ADVERTISEMENT

ಕಾರವಾರ | ಬತ್ತಿದ ಜಲಮೂಲ: ಬಾಯಾರಲಿವೆ ಗ್ರಾಮ

ಮುಂಗಾರು ಕೈಕೊಟ್ಟ ಪರಿಣಾಮದಿಂದ ಹೆಚ್ಚಿರುವ ಬರದ ತೀವ್ರತೆ

ಗಣಪತಿ ಹೆಗಡೆ
Published 19 ಫೆಬ್ರುವರಿ 2024, 5:00 IST
Last Updated 19 ಫೆಬ್ರುವರಿ 2024, 5:00 IST
ಮುಂಡಗೋಡ ತಾಲ್ಲೂಕಿನ ಅರಣ್ಯ ಪ್ರದೇಶದ ಸನಿಹ ರಾಜ್ಯ ಹೆದ್ದಾರಿ ಬದಿಯಲ್ಲಿರುವ ಪೈಪಲೈನ್‌ ಗುಂಡಿಯಲ್ಲಿ ನೀರು ಕುಡಿಯಲು ಪ್ರಯತ್ನಿಸುತ್ತಿದ್ದ ಮಂಗಗಳು
ಮುಂಡಗೋಡ ತಾಲ್ಲೂಕಿನ ಅರಣ್ಯ ಪ್ರದೇಶದ ಸನಿಹ ರಾಜ್ಯ ಹೆದ್ದಾರಿ ಬದಿಯಲ್ಲಿರುವ ಪೈಪಲೈನ್‌ ಗುಂಡಿಯಲ್ಲಿ ನೀರು ಕುಡಿಯಲು ಪ್ರಯತ್ನಿಸುತ್ತಿದ್ದ ಮಂಗಗಳು   

ಕಾರವಾರ: ಮುಂಗಾರು ಮಳೆ ಕೊರತೆಯ ಪರಿಣಾಮ ಜಿಲ್ಲೆಯಲ್ಲಿ ಬಿರು ಬೇಸಿಗೆ ಆರಂಭಕ್ಕೂ ಮೊದಲೇ ನೀರಿಗೆ ತತ್ವಾರ ಉಂಟಾಗಿದೆ. ಜಲಮೂಗಳು ಹಂತ ಹಂತವಾಗಿ ಬತ್ತುತ್ತಿದ್ದು ಮಾರ್ಚ್ ಬಳಿಕ 310ಕ್ಕೂ ಹೆಚ್ಚು ಹಳ್ಳಿಗಳಲ್ಲಿ ನೀರಿಗೆ ಹಾಹಾಕಾರ ಉಂಟಾಗಬಹುದು ಎಂದು ಅಂದಾಜಿಸಲಾಗಿದೆ.

ಕೃಷಿ ಪ್ರಧಾನವಾಗಿರುವ ಜಿಲ್ಲೆಯಲ್ಲಿ ಅರಣ್ಯ ಭೂಮಿ ಹೆಚ್ಚಿದ್ದರೂ ಪ್ರಸಕ್ತ ಸಾಲಿನಲ್ಲಿ ಮಳೆ ಕೊರತೆ ಉಂಟಾಗಿದ್ದು, ಜಲಮೂಲಗಳು ಬತ್ತಲು ಕಾರಣವಾಗಿದೆ. ನೀರಿಗಾಗಿ ಕೊಳವೆಬಾವಿ ಕೊರೆಯಿಸುವವರ ಸಂಖ್ಯೆ ಹೆಚ್ಚಿದ್ದು ಇನ್ನೊಂದು ಕಾರಣ.

ಜಿಲ್ಲೆಯ ಸರಾಸರಿ ಅಂತರ್ಜಲ ಮಟ್ಟವು 7.56 ಮೀ.ಗೆ ಇಳಿದಿದೆ. ಹಿಂದೆಂದಿಗಿಂತ ಈ ಬಾರಿ ಅಂತರ್ಜಲ ಮಟ್ಟದಲ್ಲಿ ಭಾರಿ ಕುಸಿತವಾಗಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.

