ಕಾರವಾರ: ‘ಪ್ಲಾಸ್ಟಿಕ್, ಎಲೆಕ್ಟ್ರಾನಿಕ್, ವೈದ್ಯಕೀಯ ತ್ಯಾಜ್ಯಗಳು ಸೇರಿದಂತೆ ಪರಿಸರಕ್ಕೆ ಹಾನಿಕಾರಕವಾಗಬಲ್ಲ ತ್ಯಾಜ್ಯಗಳಿಂದ ಮನುಷ್ಯ ಪರಿಸರದ ಮೇಲೆ ದಾಳಿ ಮಾಡುತ್ತಿದ್ದು, ಇದಕ್ಕೆ ಕಡಿವಾಣ ಬೀಳದಿದ್ದರೆ ಭೂಮಂಡಲ ಅವನತಿಯತ್ತ ಸಾಗಲಿದೆ’ ಎಂದು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ ಬಿ.ಕೆ. ಸಂತೋಷ್ ಹೇಳಿದರು.
ಇಲ್ಲಿನ ನಗರಸಭೆಯ ಸಭಾಂಗಣದಲ್ಲಿ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ಕಚೇರಿ ವತಿಯಿಂದ ರಾಷ್ಟ್ರೀಯ ಏಕತಾ ಸಪ್ತಾಹದ ಅಂಗವಾಗಿ ಸೋಮವಾರ ಹಮ್ಮಿಕೊಂಡಿದ್ದ ಪರಿಸರ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ತ್ಯಾಜ್ಯ ಉತ್ಪತ್ತಿ ಕಡಿಮೆ ಮಾಡುವುದು, ವ್ಯವಸ್ಥಿತ ವಿಲೇವಾರಿ ಸೇರಿ ಹಲವು ಸುರಕ್ಷತಾ ಕ್ರಮ ಕೈಗೊಂಡರೆ ಪರಿಸರ ಸಂರಕ್ಷಣೆಗೆ ಅನುಕೂಲವಾಗುತ್ತದೆ’ ಎಂದರು.
ಉಪನ್ಯಾಸ ನೀಡಿದ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಉಪ ಪರಿಸರ ಅಧಿಕಾರಿ ಗಣಪತಿ ಹೆಗಡೆ, ‘ನೀರಿನ ಸಂರಕ್ಷಣೆ ಅಗತ್ಯವಾಗಿದ್ದು, ಜೀವಜಲ ಸುರಕ್ಷಿತವಾಗಿರದಿದ್ದರೆ ಜೀವಿಸಲು ಸಾಧ್ಯವಾಗದು’ ಎಂದು ಹೇಳಿದರು.
ನಗರಸಭೆ ಅಧ್ಯಕ್ಷ ರವಿರಾಜ್ ಅಂಕೋಲೇಕರ್ ಅಧ್ಯಕ್ಷತೆ ವಹಿಸಿದ್ದರು. ಪೌರಾಯುಕ್ತ ಜಗದೀಶ ಹುಲಿಗೆಜ್ಜಿ ಮಾತನಾಡಿದರು.
ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಯೋಜನಾ ಸಹಾಯಕಿ ಅಮೃತಾ ಶೇಟ್, ಹಿರಿಯ ಆರೋಗ್ಯ ನಿರೀಕ್ಷಕ ಯಾಕೂಬ್ ಶೇಖ್, ಕಿರಿಯ ಆರೋಗ್ಯ ನಿರೀಕ್ಷಕಿ ದೀಪಾ ಶೆಟ್ಟಿ, ಇತರರು ಇದ್ದರು. ಲೆಕ್ಕಪಾಲಕ ಮಂಜುನಾಥ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.