ಕಾರವಾರ: ಹೊನ್ನಾವರ ತಾಲ್ಲೂಕಿನ ಮುಗಳಿ ಕಡಲಧಾಮ ದಲ್ಲಿ ಶನಿವಾರ ಅಳಿವಿನಂಚಿನಲ್ಲಿರುವ ಬೃಹತ್ ಗಾತ್ರದ ನೀಲಿ ತಿಮಿಂಗಿಲವೊಂದರ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ತಿಮಿಂಗಿಲವು ಸುಮಾರು 35 ಮೀ. ಉದ್ದವಿತ್ತು. ಅದರ ಮೃತದೇಹ ದೊರೆತ ಬಗ್ಗೆ ಸ್ಥಳೀಯ ಮೀನುಗಾರರ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು.
‘ಬಲೀನ್ ತಳಿಗೆ ಸೇರಿದ ತಿಮಿಂಗಿಲ ಇದಾಗಿದ್ದು, ಮೃತಪಟ್ಟು ಹಲವು ದಿನ ಕಳೆದಿರುವ ಸಾಧ್ಯತೆ ಇದ್ದು, ಅಲೆಗಳ ರಭಸಕ್ಕೆ ಈಗ ದಡಕ್ಕೆ ಬಂದು ಬಿದ್ದಿದೆ. ಸಾವಿಗೆ ಕಾರಣ ಏನು ಎಂಬುದು ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಸ್ಪಷ್ಟವಾಗಲಿದೆ’ ಎಂದು ಕಾರವಾರದ ಕಡಲ ಜೀವಶಾಸ್ತ್ರ ಸ್ನಾತಕೋತ್ತರ ಅಧ್ಯಯನ ಕೆಂದ್ರದ ಶಿವಕುಮಾರ ಹರಗಿ ‘ಪ್ರಜಾವಾಣಿ’ಗೆ ತಿಳಿಸಿದರು.
‘ಸಮುದ್ರದ ತಣ್ಣನೆಯ ಪ್ರದೇಶ ದಿಂದ ಉಷ್ಣ ಪ್ರದೇಶಕ್ಕೆ ಸಂತಾನೋತ್ಪತ್ತಿ ವೇಳೆ ಈ ತಿಮಿಂಗಿಲಗಳು ಬರುತ್ತವೆ. ನೇತ್ರಾಣಿ ದ್ವೀಪ, ಮುಗಳಿ ಕಡಲ ಧಾಮದ ಬಳಿ ವಲಸೆ ಬರುವುದು ಹೆಚ್ಚು. ಶಾರ್ಕ್ ಮೀನುಗಳ ದಾಳಿಯಿಂದ ಮೃತಪಟ್ಟಿರುವ ಸಾಧ್ಯತೆ ಇದೆ’ ಎಂದು ಸಂಶೋಧಕ ಪ್ರಕಾಶ ಮೇಸ್ತ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.