ADVERTISEMENT

ಸದ್ಯ ಮುಂಡಗೋಡದಲ್ಲಿ ಮಾತ್ರ ಖಾಸಗಿ ಕೊಳವೆಬಾವಿ ಬಾಡಿಗೆಗೆ ಪಡೆದು ಜನರಿಗೆ ನೀರು ಒದಗಿಸಲಾಗುತ್ತಿದೆ. ಉಳಿದ ಕಡೆ ನೀರಿಗೆ ಸಮಸ್ಯೆ ಇಲ್ಲ ಎಂದು ಅಧಿಕಾರಿಗಳು ಮೇಲ್ನೋಟಕ್ಕೆ ಹೇಳಿಕೊಳ್ಳುತ್ತಿದ್ದರೂ ಟ್ಯಾಂಕರ್ ಮೂಲಕ ನೀರು ಪೂರೈಸಲು ತಯಾರಿ ನಡೆಸುತ್ತಿದ್ದಾರೆ.

ಕಾರವಾರದ ಹಣಕೋಣ, ಕದ್ರಾ ಭಾಗದಲ್ಲಿ ಈಗಲೇ ಸಿಹಿನೀರಿನ ಮೂಲಗಳು ಬತ್ತಿವೆ. ಅಲ್ಲದೆ ಉಪ್ಪುನೀರು ನುಗ್ಗುವ ಆತಂಕವೂ ಆರಂಭಗೊಂಡಿದೆ.

ಶಿರಸಿ ತಾಲ್ಲೂಕಿನ ವಿವಿಧ ಕಡೆ ಜಲಮೂಲಗಳು ಸೊರಗಿದ್ದು, ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ಹಂಚಿನಕೇರಿ, ಕವಲಜಡ್ಡಿ, ಬೊಂಬಸ್ರೆ, ಕಂಚಿಗದ್ದೆ, ನುಗ್ಗಿಮನೆ, ಬನವಾಸಿ ಸೇರಿದಂತೆ ಹತ್ತಾರು ಗ್ರಾಮಗಳಿಗೆ ಕುಡಿಯುವ ನೀರಿನ ಸಮಸ್ಯೆ ಆರಂಭವಾಗಿದೆ.

‘ವಾರದಲ್ಲಿಯೇ ನೀರಿನ ಸಂಪೂರ್ಣ ಕೊರತೆ ಆರಂಭವಾಗುವ ಲಕ್ಷಣಗಳಿವೆ. ಟ್ಯಾಂಕರ್ ಮೂಲಕ ನೀರು ಸರಬರಾಜಿಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ಕೆಲವೆಡೆ ಕೊಳವೆಬಾವಿ ದುರಸ್ತಿ  ಮಾಡಿಸಲಾಗುತ್ತಿದೆ’ ಎಂದು ತಾಲ್ಲೂಕು ಪಂಚಾಯಿತಿ ಇಒ ಸತೀಶ ಹೆಗಡೆ ಹೇಳುತ್ತಾರೆ.

ಮುಂಡಗೋಡ ತಾಲ್ಲೂಕಿನ ಬಹುತೇಕ ಕಡೆ ಮಾರ್ಚ್‌ ತಿಂಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರುವ ಸಾಧ್ಯತೆ ಹೆಚ್ಚಿದೆ. ಈಗಾಗಲೇ ಹಲವೆಡೆ ಕೊಳವೆಬಾವಿಗಳಲ್ಲಿ ಅಂತರ್ಜಲ ಮಟ್ಟ ಕುಸಿತದ ಪರಿಣಾಮದಿಂದ ತೋಟಗಳು ಒಣಗುತ್ತಿವೆ. ಅರಣ್ಯ ಪ್ರದೇಶದಲ್ಲಿನ ಕೆರೆಕಟ್ಟೆಗಳು ಬತ್ತುವ ಹಂತದಲ್ಲಿದ್ದು, ವನ್ಯಪ್ರಾಣಿಗಳು ಆಹಾರ, ನೀರು ಅರಸಿ ನಾಡಿನತ್ತ ಬರುತ್ತಿರುವ ದೃಶ್ಯಗಳು ಕಂಡುಬರುತ್ತಿವೆ.

