ಕಾರವಾರ: ಶಬ್ದದ ಅರ್ಥಕ್ಕೆ ತಕ್ಕಂತೆ ಚಿತ್ರ. ಚಿತ್ರವನ್ನು ಸೂಚಿಸುವ ಶಬ್ದ ಬಳಸಿಯೇ ಚಿತ್ರ ರಚನೆ. ಇಂತಹ ‘ಚಿತ್ರಾಕ್ಷರ’ದ ಮೂಲಕ ಮಕ್ಕಳಿಗೆ ದಿನಕ್ಕೊಂದು ಬಗೆಯ ಶಬ್ದ ಪರಿಚಯಿಸುವ ಕೆಲಸವನ್ನು ತಾಲ್ಲೂಕಿನ ಕೆರವಡಿಯ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಸಂಜೀವ ಬಸ್ತವಾಡ ಮಾಡುತ್ತಿದ್ದಾರೆ.
ಪ್ರತಿನಿತ್ಯ ಸರಾಸರಿ ಮೂರರಿಂದ ನಾಲ್ಕು ಚಿತ್ರಾಕ್ಷರ ಶಿಕ್ಷಕರ ಕೈಯ್ಯಿಂದ ಮೂಡುತ್ತವೆ. ಪ್ರಾಣಿ, ಪಕ್ಷಿ, ಪ್ರಾಕೃತಿಕ ಸೊಬಗು, ಹೀಗೆ ವಿವಿಧ ಬಗೆಯ ಚಿತ್ರಣ ಅದಕ್ಕೆ ತಕ್ಕ ಶಬ್ದ ಮೂಲಕ ಚಿತ್ರಿತಗೊಂಡಿರುತ್ತದೆ. ಅಂದು ಬಿಡಿಸಿದ ಚಿತ್ರ ಗ್ರಹಿಸಿ ವಿದ್ಯಾರ್ಥಿಗಳು ಶಬ್ದವನ್ನು ನೆನಪಿಟ್ಟುಕೊಳ್ಳಲು ಸಹಕಾರಿಯಾಗುತ್ತಿದೆ. ಕೇವಲ ತಾವು ಕಲಿಸುವ ಶಾಲೆಯಲ್ಲಷ್ಟೆ ಅಲ್ಲದೆ ವಿವಿಧ ಶಾಲೆಗಳ ವಿದ್ಯಾರ್ಥಿಗಳಿಗೂ ಸಾಮಾಜಿಕ ಜಾಲತಾಣದ ಮೂಲಕ ಚಿತ್ರ ರವಾನಿಸುವ ಕೆಲಸ ಮಾಡುತ್ತಿದ್ದಾರೆ.
ಕನ್ನಡದ ಜತೆಗೆ ಇಂಗ್ಲೀಷ್ ಶಬ್ದಗಳನ್ನೂ ಕಲಿಸಲು ಚಿತ್ರಾಕ್ಷರ ವಿಧಾನ ನೆರವಾಗುತ್ತಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಹಲವು ಇಂಗ್ಲಿಷ್ ಪದಗಳ ಪರಿಚಯಕ್ಕೆ ಚಿತ್ರಾಕ್ಷರವೇ ವರದಾನವಾಗುತ್ತಿದೆ. ಇದರೊಟ್ಟಿಗೆ ಹಸೆಚಿತ್ರ ಕಲೆ (ವರ್ಲಿ ಆರ್ಟ್) ಮಕ್ಕಳಿಗೆ ಕಲಿಸುವಲ್ಲಿಯೂ ಸಂಜೀವ ಮುಂದಿದ್ದಾರೆ.
