ADVERTISEMENT

ಉತ್ತರ ಕನ್ನಡ | ಮೊದಲ ಬಾರಿಗೆ ದಾಖಲೆ ಮತದಾನ: ಸ್ಪರ್ಧೆಯೊಡ್ಡದ ಪಕ್ಷೇತರರು

ಗಣಪತಿ ಹೆಗಡೆ
Published 14 ಮೇ 2024, 4:37 IST
Last Updated 14 ಮೇ 2024, 4:37 IST
   

ಕಾರವಾರ: ಉತ್ತರ ಕನ್ನಡ ಲೋಕಸಭಾ ಕ್ಷೇತ್ರಕ್ಕೆ ಮತದಾನ ಮುಗಿದು ಒಂದು ವಾರ ಕಳೆದರೂ ರಾಜಕೀಯ ವಲಯದಲ್ಲಿ ಇನ್ನೂ ಮತ ಲೆಕ್ಕಾಚಾರ ಮುಗಿದಿಲ್ಲ. ಮತ ಎಣಿಕೆಗೆ 23 ದಿನ ಬಾಕಿ ಇದ್ದರೂ ಫಲಿತಾಂಶದ ಕುತೂಹಲದತ್ತ ಎಲ್ಲರ ದೃಷ್ಟಿ ನೆಟ್ಟಿದೆ.

ಎಂಟು ವಿಧಾನಸಭಾ ಕ್ಷೇತ್ರವನ್ನು ಒಳಗೊಂಡಿರುವ ಉತ್ತರ ಕನ್ನಡ ಕ್ಷೇತ್ರದಲ್ಲಿ ಈ ಬಾರಿ 12,56,027 ಮಂದಿ ಮತ ಚಲಾಯಿಸುವ ಮೂಲಕ ಶೇ.76.53 ರಷ್ಟು ಮತದಾನ ನಡೆದಿದೆ. ಕ್ಷೇತ್ರದ ಮಟ್ಟಿಗೆ ಇದು ಈವರೆಗಿನ ಗರಿಷ್ಠ ಮಟ್ಟದ ಮತದಾನ ಪ್ರಮಾಣವಾಗಿದೆ. ಹೀಗಾಗಿ ಫಲಿತಾಂಶದತ್ತ ಸಹಜವಾಗಿ ಕುತೂಹಲವೂ ಹೆಚ್ಚಿದೆ.

2019ರ ಚುನಾವಣೆಯಲ್ಲಿ 11.54 ಲಕ್ಷ ಮತದಾನವಾಗಿದ್ದು ಈ ಹಿಂದಿನ ದಾಖಲೆ ಆಗಿತ್ತು. ಆಗ ಬಿಜೆಪಿಯ ಅಭ್ಯರ್ಥಿಯಾಗಿದ್ದ ಅನಂತಕುಮಾರ ಹೆಗಡೆ 4.79 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಕಾಂಗ್ರೆಸ್–ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿದ್ದ ಆನಂದ ಅಸ್ನೋಟಿಕರ್ ಅವರನ್ನು ಮಣಿಸಿದ್ದರು. ಆ ಚುನಾವಣೆಯಲ್ಲಿ ಅನಂತಕುಮಾರ ಹೆಗಡೆ 7.86 ಲಕ್ಷ ಮತ ಪಡೆದಿದ್ದು ದಾಖಲೆ ಎನಿಸಿತ್ತು.

ADVERTISEMENT

2014ರ ಚುನಾವಣೆಯಲ್ಲಿ 10.01 ಲಕ್ಷ ಮತಗಳು ಚಲಾವಣೆಯಾಗಿದ್ದು ಆಗಲೂ ಬಿಜೆಪಿಯ ಅನಂತಕುಮಾರ ಹೆಗಡೆ ಅವರು ಕಾಂಗ್ರೆಸ್ ಅಭ್ಯರ್ಥಿ ಪ್ರಶಾಂತ ದೇಶಪಾಂಡೆ ಅವರ ವಿರುದ್ಧ 1.40 ಲಕ್ಷ ಮತಗಳ ಅಂತರದ ಗೆಲುವು ಸಾಧಿಸಿದ್ದರು. ಚಲಾವಣೆಯಾಗಿದ್ದ ಒಟ್ಟು ಮತಗಳ ಪೈಕಿ ಶೇ.54 ರಷ್ಟನ್ನು ಬಿಜೆಪಿ ಅಭ್ಯರ್ಥಿ ಪಡೆದುಕೊಂಡಿದ್ದರು. ಆ ಚುನಾವಣೆಯಲ್ಲಿ ಪ್ರಬಲ ಪೈಪೋಟಿ ಏರ್ಪಟ್ಟಿತ್ತು.

ಪ್ರಸಕ್ತ ಸಾಲಿನ ಚುನಾವಣೆಯಲ್ಲಿಯೂ ಕ್ಷೇತ್ರದಲ್ಲಿ 13 ಅಭ್ಯರ್ಥಿಗಳು ಸ್ಪರ್ಧಿಸಿದ್ದರಾದರೂ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಪ್ರಬಲ ಪೈಪೋಟಿ ಏರ್ಪಟ್ಟಿರುವುದು ಮೇಲ್ನೋಟಕ್ಕೆ ಕಾಣಿಸುತ್ತಿದೆ. ಇದನ್ನೇ ಆಧರಿಸಿ ರಾಜಕೀಯ ವಿಶ್ಲೇಷಣೆಗಳನ್ನು ನಡೆಸಲಾಗುತ್ತಿದೆ.

‘ಮೋದಿ ನಾಮಬಲದಲ್ಲಿ ಬಿಜೆಪಿ, ಗ್ಯಾರಂಟಿ ಯೋಜನೆಯ ಬಲದೊಂದಿಗೆ ಕಾಂಗ್ರೆಸ್ ಸೆಣಸಾಡಿವೆ. ಮತದಾರ ಯಾರ ಪರ ಒಲವು ತೋರಿದ್ದಾರೆ ಎಂಬುದಕ್ಕೆ ಇನ್ನೂ ಮೂರು ವಾರ ಕಾಯುವುದು ಅನಿವಾರ್ಯ. ಆದರೆ, ಯಾರೇ ಗೆದ್ದರೂ ಅಂತರ ಕಡಿಮೆ ಆಗುವ ಸಾಧ್ಯತೆ ಇದೆ. ಇಬ್ಬರ ನಡುವೆ ಪೈಪೋಟಿ ನಡೆದ ಪರಿಣಾಮ ಗೆಲ್ಲಬೇಕಾದ ಅಭ್ಯರ್ಥಿ ಒಟ್ಟು ಚಲಾವಣೆಯಾದ ಮತಗಳ ಪೈಕಿ ಶೇ.50 ರಷ್ಟನ್ನು ಪಡೆಯಲೇಬೇಕು. ಅಂದರೆ 6.10 ಲಕ್ಷಕ್ಕಿಂತ ಹೆಚ್ಚು ಮತ ಗಳಿಕೆ ಅನಿವಾರ್ಯ’ ಎನ್ನುತ್ತಾರೆ ಹಿರಿಯ ರಾಜಕೀಯ ವಿಶ್ಲೇಷಕರೊಬ್ಬರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.