ಜಲಜೀವನ್ ಮಿಷನ್ (ಜೆಜೆಎಂ) ಕಾಮಗಾರಿ ತಾಲ್ಲೂಕಿನಲ್ಲಿ ಪ್ರಗತಿಯಲ್ಲಿದ್ದರೂ, ಇನ್ನೂ ಕೆಲವೆಡೆ ನಲ್ಲಿಗಳಲ್ಲಿ ನೀರು ಬರುತ್ತಿಲ್ಲ. ಪಟ್ಟಣದ ಬಸವೇಶ್ವರ ನಗರ, ಹೊಸ ಓಣಿ, ಕಂಬಾರಗಟ್ಟಿ ಪ್ಲಾಟ್‌ ಸೇರಿದಂತೆ ಕೆಲವು ವಾರ್ಡ್‌ಗಳಲ್ಲಿ ನಲ್ಲಿಗಳಲ್ಲಿ ನೀರು ಬರುತ್ತಿಲ್ಲ ಎಂಬ ದೂರುಗಳಿವೆ. ಕೆಲವು ಮನೆಯವರು ಟ್ಯಾಂಕರ್‌ ಮೂಲಕ ನೀರು ಹಾಕಿಸಿಕೊಳ್ಳುತ್ತಿದ್ದಾರೆ.

‘ಗ್ರಾಮೀಣ ಪ್ರದೇಶಗಳಲ್ಲಿ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗುವ ಸಂಭವ ಇರುವುದರಿಂದ ಕುಡಿಯುವ ನೀರನ್ನು ಟ್ಯಾಂಕರ್‌ ಮೂಲಕ ಪೂರೈಸಲು ಈಗಾಗಲೇ ಟೆಂಡರ್‌ ಕರೆಯಲಾಗಿದೆ’ ಎಂದು ತಹಶೀಲ್ದಾರ್‌ ಶಂಕರ ಗೌಡಿ ಹೇಳುತ್ತಾರೆ.

ಯಲ್ಲಾಪುರ ಪಟ್ಟಣ ಪಂಚಾಯ್ತಿ ಸಾರ್ವಜನಿಕರಿಗೆ ಕುಡಿಯುವ ನೀರು ಪೂರೈಸಲು 50ಕ್ಕೂ ಹೆಚ್ಚು ಕೊಳವೆಬಾವಿ ಆಶ್ರಯಿಸಿದ್ದು, ಪಟ್ಟಣ ವ್ಯಾಪ್ತಿಯಲ್ಲಿ ಅಂತರ್ಜಲ ಮಟ್ಟ ಕುಸಿಯುತ್ತಿದೆ. ಕಿರವತ್ತಿ ಮತ್ತು ಮದನೂರು ಪಂಚಾಯ್ತಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ತಾಲ್ಲೂಕು ಆಡಳಿತ ಟ್ಯಾಂಕರ್ ಮೂಲಕ ನೀರು ಪೂರೈಕೆಗೆ ಟೆಂಡರ್ ಕರೆದಿದೆ. ಬೀಗಾರ, ತಾರಗಾರ, ಬಾಗಿನಕಟ್ಟಾ ಗ್ರಾಮಗಳಿಗೆ ನೀರು ಪೂರೈಸುವ ಬೀಗಾರ ಹಳ್ಳ ಸೇರಿದಂತೆ ಹೆಚ್ವಿನ ಎಲ್ಲ ಸಣ್ಣಪುಟ್ಟ ಹಳ್ಳಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತಿದೆ.

‘ಸಿದ್ದಾಪುರ ಪಟ್ಟಣದಲ್ಲಿ ಕುಡಿಯುವ ನೀರಿನ ಅಭಾವ ಬಿರು ಬೇಸಿಗೆಗೂ ಮೊದಲೇ ಉಂಟಾಗುವ ಸಾಧ್ಯತೆ ಇದೆ. ತಾತ್ಕಾಲಿಕವಾಗಿ ಸಮಸ್ಯೆ ಬಗೆಹರಿಸಲು ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಹೊಸದಾಗಿ ಮೂರು ಕೊಳವೆಬಾವಿಗಳನ್ನು ಕೊರೆಯಿಸಲಾಗಿದೆ’ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಜೆ.ಆರ್.ನಾಯ್ಕ ಮಾಹಿತಿ ನೀಡಿದರು.

