ಶಿರಸಿ: ರಾಜಕೀಯ ಪಕ್ಷಗಳಲ್ಲಿ ಸಕ್ರಿಯರಾಗಿರುವ ಮಹಿಳೆಯರಿಗೆ ಈಗ ಬಿಡುವಿಲ್ಲದ ಕೆಲಸ. ನಿತ್ಯದ ದಿನಚರಿ ಬದಲಾಯಿಸಿಕೊಂಡಿರುವ ಸಾವಿರಾರು ಮಹಿಳೆಯರು ಬೆಳಗಿನಿಂದ ರಾತ್ರಿಯವರೆಗೆ ಊರೂರು ಸುತ್ತಿ ಪ್ರಚಾರ ನಡೆಸುತ್ತಿದ್ದಾರೆ.
ಹಾಸಿಗೆಯಿಂದ ಎದ್ದಾಗಿನಿಂದ ರಾತ್ರಿ ದಿಂಬಿಗೆ ತಲೆಯೂರುವ ತನಕ ಬಿಡುವಿಲ್ಲದ ಕೆಲಸದಲ್ಲಿರುವ ಮಹಿಳೆಯರು, ಮುಂಜಾನೆಯಲ್ಲಿ ಪಾದರಸದಂತೆ ಓಡಾಡುತ್ತಾರೆ. ಮನೆಯ ಸದಸ್ಯರಿಗೆ ಬೆಳಗಿನ ತಿಂಡಿ, ಶಾಲೆಗೆ ಹೋಗುವ ಮಕ್ಕಳ ತಿಂಡಿ ಡಬ್ಬ ಕಟ್ಟಿ, ಸಮವಸ್ತ್ರದ ತೊಡಿಸಿ, ಶಾಲೆಗೆ ಕಳುಹಿಸಿದ ಮೇಲೆಯೇ ನಿಟ್ಟುಸಿರು ಬಿಡುವ ಮಹಿಳೆಯರು, ಚುನಾವಣೆಗಾಗಿ ಈ ದಿನಚರಿಯಲ್ಲಿ ಬದಲಾವಣೆ ಮಾಡಿಕೊಂಡಿದ್ದಾರೆ.
ತಡರಾತ್ರಿ ಮನೆಗೆ ಬಂದರೂ ಮರುದಿನ ಬೆಳಗಿನ ಕೆಲಸಗಳನ್ನೆಲ್ಲ ಸಾಧ್ಯವಾದಷ್ಟು ಪೂರ್ವಭಾವಿಯಾಗಿ ರಾತ್ರಿಯೇ ಮುಗಿಸಿಟ್ಟು ಮಲಗುತ್ತಾರೆ. ಬೆಳಿಗ್ಗೆ 5 ಗಂಟೆಗೆ ಎದ್ದು ಉಳಿದ ಕೆಲಸಗಳನ್ನೆಲ್ಲ ಪೂರೈಸಿ, 9 ಗಂಟೆಯೆಂದರೆ ಪ್ರಚಾರಕ್ಕೆ ಹೊರಡಲು ಅಣಿಯಾಗುತ್ತಾರೆ.
‘ಚುನಾವಣೆ ಬಂತೆಂದರೆ ದಿನಚರಿ ಬದಲಾಯಿಸಿಕೊಳ್ಳಲೇ ಬೇಕು. ಮನೆಯಲ್ಲಿ ಅತ್ತೆ–ಮಾವ, ಮತ್ಯಾರಾದರೂ ಹಿರಿಯರಿದ್ದರೆ ಮಕ್ಕಳ ಆರೈಕೆ ಕೊಂಚ ಸುಲಭವಾಗುತ್ತದೆ. ಇಲ್ಲದಿದ್ದರೆ ಕಾರ್ಯಕರ್ತೆಯರ ಪಡಿಪಾಟಲು ಅಷ್ಟಿಷ್ಟಲ್ಲ. ಇಷ್ಟೆಲ್ಲ ಸಂಕಟಗಳ ನಡುವೆಯೂ ಮಹಿಳೆಯರು ರಾಜಕೀಯದಲ್ಲಿ ಅದಮ್ಯ ಉತ್ಸಾಹ ಹೊಂದಿದ್ದಾರೆ. ಇತ್ತೀಚೆಗೆ ನಡೆದ ಜಾಥಾವೊಂದರಲ್ಲಿ ಭಾಗವಹಿಸಲು ಬಂದಿದ್ದ ನಾಲ್ಕಾರು ಮಹಿಳೆಯರು ಚಿಕ್ಕ ಮಗುವನ್ನು ಕರೆತಂದಿದ್ದರು. ನಿದ್ದೆ ಮಾಡಿದ ಮಗುವನ್ನು ಸಮೀಪದ ಸಂಬಂಧಿಗಳ ಮನೆಯಲ್ಲಿ ಮಲಗಿಸಿ, ಪಕ್ಷದ ಅಭ್ಯರ್ಥಿ ಪರ ಪ್ರಚಾರದಲ್ಲಿ ತೊಡಗಿಕೊಂಡರು. ಈ ಪ್ರಾಮಾಣಿಕತೆಯೇ ಮಹಿಳೆಯರ ವಿಶೇಷ’ ಎಂದು ಯಲ್ಲಾಪುರದಲ್ಲಿ ಪ್ರಚಾರದಲ್ಲಿ ತೊಡಗಿದ್ದ ಕಾಂಗ್ರೆಸ್ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಸುಜಾತಾ ಗಾಂವಕರ ಹೇಳಿದರು.
