ADVERTISEMENT

ಸಿದ್ದಾಪುರ: ಮಲೆನಾಡಿನ ಅಡಿಕೆಗೆ ಕೊಳೆ ರೋಗ

ಮಳೆಗಾಲದ ಅಂತಿಮ ಹಂತದಲ್ಲೂ ಕೃಷಿಕರಿಗೆ ಹೆಚ್ಚಿನ ಆತಂಕ

ರವೀಂದ್ರ ಭಟ್ಟ, ಬಳಗುಳಿ
Published 17 ಸೆಪ್ಟೆಂಬರ್ 2020, 19:30 IST
Last Updated 17 ಸೆಪ್ಟೆಂಬರ್ 2020, 19:30 IST
ಕೊಳೆ ರೋಗದಿಂದ ಉದುರಿದ ಅಡಿಕೆ (ಸಂಗ್ರಹ ಚಿತ್ರ)
ಕೊಳೆ ರೋಗದಿಂದ ಉದುರಿದ ಅಡಿಕೆ (ಸಂಗ್ರಹ ಚಿತ್ರ)   

ಸಿದ್ದಾಪುರ: ಮಳೆಗಾಲ ಮುಕ್ತಾಯಗೊಳ್ಳುತ್ತಿರುವ ಈ ಸಂದರ್ಭದಲ್ಲಿ ಅಡಿಕೆಗೆ ಕೊಳೆ ರೋಗ ತಾಲ್ಲೂಕಿನಲ್ಲಿ ವ್ಯಾಪಕವಾಗಿ ಕಾಣಿಸಿಕೊಂಡಿದೆ. ತಾಲ್ಲೂಕಿನ ಎಲ್ಲ ಕಡೆ ತೀವ್ರವಾಗಿ ಅಲ್ಲದಿದ್ದರೂ ಬಹಳಷ್ಟು ಅಡಿಕೆ ತೋಟಗಳಲ್ಲಿ ಒಂದೆರಡು ಮರಗಳಿಗಾದರೂ ಕೊಳೆ ರೋಗ ತಗುಲಿದೆ.

ಕೆಲವು ಕಡೆ ಹೆಚ್ಚಿನ ಪ್ರಮಾಣದಲ್ಲಿಯೂ ಈ ರೋಗ ಕಾಣಿಸಿಕೊಂಡಿದೆ. ಅತಿ ಹೆಚ್ಚು ಮಳೆ ಬೀಳುವ ಪ್ರದೇಶದಲ್ಲಿ ಸ್ವಾಭಾವಿಕವಾಗಿಯೇ ಕೊಳೆ ರೋಗದ ಪ್ರಮಾಣ ಜಾಸ್ತಿ ಇದೆ. ತಾಲ್ಲೂಕಿನ ಹೆಗ್ಗರಣಿ, ನಿಲ್ಕುಂದ, ಮನಮನೆ ಗ್ರಾಮ ಪಂಚಾಯ್ತಿ ಸೇರಿದಂತೆ ಕೆಲವು ಗ್ರಾಮ ಪಂಚಾಯ್ತಿಗಳಲ್ಲಿ ಕೊಳೆ ರೋಗದ ಪ್ರಮಾಣ ಜಾಸ್ತಿ ಇದೆ ಎಂದು ತೋಟಗಾರಿಕಾ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