ದಾಂಡೇಲಿ ತಾಲ್ಲೂಕಿನ ಕೇಗದಾಳ, ಕಲಿಂಪಾಲಿ, ಡೋಮ್ಮಗೇರಾ, ಮೈನಾಳ, ಬಡಶಿರಗೋರು, ಡೊನಕಶಿರಗೋರು, ಬೇಡರ ಶಿರಗೋರು ಗ್ರಾಮದಲ್ಲಿ ನೀರಿನ ಕೊರತೆ ಉಂಟಾಗಬಹುದು ಎಂದು ಅಂದಾಜಿಸಲಾಗಿದೆ.

ಗೋಕರ್ಣದಲ್ಲಿ ನೀರಿಲ್ಲದೆ ಬರಿದಾದ ರಾಮ ತೀರ್ಥವನ್ನು ಭಕ್ತರು ವೀಕ್ಷಿಸಿದರು

ಕಲಿಂಪಾಲಿ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಜೆಜಿಎಮ್ ಮೊದಲ ಯೋಜನೆ ಪ್ರಗತಿಯಲ್ಲಿದ್ದು, ಎರಡನೇ ಹಂತದ ಯೋಜನೆ ಇನ್ನೂ ಅನುಷ್ಟಾನವಾಗಿಲ್ಲ. ತಾಟಗೇರಾ ಹಾಗೂ ಗೌಳಿ ವಾಡಾ ಗ್ರಾಮಕ್ಕೆ ಒಂದೇ ಕೊಳವೆ ಬಾವಿ ನೀರು ಸರಬರಾಜು ಇದ್ದು ನೀರಿನ ಕೊರತೆ ಎದುರಾಗಬಹುದು ಎಂಬುದು ಗ್ರಾಮಸ್ಥರ ಆತಂಕ.

ಹೊನ್ನಾವರ ನೀರಿನ ಪೋಲಾಗುವಿಕೆ ಹಾಗೂ ಮಿತಿ ಮೀರಿದ ಬಳಕೆಯಿಂದ ವರ್ಷವೂ ಏಪ್ರಿಲ್-ಜೂನ್ ಸಮಯದಲ್ಲಿ ನೀರಿನ ಕೊರತೆ ಕಾಡುತ್ತಿದೆ. ನದಿ, ಹಳ್ಳಗಳಿಗೆ ಅಡ್ಡಲಾಗಿ ಕಟ್ಟಲಾಗುತ್ತಿದ್ದ ಬಾಂದಾರಗಳು ಈಗ ಮರೆಯಾಗಿವೆ. ತೆರೆದ ಕೆರೆ, ಬಾವಿಗಳ ಅಭಿವೃದ್ಧಿಗಿಂತ ಕೊಳವೆಬಾವಿ ಕೊರೆಸಲು ಹೆಚ್ಚಿನ ಆದ್ಯತೆ ನೀಡಲಾಗುತ್ತಿರುವುದರಿಂದ ಅಂತರ್ಜಲ ಕುಸಿತ ಉಂಟಾಗುತ್ತಿದೆ.

ಕೃಷಿ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ನೀಡುತ್ತಿರುವುದರಿಂದ ಇದರ ದುರ್ಬಳಕೆ ಕೂಡ ಹೆಚ್ಚುತ್ತಿದೆ ಎಂಬ ದೂರು ಕೇಳಿಬರುತ್ತಿದೆ. ಗುಂಡಬಾಳ ನದಿಯಲ್ಲಿ ನೀರಿನ ಹರಿವು ಇಳಿಮುಖವಾಗಿದ್ದು, ಉಬ್ಬರದ ಸಮಯದಲ್ಲಿ ನದಿ ಮೇಲ್ಭಾಗಕ್ಕೂ ಉಪ್ಪು ನೀರು ನುಗ್ಗುತ್ತಿದೆ.