‘ನಾವು ಮಹಿಳಾ ಮತದಾರರನ್ನಷ್ಟೇ ಅಲ್ಲ, ಎಲ್ಲ ವರ್ಗದ ಜನರು, ಅಂಗಡಿಕಾರರ, ಬೀದಿಬದಿ ವ್ಯಾಪಾರಿಗಳು ಎಲ್ಲರನ್ನೂ ಭೇಟಿ ಮಾಡುತ್ತೇವೆ. ಕೂಲಿ ಕಾರ್ಮಿಕರ ಮನೆಗಳಿಗೆ ಸಂಜೆಯ ನಂತರ ಹೋಗುತ್ತೇವೆ. ಮಧ್ಯಾಹ್ನ ಊಟಕ್ಕೆ ಬಿಡುವು ಕೊಟ್ಟರೆ, ರಾತ್ರಿಯವರೆಗೂ ಪ್ರಚಾರ ಮುಂದುವರಿಯುತ್ತದೆ’ ಎಂದು ಅವರು ವಿವರಿಸಿದರು.
‘ಚುನಾವಣೆ ನಾಮಪತ್ರ ಸಲ್ಲಿಕೆ ಮುಗಿದಾಗಿನಿಂದ ನಮಗೆ 5.30ಕ್ಕೇ ಬೆಳಗಾಗುತ್ತದೆ. ಬೆಳಿಗ್ಗೆ ಮನೆಬಿಟ್ಟರೆ, ಪುನಃ ಮನೆ ಸೇರಲು ರಾತ್ರಿ 10 ದಾಟುತ್ತದೆ. ಪಕ್ಷಗಳ ಕಾರ್ಯಕರ್ತೆಯರಿಗೆ ಹೆಚ್ಚಾಗಿ ಮನೆಯ ಎಲ್ಲ ಸದಸ್ಯರ ಬೆಂಬಲ ಇರುತ್ತದೆ. ಹೀಗಾಗಿ ಹೊಂದಾಣಿಕೆ ಮಾಡಿಕೊಂಡು ಪಕ್ಷ ನೀಡಿರುವ ಕಾರ್ಯಗಳನ್ನು ಸಮರ್ಥವಾಗಿ ನಿಭಾಯಿಸುತ್ತಾರೆ. ಚುನಾವಣೆ ಸಂದರ್ಭ ಬಂದಾಗ ಅಮ್ಮ–ಅತ್ತೆ ಅಥವಾ ಇನ್ಯಾರಾದರೂ ಸಂಬಂಧಿಕರು ಸಹಾಯಕ್ಕೆ ಬರುತ್ತಾರೆ. ಮಕ್ಕಳ ಜವಾಬ್ದಾರಿಯನ್ನೂ ಅವರ ಹೆಗಲಮೇಲಿಟ್ಟು, ಪ್ರಚಾರಕ್ಕೆ ಹೋಗುತ್ತೇವೆ’ ಎಂದು ಉಮ್ಮಚಗಿ ಭಾಗದಲ್ಲಿ ಪ್ರಚಾರದಲ್ಲಿದ್ದ ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷೆ ರೇಖಾ ಹೆಗಡೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
‘ಪ್ರತಿ ಬೂತ್‌ನಲ್ಲಿ 20ಕ್ಕೂ ಹೆಚ್ಚು ಸಕ್ರಿಯ ಕಾರ್ಯಕರ್ತೆಯರಿದ್ದಾರೆ. ಮಹಿಳೆಯರು–ಪುರುಷರು ಜೊತೆಗೂಡಿ ತಂಡವಾಗಿ ಹೋಗಿ, ಮನೆ–ಮನೆಗೆ ಭೇಟಿ ನೀಡಿ ಮತ ಕೇಳುತ್ತೇವೆ. ಮಹಿಳಾ ಮೋರ್ಚಾ ಘಟಕಗಳು ಅತ್ಯಂತ ಚುರುಕಾಗಿ ಕೆಲಸ ಮಾಡುತ್ತಿವೆ’ ಎಂದು ಅವರು ಹೇಳಿದರು.
‘ರಾಜಕೀಯದಲ್ಲಿ ಮಹಿಳೆಯರು ಸಕ್ರಿಯರಾಗಿದ್ದಾರೆ. ಆದರೆ, ಎಲ್ಲ ಪಕ್ಷಗಳಲ್ಲಿ ಇನ್ನೂ ಮಹಿಳಾ ತಾರತಮ್ಯ ಉಳಿದುಕೊಂಡಿದೆ. ಮಹಿಳಾ ಮೀಸಲಾತಿ ಸ್ಥಾನಗಳನ್ನು ಬಿಟ್ಟು, ಉಳಿದ ಸಾಮಾನ್ಯ ಸ್ಥಾನಗಳ ಮೀಸಲಾತಿಯಲ್ಲಿ ಮಹಿಳಾ ಆಕಾಂಕ್ಷಿಗಳಿದ್ದರೆ, ಅವರ ಬೇಡಿಕೆಗಳನ್ನು ಕಡೆಗಣಿಸುತ್ತವೆ’ ಎಂದು ಸಾಮಾಜಿಕ ಕಾರ್ಯಕರ್ತೆ ಸವಿತಾ ಕೆ ಅಭಿಪ್ರಾಯಪಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.