ADVERTISEMENT

ಬಣ್ಣದ ‘ಚಿಟ್ಟೆ’ಗೊಂದು ಹೊಸ ರೆಕ್ಕೆ

ಅರಣ್ಯ ಕಾಲೇಜಿನ ವಿದ್ಯಾರ್ಥಿಗಳಿಂದ ಪುಸ್ತಕ ರಚನೆ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2019, 19:37 IST
Last Updated 16 ಅಕ್ಟೋಬರ್ 2019, 19:37 IST
ಅರಣ್ಯ ಕಾಲೇಜಿನ ವಿದ್ಯಾರ್ಥಿಗಳು ಹೊರತಂದಿರುವ ಚಿಟ್ಟೆ ಪುಸ್ತಕದ ಮುಖಪುಟ (ಚಿತ್ರ:1) ಪುಸ್ತಕ ಸಿದ್ಧಪಡಿಸಿದ ಉದಯಕುಮಾರ್ ಕೆ. ಭರತ್ ಎಸ್. ಹಾಗೂ ನಾಗರಾಜ ಶಾಸ್ತ್ರಿ
ಅರಣ್ಯ ಕಾಲೇಜಿನ ವಿದ್ಯಾರ್ಥಿಗಳು ಹೊರತಂದಿರುವ ಚಿಟ್ಟೆ ಪುಸ್ತಕದ ಮುಖಪುಟ (ಚಿತ್ರ:1) ಪುಸ್ತಕ ಸಿದ್ಧಪಡಿಸಿದ ಉದಯಕುಮಾರ್ ಕೆ. ಭರತ್ ಎಸ್. ಹಾಗೂ ನಾಗರಾಜ ಶಾಸ್ತ್ರಿ   

ಶಿರಸಿ: ಪಶ್ಚಿಮಘಟ್ಟದಲ್ಲಿರುವ ಬಣ್ಣದ ಚಿಟ್ಟೆಗಳ 176 ಪ್ರಭೇದಗಳನ್ನು ಗುರುತಿಸಿರುವ ಇಲ್ಲಿನ ಅರಣ್ಯ ಕಾಲೇಜಿನ ವಿದ್ಯಾರ್ಥಿಗಳು ‘winged jewels' ಎಂಬ ಇ–ಪುಸ್ತಕ ಹೊರತಂದಿದ್ದಾರೆ. ಈ ಭಾಗದ ಚಿಟ್ಟೆಗಳ ಕುರಿತಾಗಿರುವ ಮೊದಲ ಪುಸ್ತಕ ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಗಿದೆ.

ಚಿಟ್ಟೆಗಳ ಸಾಮಾನ್ಯ ಹೆಸರು, ವೈಜ್ಞಾನಿಕ ಹೆಸರು, ರೂಪ ವಿಜ್ಞಾನ, ಜೀವನ ಚಕ್ರ, ವಿನಾಶದ ಅಂಚಿನಲ್ಲಿರುವ ಪ್ರಭೇದಗಳು, ಚಿಟ್ಟೆ ಉದ್ಯಾನ ನಿರ್ಮಾಣಕ್ಕೆ ಪೂರಕವಾಗುವ ಅಂಶಗಳು, ಚಿಟ್ಟೆ ಗುರುತಿಸಲು ಸಹಾಯಕವಾಗುವ ಅಂಶಗಳನ್ನು ಒಳಗೊಂಡಿದೆ. ಕಾಲೇಜಿನಲ್ಲಿ ನಡೆದ ಐದು ವರ್ಷಗಳ ಅಧ್ಯಯನದ ನಂತರ ಮೂವರು ವಿದ್ಯಾರ್ಥಿಗಳಾದ ಉದಯಕುಮಾರ್ ಕೆ, ಭರತ್ ಎಸ್. ಹಾಗೂ ನಾಗರಾಜ ಶಾಸ್ತ್ರಿ ಅವರು ಒಂದೂವರೆ ವರ್ಷ ಶ್ರಮವಹಿಸಿ, ಈ ಪುಸ್ತಕ ಹೊರತಂದಿದ್ದಾರೆ. ಕೆಲ ದಿನಗಳ ಹಿಂದೆ ಬಿಡುಗಡೆಯಾಗಿರುವ ಇ–ಪುಸ್ತಕವು 1000ಕ್ಕೂ ಹೆಚ್ಚು ಓದುಗರನ್ನು ಸೆಳೆದಿದೆ.