ಶಿರಸಿಯ ಬಿಸಲಕೊಪ್ಪ ಗ್ರಾಮ ಪಂಚಾಯಿತಿಯ ಉಲ್ಲಾಳದಲ್ಲಿ ಕೆರೆ ಬತ್ತಿರುವುದು

ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ನಗರಾಭಿವೃದ್ಧಿ ಘಟಕದ ಕಾರ್ಯ ಶೇ 80 ರಷ್ಟು ಮುಗಿದಿದ್ದರೂ ಶಿರಾಲಿ ಹಾಗೂ ಕರ್ಕಿ ನೀರು ಪೂರೈಕೆ ಘಟಕಗಳಿಗೆ ಸಂಬಂಧಿಸಿದ ಕೆಲಸ ಆಮೆಗತಿಯಲ್ಲಿ ಸಾಗಿವೆ.

‘ಬೇಸಿಗೆಯಲ್ಲಿ ಕೆರೆ, ಬಾವಿ ಹಾಗೂ ಕೊಳವೆಬಾವಿಗಳಿಂದ ನೀರು ಪೂರೈಸಲು ಕ್ರಮ ಕೈಗೊಳ್ಳಲಾಗುವುದು. ಕೆಲವು ಕೊಳವೆ ಬಾವಿಗಳು ವಿಫಲವಾಗಿವೆ’ ಎನ್ನುತ್ತಾರೆ ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ವಿಭಾಗದ ಎಇಇ ಮಾನಸ.

ಪೂರಕ ಮಾಹಿತಿ: ರಾಜೇಂದ್ರ ಹೆಗಡೆ, ಎಂ.ಜಿ.ಹೆಗಡೆ, ಶಾಂತೇಶ ಬೆನಕನಕೊಪ್ಪ, ರವಿ ಸೂರಿ, ಸುಜಯ್ ಭಟ್, ವಿಶ್ವೇಶ್ವರ ಗಾಂವ್ಕರ, ಪ್ರವೀಣಕುಮಾರ ಸುಲಾಖೆ.

