ADVERTISEMENT

ಹಳಿಯಾಳ: ಬದುಕಿಗೆ ಆಸರೆ ನೀಡಿದ ಬಿದಿರಿನ ಕಲೆ

ಹಳಿಯಾಳ: ಕುಟುಂಬ ನಿರ್ವಹಣೆಗೆ ವಾರಪೂರ್ತಿ ಪರಿಶ್ರಮ ಪಡುವ ಮಹಿಳೆ

ಸಂತೋಷ ಹಬ್ಬು
Published 7 ಮಾರ್ಚ್ 2022, 19:45 IST
Last Updated 7 ಮಾರ್ಚ್ 2022, 19:45 IST
ಹಳಿಯಾಳದ ಭಾನುವಾರದ ಸಂತೆ ಮಾರುಕಟ್ಟೆಯಲ್ಲಿ, ಬಿದಿರಿನಿಂದ ಸಿದ್ಧಪಡಿಸಿದ ಬುಟ್ಟಿ ಮತ್ತಿತರ ವಸ್ತುಗಳನ್ನು ಮಾರಾಟ ಮಾಡುತ್ತಿರುವ ಮಂಜುಳಾ ಸುರೇಶ ಬೂದಪ್ಪನವರ
ಹಳಿಯಾಳದ ಭಾನುವಾರದ ಸಂತೆ ಮಾರುಕಟ್ಟೆಯಲ್ಲಿ, ಬಿದಿರಿನಿಂದ ಸಿದ್ಧಪಡಿಸಿದ ಬುಟ್ಟಿ ಮತ್ತಿತರ ವಸ್ತುಗಳನ್ನು ಮಾರಾಟ ಮಾಡುತ್ತಿರುವ ಮಂಜುಳಾ ಸುರೇಶ ಬೂದಪ್ಪನವರ   

ಹಳಿಯಾಳ: ಒಂದೆಡೆ ಸುಡು ಬಿಸಿಲು, ಗಾಳಿ, ದೂಳು. ವ್ಯಾಪಾರ ಮಾಡಲು ಸೂರು ಇಲ್ಲ. ಪಟ್ಟಣದಲ್ಲಿ ಭಾನುವಾರ ನಡೆಯುವ ಸಂತೆಯಲ್ಲಿ ವ್ಯಾಪಾರವಾದರೆ ಮಾತ್ರ ವಾರವಿಡೀ ಕುಟುಂಬ ನಿರ್ವಹಣೆ ಸಲಿಸಾಗಿರುತ್ತದೆ. ಕಷ್ಟವಾದರೂ ಸರಿ, ಸ್ವಾಭಿಮಾನದಿಂದ ಜೀವಿಸುವ ಇವರ ಹೆಸರು ಮಂಜುಳಾ ಸುರೇಶ ಬೂದಪ್ಪನವರ.‌

ಅವರ ಮಾವ ಶಿವಪ್ಪ ಬೂದಪ್ಪನವರ ಹಾಗೂ ಸತ್ತೆ ನೀಲವ್ವಾ ಬೂದಪ್ಪನವರಸುಮಾರು 60 ವರ್ಷಗಳಿಂದ ಪಟ್ಟಣದಲ್ಲಿ ಬುಟ್ಟಿ ಮುಂತಾದ ಬಿದಿರಿನ ವಸ್ತುಗಳನ್ನು ಮಾರಾಟ ಮಾಡಲು ಬರುತ್ತಿದ್ದರು. ಅದೇವೃತ್ತಿಯನ್ನು ಮಂಜುಳಾ ಹಾಗೂ ಪತಿ ಸುರೇಶ ಬೂದಪ್ಪನವರ ಮುಂದುವರಿಸಿಕೊಂಡು ಬಂದರು. ಬುಟ್ಟಿ, ಮೊರ, ಬೀಸಣಿಕೆ, ಸಾಣಿಗೆ ಮುಂತಾದವುಗಳನ್ನು ಸಿದ್ಧಪಡಿಸುತ್ತಾರೆ.

‘ಇಡೀ ದಿನ ಬಿಸಿಲಿನಲ್ಲಿ ಕುಳಿತಿದ್ದರೂ ಕೆಲವೊಮ್ಮೆ ನಿರೀಕ್ಷಿತ ವ್ಯಾಪಾರ ಆಗುವುದಿಲ್ಲ. ಗ್ರಾಹಕರು ಕಡಿಮೆ ದರಕ್ಕೆ ಕೇಳುತ್ತಾರೆ. ಇದರಿಂದ ಇಡೀ ವಾರದ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವುದಿಲ್ಲ. ಆದರೂ ಪರಿಶ್ರಮ ವ್ಯರ್ಥವಾಗಬಾರದು ಎಂದು ಗ್ರಾಹಕರು ಕೇಳಿದ ದರಕ್ಕೆ ಮಾರಾಟ ಮಾಡುತ್ತೇವೆ’ ಎಂದು ಮುಗುಳ್ನಗುತ್ತಾರೆ.

