ಅಂಕೋಲಾ: ಗ್ರಾಮೀಣ ಸೊಗಡಿನ ಬರವಣಿಗೆಯಲ್ಲಿ ಕೃತಿಯನ್ನು ನಿರೂಪಿಸುವ ಶೈಲಿಯಿಂದ ನಾಡಿನ ಗಮನಸೆಳೆದ ಬರಹಗಾರರಾಗಿದ್ದ ತಾಲ್ಲೂಕಿನ ಅಂಬಾರಕೊಡ್ಲದ ವಿಷ್ಣು ನಾಯ್ಕ (80) ಶನಿವಾರ ತಡರಾತ್ರಿ ಕಾರವಾರದ ಜಿಲ್ಲಾಸ್ಪತ್ರೆಯಲ್ಲಿ ನಿಧನರಾದರು.
ಕಳೆದ ಕೆಲವು ದಿನಗಳಿಂದ ವಯೋಸಹಜ ಅನಾರೋಗ್ಯಕ್ಕೆ ತುತ್ತಾಗಿದ್ದ ಅವರನ್ನು ಚಿಕಿತ್ಸೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಅವರು ಮೃತಪಟ್ಟರು. ಮೃತರಿಗೆ ಇಬ್ಬರು ಪುತ್ರಿಯರು ಇದ್ದಾರೆ.
1944ರಲ್ಲಿ ತಾಲ್ಲೂಕಿನ ಅಂಬಾರಕೊಡ್ಲಾದಲ್ಲಿ ಅನಕ್ಷರಸ್ತ ಕುಟುಂಬದಲ್ಲಿ ಜನಿಸಿದ್ದ ವಿಷ್ಣು ನಾಯ್ಕ ಅವರು ಜನಪದ ಮುಖ್ಯ ವಿಷಯವನ್ನಾಗಿ ಸ್ನಾತಕೋತ್ತರ ಪದವಿ ಪಡೆದಿದ್ದರು. 50 ವರ್ಷಗಳ ಸಾಹಿತ್ಯ ಕೃಷಿಯಲ್ಲಿ 25 ಸಂಪಾದಿತ ಕೃತಿಗಳನ್ನು ಒಳಗೊಂಡು 66 ಕೃತಿಗಳನ್ನು ರಚಿಸಿದ್ದಾರೆ.
ಕವನ, ನಾಟಕ, ಅಂಕಣ, ವಿಮರ್ಶೆ, ಕಥಾಸಂಕಲನ ಮತ್ತು ಜೀವನ ಪರಿಚಯಗಳ ಕೃತಿಗಳನ್ನು ಬರೆದಿದ್ದಾರೆ. 2007ರಲ್ಲಿ ಭಟ್ಕಳದಲ್ಲಿ ನಡೆದ ಉತ್ತರ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
ಮನೆಯ ಮಹಡಿಯಲ್ಲಿ ಸಾಹಿತ್ಯ ವಸ್ತು ಸಂಗ್ರಹಾಲಯ ಸ್ಥಾಪಿಸಿದ್ದ ಅವರು ಅಲ್ಲಿ ನಾಡಿನ ಹೆಸರಾಂತ ಸಾಹಿತಿಗಳೊಂದಿಗೆ ನಡೆಸಿದ ಪತ್ರ ವ್ಯವಹಾರ, ಉಭಯ ಕುಶಲೋಪರಿ ವಿನಿಮಯ, ಹೆಸರಾಂತ ಸಾಹಿತಿಗಳ ಕೈಬರಹ, ದಿನಕರ ದೇಸಾಯಿ ಅವರ ಸಾಹಿತ್ಯ ಕೃತಿಗಳನ್ನು ಇರಿಸಿದ್ದರು. ಅಲ್ಲದೇ, ದೇಶಿ ವಸ್ತುಗಳ ಸಂಗ್ರಹವನ್ನೂ ಇರಿಸಿದ್ದರು.
ರಾಘವೇಂದ್ರ ಪ್ರಕಾಶನ ಸ್ಥಾಪಿಸಿ, ಮುನ್ನಡೆಸಿದ್ದ ಅವರು 183 ಗ್ರಂಥಗಳನ್ನು ಪ್ರಕಾಶನದ ಮೂಲಕ ಪ್ರಕಟಿಸಿದ್ದರು.
ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಆದರ್ಶ ಶಿಕ್ಷಕ ರಾಜ್ಯ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಅತ್ಯುತ್ತಮ ಗ್ರಂಥ ಪ್ರಕಾಶಕ, ಬೇಂದ್ರೆ ಕಾವ್ಯ ಪುರಸ್ಕಾರ ಸೇರಿದಂತೆ ಹಲವು ಪ್ರಶಸ್ತಿಗಳನ್ನೂ ಮುಡಿಗೇರಿಸಿಕೊಂಡಿದ್ದರು.
ಮೃತರ ಅಂತ್ಯಕ್ರಿಯೆ ಭಾನುವಾರ ಬೆಳಿಗ್ಗೆ 11.30ಕ್ಕೆ ಅಂಬಾರಕೊಡ್ಲ ಗ್ರಾಮದಲ್ಲಿ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.