ಕಾರವಾರ: ಕೈಗಾ ಅಣುವಿದ್ಯುತ್ ಸ್ಥಾವರದ ನೂತನ ಘಟಕಗಳಸ್ಥಾಪನೆಯನ್ನುಎಲ್ಲರೂ ಏಕಧ್ವನಿಯಿಂದ ವಿರೋಧಿಸಬೇಕು. ಇಲ್ಲಿ ರಾಜಕಾರಣ ಮಾಡದೇ ಕಾನೂನು ಹೋರಾಟ ಮಾಡಬೇಕು ಎಂಬ ಅಭಿಪ್ರಾಯ, ನಗರದಲ್ಲಿ ಶನಿವಾರ ನಡೆದ ಕಾರ್ಯಾಗಾರದಲ್ಲಿ ವ್ಯಕ್ತವಾಯಿತು.
ಐದು ಮತ್ತು ಆರನೇ ಘಟಕಗಳ ವಿರೋಧಿ ಹೋರಾಟ ಸಮಿತಿ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಮಾತನಾಡಿದ ಎಲ್ಲರೂ ಒಗ್ಗಟ್ಟಿನ ಮಾತನಾಡಿದರು.
ವೃಕ್ಷಲಕ್ಷ ಆಂದೋಲನದ ಅನಂತ ಹೆಗಡೆ ಅಶೀಸರ ಮಾತನಾಡಿ, ‘ಈ ಯೋಜನೆಯ ವಿರುದ್ಧ ಸ್ಥಳೀಯ ಗ್ರಾಮ ಪಂಚಾಯ್ತಿಗಳು, ತಾಲ್ಲೂಕು ಪಂಚಾಯ್ತಿ ನಿರ್ಣಯ ತೆಗೆದುಕೊಂಡಿವೆ. ಇಷ್ಟಾದರೂ ಕೇಂದ್ರ ಪರಿಸರ ಇಲಾಖೆಯ ವರದಿಯಲ್ಲಿ ಸ್ಥಳೀಯರ ಸಹಮತವಿದೆ ಎನ್ನಲಾಗಿದೆ. ಹಾಗಿದ್ದರೆ ಜನಾಭಿಪ್ರಾಯಕ್ಕೆ ಬೆಲೆಯೇನು’ ಎಂದರು.
‘ಕಾರವಾರಕ್ಕೆ ಕುಡಿಯುವ ನೀರನ್ನು ಕಾಳಿ ನದಿಯ ಬದಲು ಗಂಗಾವಳಿಯಿಂದ ಯಾಕೆ ಪೂರೈಸಲಾಗುತ್ತಿದೆ? ಕಾಳಿ ನದಿ ನೀರಿನ ಬಗ್ಗೆ ಮಂಗಳೂರು ವಿಶ್ವವಿದ್ಯಾಲಯದವರ ಅಧ್ಯಯನ ವರದಿ ಏನಾಯ್ತು? ಪರಿಸರ, ವನ್ಯಜೀವಿಗಳ ಮೇಲಿನ ಪರಿಣಾಮಗಳ ಬಗ್ಗೆ ಅಣುಸ್ಥಾವರದವರು ಯಾಕೆ ತಿಳಿಸುತ್ತಿಲ್ಲ’ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಮುಖಂಡ ಸತೀಶ ಸೈಲ್ ಮಾತನಾಡಿ, ‘ಎಲ್ಲರೂ ಒಂದೇ ಮಾರ್ಗದಲ್ಲಿ ಹೋಗೋಣ. ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸೋಣ’ ಎಂದು ಸಲಹೆ ನೀಡಿದರು.
‘ಕಾಳಿ ನದಿಯೇ ಇಲ್ಲ’:‘ಕದ್ರಾಜಲಾಶಯದನಂತರ ಕಾಳಿ ನದಿಯೇ ಇಲ್ಲ. ಅದಕ್ಕೂ ಹಿಂದೆ ಇರುವ ಅಣೆಕಟ್ಟೆಗಳಲ್ಲಿ ನೀರನ್ನು ಹಿಡಿದಿಡಲಾಗಿದೆ. ಹಾಗಾಗಿ ಕದ್ರಾದವರೆಗೆ ಅರಬ್ಬಿ ಸಮುದ್ರದ ಉಪ್ಪು ನೀರೇ ತುಂಬಿದೆ. ನೋಡಲು ಕಾಳಿ ನದಿ ಮುಂದುವರಿದಂತೆ ಕಾಣುತ್ತದೆ’ ಎಂದು ಅಭಿಪ್ರಾಯಪಟ್ಟರು.