ADVERTISEMENT

‘ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಬಂದರೂ ಪುರಸಭೆಗೆ ದಿನದ ಕರ ಪಾವತಿಸಬೇಕು. ವ್ಯಾಪಾರಕ್ಕೆ ಯಾವುದೇ ಅಂಗಡಿಗಳಿಲ್ಲ. ಪ್ರತಿಯೊಂದು ಮಳಿಗೆಯೂ ಹರಾಜಿನಿಂದಲೇ ವಿಲೇವಾರಿಯಾಗುತ್ತವೆ. ಅವರು ನಿಗದಿ ಮಾಡುವಷ್ಟು ಹಣ ಪಾವತಿಸಲು ನಮಗೆ ಸಾಧ್ಯವಿಲ್ಲ. ಆಡಳಿತವು ನಮಗೂ ಏನಾದರೂ ವ್ಯವಸ್ಥೆ ಕಲ್ಪಿಸಿದರೆ ಅನುಕೂಲವಾಗುತ್ತದೆ’ ಎಂದು ಮನವಿ ಮಾಡುತ್ತಾರೆ.

ಬಿದಿರಿನಿಂದ ಹೊಲಗದ್ದೆಗಳಿಗೆ, ಕೃಷಿ ಕಾಯಕಕ್ಕೆ ಉಪಯೋಗಿಸುವ ಬುಟ್ಟಿ, ಬುತ್ತಿ ಕಟ್ಟಿಕೊಂಡು ಸಾಗುವ ಬುಟ್ಟಿಗಳು, ಸಾಮಾನ್ಯವಾಗಿ ಮನೆಗಳಲ್ಲಿ ದಿನನಿತ್ಯ ಉಪಯೋಗಿಸುವ ಮೊರ, ಸಾಣಿಗೆ, ಬೀಸಣಿಕೆ, ರೊಟ್ಟಿ ಬುಟ್ಟಿ, ದೇವಸ್ಥಾನಗಳಿಗೆ ಅರ್ಪಣೆ ಮಾಡುವ ದೇವರ ಉಡುಗೊರೆಯ ವಸ್ತುಗಳನ್ನು ಸಿದ್ಧಪಡಿಸಲಾಗುತ್ತದೆ. ಈ ಕೆಲಸಕ್ಕೆ ಅರಣ್ಯ ಇಲಾಖೆಯಿಂದ ಬಿದಿರು ಪಡೆಯಬೇಕು. ಒಂದು ಬಿದಿರನ್ನು ಮನೆಗೆ ತರುವಷ್ಟರಲ್ಲಿ ₹ 100ರಿಂದ ₹ 110 ಖರ್ಚಾಗುತ್ತದೆ. ಒಂದು ಬಿದಿರಿನಿಂದ ಕೆಲವೊಮ್ಮೆ ಒಂದು ಬುಟ್ಟಿ, ಉದ್ದದ ಬಿದಿರಿನಿಂದ ಎರಡು ಬುಟ್ಟಿ ಸಿದ್ಧಪಡಿಸಲು ಸಾಧ್ಯವಾಗುತ್ತದೆ’ ಎಂದು ವಿವರಿಸುತ್ತಾರೆ.

ಬಿದಿರು ಸಂಗ್ರಹವೇ ಸವಾಲು:

‘ಗ್ರಾಹಕರು ಆಧುನಿಕ ವಸ್ತುಗಳಿಗೆ ಮಾರುಹೋಗಿ ಬಿದಿರಿನ ವಸ್ತುಗಳಿಗೆ ತೀರಾ ಕಡಿಮೆ ಬೆಲೆಯಲ್ಲಿ ಕೇಳುತ್ತಿದ್ದಾರೆ. ಆ ದಿನದ ವ್ಯಾಪಾರಕ್ಕಾಗಿ ಬಿದಿರಿನ ಬೆಲೆ ಬಂದರೆ ಸಾಕು ಎಂದು ವ್ಯಾಪಾರ ಮಾಡುತ್ತೇವೆ. ಬಿದಿರು ತರಲು ಅರಣ್ಯ ಇಲಾಖೆಗೆ ಮೊದಲೇ ಅರ್ಜಿ ಸಲ್ಲಿಸಿ ಸಾಕಷ್ಟು ತಿರುಗಾಡಬೇಕು. ಇದು ಸಹ ಈಗ ತೀರಾ ಕೊರತೆಯಾಗಿದೆ’ ಎಂದು ಮಂಜುಳಾ ಅಳಲು ತೋಡಿಕೊಳ್ಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.