‘ನಾವು ಕೆಲವು ವಿದ್ಯಾರ್ಥಿಗಳು ಕೇಶವಮೂರ್ತಿ ನೇತೃತ್ವದಲ್ಲಿ ಬನ್ನೇರುಘಟ್ಟ ಉದ್ಯಾನಕ್ಕೆ ‘ಚಿಟ್ಟೆ ಗಣತಿ’ಗೆ ಹೋಗಿದ್ದೆವು. ಅಲ್ಲಿಯ ತನಕ ದೊಡ್ಡ ಪಾತರಗಿತ್ತಿಯನ್ನು ಮಾತ್ರ ಗುರುತಿಸುತ್ತಿದ್ದ ನಾವು, ಕ್ರಮೇಣ ಸಣ್ಣ ಚಿಟ್ಟೆಗಳನ್ನು ಗುರುತಿಸಲು ಕಲಿತೆವು. ಕಾಲೇಜಿನ ಪ್ರಾಧ್ಯಾಪಕರ ಮಾರ್ಗದರ್ಶನದಲ್ಲಿ ‘ಯೂತ್ ಫೋರಮ್ ಫಾರ್ ನೇಚರ್’ ತಂಡದ ಅಡಿಯಲ್ಲಿ ಪ್ರತಿ ಭಾನುವಾರ ಚಿಟ್ಟೆ ವೀಕ್ಷಣೆ ಕಾರ್ಯಕ್ರಮ ಪ್ರಾರಂಭವಾಯಿತು. ಹಾಗೆ ಬೆಳೆದ ಹವ್ಯಾಸ ಈಗ ಪುಸ್ತಕ ರೂಪದಲ್ಲಿ ಹೊರಬಂದಿದೆ’ ಎನ್ನುತ್ತಾರೆ ಉದಯಕುಮಾರ್.

ADVERTISEMENT

‘ಪಶ್ಚಿಮಘಟ್ಟದಲ್ಲಿ ಸುಮಾರು 376 ಪ್ರಭೇದದ ಚಿಟ್ಟೆಗಳಿವೆ. ಅವುಗಳಲ್ಲಿ 176 ಪ್ರಭೇದಗಳನ್ನು ಕಾಲೇಜಿನ ಸಮೀಪದ 3.5 ಕಿ.ಮೀ ವ್ಯಾಪ್ತಿಯಲ್ಲಿ ಗುರುತಿಸಿದ್ದೇವೆ. ಕಾಲೇಜಿನಲ್ಲಿ ಚಿಟ್ಟೆ ಉದ್ಯಾನ ನಿರ್ಮಿಸಿ, ಅಲ್ಲಿ ಅವುಗಳ ಸಂತಾನೋತ್ಪತ್ತಿ ಕ್ರಮವನ್ನು ಅಧ್ಯಯನ ಮಾಡಿದ್ದೇವೆ. ಪಶ್ಚಿಮಘಟ್ಟದಲ್ಲಿರುವ ಚಿಟ್ಟೆಗಳ ಬಗ್ಗೆ ಈಗಾಗಲೇ ಪುಸ್ತಕಗಳು ಬಂದಿವೆ. ಆದರೆ, ಕರ್ನಾಟಕದ ಸೀಮೆಯ ಚಿಟ್ಟೆಗಳ ಬಗೆಗಿನ ಮೊದಲ ಪುಸ್ತಕ ಇದು’ ಎಂದು ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

**

ಎಲ್ಲರ ಬಳಿ ಮೊಬೈಲ್ ಇರುವ ಕಾರಣ, ಗುರುತಿಸುವಿಕೆ ಸುಲಭವಾಗಲೆಂಬ ಕಾರಣಕ್ಕೆ ಇ–ಬುಕ್ ರಚನೆಗೆ ಆದ್ಯತೆ ನೀಡಲಾಗಿದೆ.</p>
- ಉದಯಕುಮಾರ್ ಕೆ.ಪುಸ್ತಕ ರಚನೆ ತಂಡದ ಸದಸ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.