ಜೊಯಿಡಾ ತಾಲ್ಲೂಕಿನಲ್ಲಿ ಹರಿಯುವ ಕಾಳಿನದಿಯ ಉಪನದಿ ‘ಕಾನೇರಿ’ಯಲ್ಲಿ ನೀರಿನ ಮಟ್ಟ ವಿಪರೀತ ಇಳಿಕೆಯಾಗಿದೆ
ಅಸಮರ್ಪಕ ಕುಡಿಯುವ ನೀರಿನ ಯೋಜನೆಯಿಂದ ಮುಂಡಗೋಡ ಪಟ್ಟಣದ ವಿವಿಧ ಬಡಾವಣೆಯ ನಿವಾಸಿಗಳು ನೀರಿನ ತೊಂದರೆ ಅನುಭವಿಸುತ್ತಿದ್ದಾರೆ
– ಮಂಜುನಾಥ ಸ್ಥಳೀಯ.
ನೀರು ಸರಾಸರಿ 2 ಕಿ.ಮೀ. ದೂರ ಮಣ್ಣಿನ ಕಾಲುವೆಯಲ್ಲಿ ಹರಿದು ಬರಬೇಕಾದುದರಿಂದ ಬಹಳಷ್ಷು ನೀರು ಮಣ್ಣಿನಲ್ಲಿ ಇಂಗಿ ಹೋಗುತ್ತದೆ. ತೋಟಗಳಿಗೆ ನೀರುಣಿಸುವುದು ಸವಾಲಾಗಿದೆ
–ಕಮಲಾಕರ ಭಾಗ್ವತ ಬಾಗಿನಕಟ್ಟಾ ಕೃಷಿಕ.
ದಾಂಡೇಲಿಯ ಕಲಿಂಪಾಲಿ ಗ್ರಾಮಕ್ಕೆ ನೀರು ಸರಬರಾಜು ಮಾಡಲು ವ್ಯವಸ್ಥೆಯಾಗಲಿ. ಶುದ್ಧ ಕುಡಿಯುವ ನೀರಿನ ಸಮಸ್ಯೆ ಹಲವೆಡೆ ಇದೆ
–ಜಾನು ತಾಟೆ ಕೃಷಿಕ.
ನೀರು ಸಂಗ್ರಹಣೆ ಕಡಿಮೆ ಇರುವ ಸ್ಥಳಗಳಲ್ಲಿ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ. ಶೀಘ್ರವೇ ಜೆಜೆಎಂನಲ್ಲಿ ಸಂಪರ್ಕದ ಕುರಿತು ಕ್ರಮ ಕೈಗೊಳ್ಳಲಾಗುವುದು
–ರಾಜೀವ ನಾಯ್ಕ ಗ್ರಾಮೀಣ ಕುಡಿಯುವ ನೀರು ನೈರ್ಮ್ಯಲ್ಯ ಇಲಾಖೆಯ ಇಇ.
ಬರಿದಾದ ರಾಮತೀರ್ಥ
ಗೋಕರ್ಣದಲ್ಲಿ ಫೆಬ್ರುವರಿ ಪ್ರಾರಂಭದಿಂದಲೇ ನೀರಿನ ಕೊರತೆ ಕಾಣಿಸುತ್ತಿದೆ. ಜನರ ಜೀವನಾಡಿಯಾದ ಸಮುದ್ರದ ತಪ್ಪಲಿನಲ್ಲಿರುವ ರಾಮತೀರ್ಥ (ರಾಮಾ ವಾಟರ್) ಬರಿದಾಗಿದೆ. ಮಳೆಯ ಅಭಾವದಿಂದಾಗಿ ಈ ಭಾಗದ ಬಹುತೇಕ ಕಡೆ ಈಗಿನಿಂದಲೇ ನೀರಿನ ಸಮಸ್ಯೆ ತಲೆದೋರಿದೆ. ಜೆಜೆಎಂ ಯೋಜನೆ ಅನಷ್ಠಾನಗೊಂಡಿದ್ದರೂ ನೀರು ಸರಬರಾಜು ಆಗುತ್ತಿಲ್ಲ ಎಂಬ ದೂರುಗಳಿವೆ. ಮುಖ್ಯ ಸಮುದ್ರ ದಂಡೆಯಲ್ಲಿರುವ ರಾಮತೀರ್ಥದ ನೀರು ಕುಡಿಯಲು ಉಪಯುಕ್ತವಾಗಿದ್ದು ಸಾವಿರಾರು ಜನರಿಗೆ ಆಸರೆಯಾಗಿತ್ತು. ಆದರೆ ರಾಮತೀರ್ಥದ ಸುತ್ತಮುತ್ತ ಕೊಳವೆಬಾವಿ ಕೊರೆಯಿಸುವವರ ಸಂಖ್ಯೆ ಹೆಚ್ಚಿರುವ ಕಾರಣ ನೀರಿನ ಮಟ್ಟ ಇಳಿಕೆಯಾಗಿದೆ. ‘ಪ್ರಕೃತಿದತ್ತ ರಾಮತೀರ್ಥದಲ್ಲಿ ನೈಸರ್ಗಿಕವಾಗಿ ಸಿಗುವ ಶುದ್ಧ ನೀರಾಗಿತ್ತು. ಹಲವು ಬಾರಿ ಇಲ್ಲಿಗೆ ಭೇಟಿ ನೀಡಿದ್ದೇನೆ. ಆದರೆ ಇದೇ ಮೊದಲ ಬಾರಿಗೆ ರಾಮತೀರ್ಥದಂತಹ ತಾಣವೂ ನೀರಿಲ್ಲದೆ ಒಣಗುತ್ತಿರುವುದನ್ನು ಕಂಡು ಬೇಸರವಾಗಿದೆ’ ಎಂದು ಜರ್ಮನ್ ಮಹಿಳೆ ಶೋಲಾ ಥ್ರಿಸ್ಕೋಲ್ ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.