ಶಿರಸಿ: ಬಿಡುವಿಲ್ಲದೇ ಚಟುವಟಿಕೆ ನಡೆಸುವ ಅವಿಭಕ್ತ ಕುಟುಂಬದ ಪುಟಾಣಿ ಜೇನು ಹುಳುಗಳು ಪರಿಸರ ಸಮತೋಲನ ಕಾಪಾಡುವಲ್ಲಿ ದೊಡ್ಡ ಪಾತ್ರ ನಿರ್ವಹಿಸುತ್ತವೆ. ಕೃಷಿಕರು ಇದರ ಮಹತ್ವ ಮನಗಂಡಿರುವ ಪರಿಣಾಮ ಉತ್ತರ ಕನ್ನಡ ಜಿಲ್ಲೆಯಲ್ಲಿ ಜೇನು ಕೃಷಿ ಪ್ರಗತಿಯತ್ತ ಸಾಗಿದೆ.
ಜೇನಿನಲ್ಲಿ ಹಲವಾರು ಜಾತಿಗಳಿದ್ದರೂ, ಸ್ಥಳೀಯವಾಗಿ ಬಳಕೆಯಾಗುವುದು ಹೆಜ್ಜೇನು, ತುಡುವೆ, ಮಿಸರಿ, ಕೋಲ್ಜೇನು ತುಪ್ಪ ಮಾತ್ರ. ತುಡವೆ ಜೇನುತುಪ್ಪ ಅಧಿಕ ಪ್ರಮಾಣದಲ್ಲಿ ಉತ್ಪಾದನೆಯಾಗುತ್ತದೆ.
ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಲ್ಲಿ ಜೇನುತುಪ್ಪದ ಉತ್ಪಾದನೆ ದ್ವಿಗುಣಗೊಂಡಿದೆ. ಶಿರಸಿ, ಸಿದ್ದಾಪುರ, ಯಲ್ಲಾಪುರ, ಹೊನ್ನಾವರ ತಾಲ್ಲೂಕುಗಳಲ್ಲಿ ಜೇನುಕೃಷಿ ಪ್ರಮುಖ ಉಪ ಆದಾಯವಾಗಿದೆ. 5000ಕ್ಕೂ ಹೆಚ್ಚು ಜೇನುಕೃಷಿಕರು ವಾರ್ಷಿಕ 60 ಟನ್‌ನಷ್ಟು ಜೇನುತುಪ್ಪ ಉತ್ಪಾದನೆ ಮಾಡುತ್ತಾರೆ ಎಂಬುದು ತೋಟಗಾರಿಕಾ ಇಲಾಖೆ ಅಧಿಕಾರಿಗಳು ನೀಡುವ ಮಾಹಿತಿ.
‘ಜೇನು ಸಾಕಣೆಯಿಂದ ಆಹಾರ ಬೆಳೆಗಳ ಉತ್ಪಾದನೆ ವೃದ್ಧಿಸುತ್ತದೆ ಎಂಬುದನ್ನು ರೈತರು ಪ್ರಾಯೋಗಿಕವಾಗಿ ಕಂಡುಕೊಂಡಿದ್ದಾರೆ. ಹೀಗಾಗಿ ತೋಟ ಇರುವ ಬಹುತೇಕ ಎಲ್ಲ ರೈತರು ಕನಿಷ್ಠ ಎರಡು ಪೆಟ್ಟಿಗೆಯನ್ನಾದರೂ ಇಟ್ಟು ಜೇನು ಸಾಕಣೆ ಮಾಡುತ್ತಾರೆ. ಜೇನು ಕೃಷಿಯನ್ನೇ ಮುಖ್ಯ ಉದ್ಯೋಗವನ್ನಾಗಿ ಮಾಡಿಕೊಂಡವರೂ ಇದ್ದಾರೆ. ಜೇನು ಕೃಷಿಕರ ಒಕ್ಕೂಟ ಸ್ಥಾಪನೆಯಾಗಿದೆ. ಇದರಲ್ಲಿ 700ರಷ್ಟು ಸದಸ್ಯರಿದ್ದಾರೆ. ತಾಲ್ಲೂಕಿನಲ್ಲಿ 1500 ಜೇನು ಕೃಷಿಕರಿದ್ದಾರೆ’ ಎನ್ನುತ್ತಾರೆ ಸಹಾಯಕ ತೋಟಗಾರಿಕಾ ನಿರ್ದೇಶಕ ಸತೀಶ ಹೆಗಡೆ.
‘ತೋಟಗಾರಿಕಾ ಇಲಾಖೆಯಲ್ಲಿ ರಾಷ್ಟ್ರೀಯ ತೋಟಗಾರಿಕಾ ಮಿಷನ್ ಯೋಜನೆಯಡಿ ಪರಾಗಸ್ಪರ್ಶಕ್ಕಾಗಿ ಜೇನು ಕೃಷಿ, ರಾಜ್ಯವಲಯದಿಂದ ಮಧುವನ ಅಭಿವೃದ್ಧಿ, ಜಿಲ್ಲಾ ಪಂಚಾಯ್ತಿಯಿಂದ ಜೇನುಕೃಷಿ ಅಭಿವೃದ್ಧಿ ಈ ಮೂರು ಯೋಜನೆಗಳು ಇವೆ. ತಾಲ್ಲೂಕಿನಲ್ಲಿ ಕಳೆದ ವರ್ಷ 500 ಪೆಟ್ಟಿಗೆಗಳನ್ನು ವಿತರಿಸಲಾಗಿದೆ’ ಎಂದು ತಿಳಿಸಿದರು.
