸಣೆ ನಡೆಸಿ ಕಣ್ಣಿನ ಸಮಸ್ಯೆ ಇರುವವರ ಸಂಖ್ಯೆ ಹೆಚ್ಚಿರುವುದು ದೃಢಪಟ್ಟಿದೆ. ಇನ್ನೂ 70 ಸಾವಿರದಷ್ಟು ವಿದ್ಯಾರ್ಥಿಗಳ ತಪಾಸಣೆ ಬಾಕಿ ಇದೆ ಎನ್ನುತ್ತಾರೆ ಅಧಿಕಾರಿಗಳು.
‘ಆರ್.ಬಿ.ಎಸ್.ಕೆ ಅಡಿಯಲ್ಲಿ ಪ್ರತಿ ವರ್ಷ ಜಿಲ್ಲೆಯ 18 ವರ್ಷದ ವರೆಗಿನ ಮಕ್ಕಳ ಆರೋಗ್ಯ ತಪಾಸಣೆ ನಡೆಯುತ್ತದೆ. ತಪಾಸಣೆ ವೇಳೆ ವಿವಿಧ ಆರೋಗ್ಯ ಸಮಸ್ಯೆ ಹೊಂದಿರುವವರನ್ನು ಪತ್ತೆ ಹಚ್ಚಿ, ಅಗತ್ಯ ಚಿಕಿತ್ಸೆ ಒದಗಿಸಲಾಗುತ್ತದೆ. ಗಂಭೀರ ಕಾಯಿಲೆಗಳಿದ್ದರೂ ಅವರಿಗೆ ಉಚಿತ ಚಿಕಿತ್ಸೆ ನೀಡಲು ಅವಕಾಶವಿದೆ’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ನೀರಜ್ ಬಿ.ವಿ ಹೇಳಿದರು.
‘ತಪಾಸಣೆ ವೇಳೆ 555 ಮಕ್ಕಳಲ್ಲಿ ಹೃದಯ ಸಂಬಂಧಿ ಕಾಯಿಲೆ, 410 ಮಕ್ಕಳಲ್ಲಿ ನರ ಸಂಬಂಧಿ ಕಾಯಿಲೆ ಕಾಣಿಸಿಕೊಂಡಿದೆ. ದೃಷ್ಟಿ ದೋಷ ಹೊಂದಿರುವ ಮಕ್ಕಳ ಸಂಖ್ಯೆ ದೊಡ್ಡ ಪ್ರಮಾಣದಲ್ಲಿ ಪತ್ತೆಯಾಗಿದೆ. ಅವರಿಗೆ ಅಗತ್ಯ ಔಷಧೋಪಚಾರ, ಚಿಕಿತ್ಸೆಗೆ ವ್ಯವಸ್ಥೆ ಕಲ್ಪಿಸಲಾಗುತ್ತಿದೆ’ ಎಂದೂ ತಿಳಿಸಿದರು.
‘ಕಣ್ಣಿನ ದೃಷ್ಟಿ ದೋಷ ಹೆಚ್ಚಲು ಅತಿಯಾದ ಟಿವಿ, ಟ್ಯಾಬ್, ಮೊಬೈಲ್ ಬಳಕೆ ಮುಖ್ಯ ಕಾರಣ. ಇದರ ಹೊರತಾಗಿಯೂ ಹಲವು ಕಾರಣಗಳಿವೆ. ಸಮಸ್ಯೆ ಬಂದ ಮೇಲೆ ಪರಿಹಾರ ಹುಡುಕುವುದಕ್ಕಿಂತ ಬರದಂತೆ ಎಚ್ಚರವಹಿಸಲು ಪಾಲಕರು ಆದ್ಯತೆ ನೀಡಬೇಕು. ಮುಖ್ಯವಾಗಿ ಮಕ್ಕಳಲ್ಲಿ ಆರಂಭಿಕ ಹಂತದಲ್ಲೇ ಮೆಳ್ಳಗಣ್ಣು, ಕಣ್ಣಿನ ನೀರು ಆರುವ ಸಮಸ್ಯೆಯ ಬಗ್ಗೆ ತಪಾಸಣೆಗೆ ಒಳಪಡಿಸಬೇಕು. ಇದರಿಂದ ಸಮಸ್ಯೆ ಇದ್ದರೆ ಆರಂಭಿಕ ಹಂತದಲ್ಲೇ ಚಿಕಿತ್ಸೆ ನೀಡಿ ದೃಷ್ಟಿ ದೋಷ ಗುಣಪಡಿಸಬಹುದು’ ಎನ್ನುತ್ತಾರೆ ಕ್ರಿಮ್ಸ್ ನೇತ್ರ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ.ಪ್ರಶಾಂತಕುಮಾರ ಆಚಾರ್.
‘ಆಹಾರದಲ್ಲಿ ವಿಟಮಿನ್ ‘ಎ’ ಅಂಶ ಹೊಂದಿರುವ ಕ್ಯಾರೆಟ್, ಹಸಿರು ಸೊಪ್ಪುಗಳು, ಮೀನು, ಮಾಂಸದ ಖಾದ್ಯಗಳ ಬಳಕೆಗೆ ಆದ್ಯತೆ ನೀಡಬೇಕು. ಮಕ್ಕಳ ಕೈಗೆ ಹೆಚ್ಚು ಹೊತ್ತು ಮೊಬೈಲ್, ಟ್ಯಾಬ್ ನೀಡುವುದನ್ನು ತಪ್ಪಿಸಬೇಕು. ಇದರಿಂದ ಅವರ ಕಣ್ಣಿನಲ್ಲಿನ ನೀರಿನಂಶ ಆವಿಯಾಗಿ ಕಣ್ಣಿನ ವಿವಿಧ ಭಾಗಗಳ ಬೆಳವಣಿಗೆಗೆ ಸಮಸ್ಯೆ ಎದುರಾಗುವುದು ತಪ್ಪುತ್ತದೆ’ ಎಂದೂ ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.