‘ಆಗಸ್ಟ್‌ ಮೊದಲ ಹಾಗೂ ಎರಡನೇ ವಾರದಲ್ಲಿ ನಿರಂತರವಾಗಿ ಮಳೆ ಸುರಿದಿದ್ದರಿಂದ ಬೋರ್ಡೋ ಮಿಶ್ರಣ ಸಿಂಪಡಣೆಗೆ ಅವಕಾಶ ಸಿಗಲಿಲ್ಲ. ಅದರೊಂದಿಗೆ ಬೋರ್ಡೊ ಸಿಂಪಡಣೆ ಮಾಡುವ ಕೆಲಸಗಾರರ ಅಲಭ್ಯತೆಯಿಂದಲೂ ಸಕಾಲದಲ್ಲಿ ಮದ್ದು ಹೊಡೆಸಲು ಕೆಲವರಿಗೆ ಆಗಲಿಲ್ಲ. ಇದು ಕೊಳೆ ರೋಗ ಕಾಣಿಸಿಕೊಳ್ಳಲು ಕಾರಣವಾಯಿತುʼ ಎಂಬುದು ರೈತರ ಅಭಿಪ್ರಾಯ. ಈವರೆಗೆ ತಾಲ್ಲೂಕಿನಲ್ಲಿ ವಾಡಿಕೆಗಿಂತ ಶೇ 16 ರಷ್ಟು ಜಾಸ್ತಿ ಮಳೆ ಆಗಿದೆ ಎಂದು ಕೃಷಿ ಇಲಾಖೆ ಮಾಹಿತಿ ನೀಡಿದೆ.

ADVERTISEMENT

ತಾಲ್ಲೂಕಿನಲ್ಲಿ 4,890 ಹೆಕ್ಟೇರ್‌ ಅಡಿಕೆ ತೋಟವಿದ್ದು, ತಾಲ್ಲೂಕಿನ ಜನರ ಪ್ರಮುಖ ಜೀವನಾಧಾರ ಬೆಳೆಯಾಗಿದೆ. ಅಡಿಕೆ ಬೆಳೆಯ ರಕ್ಷಣೆ ಮಾತ್ರ ಪ್ರತಿವರ್ಷ ಮಳೆಗಾಲದಲ್ಲಿ ರೈತರಿಗೆ ಸವಾಲಿನ ಕಾರ್ಯವಾಗುತ್ತಿದೆ. ಮೊದಲಿನಿಂದಲೂ ಇರುವ ಅಡಿಕೆಯ ಕೊಳೆ ರೋಗ ಮತ್ತು ಒಂದೆರಡು ದಶಕಗಳಿಂದ ಆರಂಭಗೊಂಡಿರುವ ಮಂಗಗಳ ಕಾಟ ಅಡಿಕೆ ಬೆಳೆಗಾರರನ್ನು ಸಾಕಷ್ಟು ಚಿಂತೆಗೀಡು ಮಾಡುತ್ತಿವೆ.

‘ಮಿಶ್ರಣ ಸಿಂಪಡಣೆ ಸೂಕ್ತ’:‘ಈಗ ಮಳೆ ಕಡಿಮೆಯಾಗಿದ್ದು, ಕೊಳೆ ರೋಗ ಕಾಣಿಸಿಕೊಂಡ ಅಡಿಕೆ ತೋಟದಲ್ಲಿ ಮದ್ದು ಹೊಡೆಯಲು ಅವಕಾಶವಿದೆ. ಆದ್ದರಿಂದ ಮುಂಜಾಗ್ರತೆಯ ದೃಷ್ಟಿಯಿಂದ ಬೋರ್ಡೋ ಮಿಶ್ರಣ ಸಿಂಪಡಣೆ ಮಾಡುವುದು ಉತ್ತಮ. ಇದರಿಂದ ಕೊಳೆ ರೋಗದ ನಿಯಂತ್ರಣ ಆಗುವುದರೊಂದಿಗೆ, ಈಗ ಕೊಳೆ ರೋಗ ತಗುಲಿರುವ ಅಡಿಕೆ ಮರಕ್ಕೆ ಬರುವ ವರ್ಷ ರೋಗ ತಗುಲದಂತೆ ತಡೆಯಲೂ ಕೂಡ ಸಹಕಾರಿಯಾಗುತ್ತದೆ’ ಎಂದು ಸಹಾಯಕ ತೋಟಗಾರಿಕಾ ನಿರ್ದೇಶಕ ಮಹಾಬಲೇಶ್ವರ.ಬಿ.ಎಸ್.‌ ಸಲಹೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.