ಹಿರಿಯ ವಿಜ್ಞಾನಿ ಡಾ.ವಿ.ಎನ್.ನಾಯ್ಕ ಮಾತನಾಡಿ, ‘ಪರಿಸರ ಸ್ನೇಹಿ ವಿದ್ಯುತ್ ಉತ್ಪಾದನೆ ಎಂದರೆ ಕೇವಲ ಅಣು ವಿದ್ಯುತ್ ಒಂದೇನಾ? ದೇಶದಲ್ಲಿ ಸಾಕಷ್ಟು ವಿದ್ಯುತ್ ಲಭ್ಯವಿದ್ದರೂ ಕೃತಕ ಅಭಾವ ಸೃಷ್ಟಿಸಿ ಅಣು ವಿದ್ಯುತ್ ಸ್ಥಾವರವನ್ನು ಸ್ಥಾಪಿಸಲಾಗುತ್ತಿದೆ’ ಎಂದು ದೂರಿದರು.
‘ಭಾಗವಾದರೆ ಯಶಸ್ಸು ಸಿಗದು’:ಜೆಡಿಎಸ್ ಮುಖಂಡ ಆನಂದ ಅಸ್ನೋಟಿಕರ್ ಮಾತನಾಡಿ, ‘ಈ ಹೋರಾಟದಲ್ಲಿಶಾಸಕಿ ರೂಪಾಲಿ ನಾಯ್ಕ ಹಾಗೂ ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳುಭಾಗವಹಿಸಲಿ. ಎರಡು ಮೂರು ಭಾಗಗಳಾದರೆ ಯಶಸ್ಸು ಸಿಗದು. ನಮ್ಮ ಪಕ್ಷದ ವರಿಷ್ಠಎಚ್.ಡಿ.ದೇವೇಗೌಡ ಅವರನ್ನು ಕರೆದುಕೊಂಡು ಬರುವ ಜವಾಬ್ದಾರಿ ನನ್ನದು. ಸೈಲ್ ಅವರು ಸಿದ್ದರಾಮಯ್ಯ ಅವರನ್ನು ಕರೆಸಲಿ. ರೂಪಾಲಿ ಅವರ ಪಕ್ಷದ ಮುಖಂಡರನ್ನು ಕರೆತರಲಿ’ಎಂದರು.
ವಕೀಲ ಸಂಜಯ ಸಾಳುಂಕೆ, ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯಜಿ.ಎಂ.ಶೆಟ್ಟಿ,ಹೋರಾಟ ಸಮಿತಿ ಅಧ್ಯಕ್ಷ ಶಾಂತ ಬಾಂದೇಕರ ಮಾತನಾಡಿದರು. ರಾಮಕೃಷ್ಣಾಶ್ರಮದ ಭವೇಶಾನಂದ ಸ್ವಾಮೀಜಿ ಉದ್ಘಾಟಿಸಿದರು. ಉದಯ ಎನ್.ನಾಯ್ಕ ಸ್ವಾಗತಿಸಿದರು. ಗುರು ಫಾಯ್ದೆ ಕಾರ್ಯಕ್ರಮ ನಿರೂಪಿಸಿದರು.
ಯಾರು ಏನೆಂದರು?
* ಕೈಗಾ ಅಣುವಿದ್ಯುತ್ ಸ್ಥಾವರದಿಂದ ವನವಾಸಿಗಳಿಗೆ ದೊಡ್ಡ ಸಮಸ್ಯೆಯಾಗುತ್ತದೆ. ಪರಿಸರ, ವನ್ಯಜೀವಿಗಳ ಸಂರಕ್ಷಣೆ ಮಾಡುವ ನಾವು ಹೋರಾಟಕ್ಕೆ ಸಹಕರಿಸುತ್ತೇವೆ.
– ಶಾಂತಾರಾಮ ಸಿದ್ದಿ
*
ಉತ್ತರ ಕನ್ನಡದ ನಾವು ಶಿವನಂತಾಗಿದ್ದೇವೆ. ಎಲ್ಲ ವಿಷವನ್ನೂ ಕುಡಿಯುತ್ತಿದ್ದೇವೆ.ಸಣ್ಣ ಟೊಂಗೆ ಕತ್ತರಿಸಿದರೂಕಾನೂನು ಎನ್ನುತ್ತಾರೆ. ಆದರೆ, ವಿದ್ಯುತ್ ತಂತಿ ಅಳವಡಿಸಲು ಮರಗಳ ಮಾರಣಹೋಮದ ಬಗ್ಗೆಮಾತನಾಡುತ್ತಿಲ್ಲ.
– ಗಂಗಾಧರ ಭಟ್, ಮಾಜಿ ಶಾಸಕ
*
ಹಣಕೋಣ ಉಷ್ಣ ವಿದ್ಯುತ್ ಸ್ಥಾವರಕ್ಕಿಂತಹೆಚ್ಚಿನ ಹೋರಾಟ ಕೈಗಾಕ್ಕೆ ಬೇಕಾಗಿದೆ. ನಮ್ಮ ಸಮಿತಿಯು ವಾರಕ್ಕೊಮ್ಮೆ ಸಭೆ ಸೇರಿ ಚರ್ಚಿಸಬೇಕು.
– ಪ್ರೀತಂ ಮಾಸೂರ್ಕರ್, ವಕೀಲ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.