18 ವರ್ಷಗಳಿಂದ ಜೇನು ಹಬ್ಬ:
ಶಿರಸಿಯ ಪ್ರಕೃತಿ ಸಂಸ್ಥೆಯು 18 ವರ್ಷಗಳಿಂದ ಗ್ರಾಮೀಣ ಪ್ರದೇಶದಲ್ಲಿ ಜೇನು ಹಬ್ಬ ಆಚರಿಸುತ್ತ, ಜಾಗೃತಿ ಮೂಡಿಸುವ ಪ್ರಯತ್ನ ಮಾಡುತ್ತಿದೆ. ‘ಪರಿಸರವಾದಿ ಪಾಂಡುರಂಗ ಹೆಗಡೆ ನೇತೃತ್ವದಲ್ಲಿ ವರ್ಷಕ್ಕೆ ಕನಿಷ್ಠ ಮೂರು ಜೇನು ಹಬ್ಬವನ್ನಾದರೂ ಆಚರಿಸುತ್ತೇವೆ. ಮಕ್ಕಳೇ ನಮ್ಮ ಮುಖ್ಯ ಪ್ರೇಕ್ಷಕರು. ಮಕ್ಕಳಲ್ಲಿ ಅರಿವು ಮೂಡಿದರೆ, ಅವರು ಭವಿಷ್ಯದಲ್ಲಿ ಜೇನುಕೃಷಿಕರಾಗುತ್ತಾರೆ. ಜೇನು ಹಬ್ಬದಿಂದ ಪ್ರೇರಿತರಾದ ಹಲವರು ಜೇನು ಕೃಷಿ ಆರಂಭಿಸಿದ್ದಾರೆ’ ಎನ್ನುತ್ತಾರೆ ಪ್ರಕೃತಿ ಸಂಸ್ಥೆಯ ಪ್ರಮುಖ ಆರ್.ಪಿ.ಹೆಗಡೆ ಗೋರ್ನಮನೆ.
ತೋಟಗಾರಿಕಾ ಕಾಲೇಜಿನಲ್ಲಿ ಕೀಟ ವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕ ರಘುನಾಥ ಆರ್ ಅವರು, ಅನೇಕ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿದ್ದಾರೆ.
ಖಳನಾಯಕನಿಂದ ನಾಯಕನೆಡೆಗೆ..
ಶೇ 80ರಷ್ಟು ಪರಾಗಸ್ಪರ್ಶ ಕ್ರಿಯೆ ಜೇನಿನಿಂದಲೇ ಆಗುತ್ತದೆ. ಆದರೆ, ಭಾರತದಲ್ಲಿ ಶೇ 75ರಷ್ಟು ಜೇನು ನಾಶವಾಗಿರುವುದು ಜನರಿಗೆ ಅರಿವೇ ಇಲ್ಲ. ಇದೇ ರೀತಿ ಜೇನು ನಾಶವಾದರೆ, ಆಹಾರ ಬೆಳವಣಿಗೆ ಕುಂಠಿತವಾಗುತ್ತದೆ. ನಮಗೆ ಹುಲಿ, ಆನೆಗಳು ಸತ್ತರೆ ಗೊತ್ತಾಗುತ್ತದೆ. ಚಿಕ್ಕ ಜೇನು ಹುಳುಗಳು ಸತ್ತರೆ ಸುದ್ದಿಯಾಗುವುದಿಲ್ಲ. ಜೇನಿನ ಬಗ್ಗೆ ಪಠ್ಯದಲ್ಲೂ ಅತಿ ಕಡಿಮೆ ಮಾಹಿತಿಯಿದೆ ಎನ್ನುತ್ತಾರೆ ಜೊಯಿಡಾ ಹನಿ ಪಾರ್ಕ್ ಮಾಲೀಕ ನರಸಿಂಹ ಛಾಪಖಂಡ.
‘ಜೇನಿನ ಮಹತ್ವದ ಬಗ್ಗೆ ಅರಿವು ಮೂಡಿಸುವ ಭಾಗವಾಗಿ ಈವರೆಗೆ ಶಾಲಾ ಮಕ್ಕಳು ಸೇರಿದಂತೆ 20ಸಾವಿರ ಜನರಿಗೆ ಜೇನುಪಾಠ ಮಾಡಿದ್ದೇವೆ. ನೇಚರ್ ಕ್ಯಾಂಪ್ ಇರುವಾಗ ಅಲ್ಲಿಗೇ ಜೇನುಪೆಟ್ಟಿಗೆ ಕೊಂಡೊಯ್ದು ಜನರಿಗೆ ಅದರ ಮಹತ್ವ ತಿಳಿಸಿದ್ದೇವೆ. ಪರಿಣಾಮವಾಗಿ, ಜೇನುತುಪ್ಪ ಮಾತ್ರವಲ್ಲ, ನಮಗೆ ಜೇನು ಹುಳುಗಳು ಕೂಡ ಬೇಕು ಎಂಬ ಜಾಗೃತಿ ಜನರಲ್ಲಿ ಮೂಡಿದೆ. ಖಳನಾಯಕನ ಸ್ಥಾನದಲ್ಲಿದ್ದ ಜೇನು ಈಗ ನಾಯಕನ ಸ್ಥಾನಕ್ಕೆ ಬರುತ್ತಿದೆ’ ಎಂದು ಅವರು ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.