‘ಚಿತ್ರಕಲಾ ಶಿಕ್ಷಕನಾಗಿ 17 ವರ್ಷದಿಂದ ಕೆಲಸ ಮಾಡುತ್ತಿದ್ದೇನೆ. ಸಾಧಾರಣ ಚಿತ್ರ ರಚನೆ ಕುರಿತು ತಿಳಿಸಲು ಸೀಮಿತವಾಗಬಾರದು ಎಂಬುದು ನನ್ನ ಉದ್ದೇಶವಾಗಿತ್ತು. ಇದಕ್ಕಾಗಿ ಹೊಸದಾಗಿ ಏನನ್ನಾದರೂ ಮಾಡುವ ಹಂಬಲ ಹುಟ್ಟಿತ್ತು. ಅದರ ಫಲವಾಗಿ ಚಿತ್ರಾಕ್ಷರ ರಚನೆ ಮಾಡುವುದನ್ನು ರೂಢಿಸಿಕೊಂಡೆ’ ಎನ್ನುತ್ತಾರೆ ಶಿಕ್ಷಕ ಸಂಜೀವ ಬಸ್ತವಾಡ.
‘ಮಕ್ಕಳು ಶಬ್ದಕ್ಕಿಂತ ಚಿತ್ರ ಬೇಗನೆ ಗುರುತಿಸಬಲ್ಲರು. ಇದಕ್ಕಾಗಿ ಶಬ್ದಕ್ಕೆ ತಕ್ಕಂತ ಚಿತ್ರ ರಚಿಸಿ ಅವರಿಗೆ ವಸ್ತು ಗುರುತಿಸುವುದನ್ನು ಕಲಿಸಿದೆ. ಪ್ರಾಥಮಿಕ ಶಾಲೆಯ ಶಿಕ್ಷಕನಾಗಿದ್ದ ವೇಳೆ ಇದನ್ನು ರೂಢಿಯಾಗಿಸಿಕೊಂಡೆ. ಪದೋನ್ನತಿಯೊಂದಿಗೆ ಪ್ರೌಢಶಾಲೆ ಶಿಕ್ಷಕನಾದ ಬಳಿಕ ಇಂಗ್ಲಿಷ್ ಶಬ್ದಗಳನ್ನೂ ಇಲ್ಲಿನ ವಿದ್ಯಾರ್ಥಿಗಳಿಗೆ ತಿಳಿಸುವ ಪ್ರಯತ್ನ ಮಾಡುತ್ತಿದ್ದೇನೆ’ ಎಂದು ವಿವರಿಸಿದರು.
‘ಇಂಗ್ಲಿಷ್ ಶಬ್ದಗಳನ್ನು ನೆನಪಿಟ್ಟುಕೊಳ್ಳಲು ಚಿತ್ರಾಕ್ಷರ ನೆರವಾಗಿದೆ. ಚಿತ್ರ ನೋಡಿದ್ದು ಹೆಚ್ಚುಕಾಲ ನೆನಪಿನಲ್ಲಿ ಉಳಿಯುವ ಕಾರಣ ಇದು ಸಾಧ್ಯವಾಗಿದೆ. ಈವರೆಗೆ ನೂರೈವತ್ತಕ್ಕೂ ಹೆಚ್ಚು ಇಂಗ್ಲಿಷ್ ಶಬ್ದಗಳನ್ನು ಚಿತ್ರಾಕ್ಷರದ ಮೂಲಕವೇ ಕಲಿತುಕೊಂಡಿದ್ದೇನೆ’ ಎನ್ನುತ್ತಾರೆ ವಿದ್ಯಾರ್ಥಿನಿ ಸಾಕ್ಷಿ ಬಾಂದೇಕರ್.
ಚಿತ್ರಾಕ್ಷರದ ಮೂಲಕ ಕ್ಲಿಷ್ಟ ಶಬ್ದಗಳನ್ನೂ ಸುಲಭವಾಗಿ ಮಕ್ಕಳಿಗೆ ತಿಳಿಸಲು ಅನುಕೂಲವಾಗಿದೆ. ಈವರೆಗೆ 250ಕ್ಕೂ ಹೆಚ್ಚು ಚಿತ್ರಾಕ್ಷರ ರಚಿಸಿದ್ದು ಅವುಗಳನ್ನು ಪುಸ್ತಕ ರೂಪದಲ್ಲಿ ಇಡುತ್ತಿದ್ದೇನೆ.
-ಸಂಜೀವ ಬಸ್ತವಾಡ, ಚಿತ್ರಕಲಾ ಶಿಕ್ಷಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.