ಕಾರವಾರ: ಯಶವಂತಪುರ– ಕಾರವಾರ ನಡುವೆ ವಾರದಲ್ಲಿ ಮೂರು ದಿನ ಸಂಚರಿಸುವ ಎಕ್ಸ್‌ಪ್ರೆಸ್ ರೈಲಿನ (ಸಂಖ್ಯೆ 16515) ವೇಗವನ್ನು ಹೆಚ್ಚಿಸಲು ಕೊಂಕಣ ರೈಲ್ವೆ ತೀರ್ಮಾನಿಸಿದೆ. ಇದರಿಂದ ಕಾರವಾರಕ್ಕೆ 50 ನಿಮಿಷ ಮೊದಲೇ ತಲುಪಲಿದೆ. ಈ ಹಿನ್ನೆಲೆಯಲ್ಲಿ ಜ.24ರಿಂದ ಅನ್ವಯವಾಗುವಂತೆ ಹೊಸ ವೇಳಾಪಟ್ಟಿಯನ್ನು ಪ್ರಕಟಿಸಿದೆ.
ಮಂಗಳೂರು ಜಂಕ್ಷನ್‌ನಿಂದ ಕಾರವಾರದ ನಡುವೆ ರೈಲಿನ ವೇಗವರ್ಧನೆಯಾಗಲಿದೆ. ಯಶವಂತಪುರದಿಂದ ಎಂದಿನಂತೆ ಬೆಳಿಗ್ಗೆ 7ಕ್ಕೆ ಪ್ರಯಾಣ ಆರಂಭಿಸಿ, ಸಂಜೆ 4.40ರ ಬದಲು 4.35ಕ್ಕೆ ತಲುಪಲಿದೆ. ಅಲ್ಲಿಂದ 5 ಗಂಟೆಯ ಬದಲಾಗಿ 4.45ಕ್ಕೆ ಹೊರಡಲಿದೆ. ಭಟ್ಕಳಕ್ಕೆ ಸಂಜೆ 7.46ರ ಬದಲು 7.28ಕ್ಕೆ ತಲುಪಿ, 7.30ಕ್ಕೆ ಹೊರಡಲಿದೆ. ಹೊನ್ನಾವರಕ್ಕೆ ರಾತ್ರಿ 8.10ಕ್ಕೆ ತಲುಪಿ, 8.12ಕ್ಕೆ, ಕುಮಟಾಕ್ಕೆ 8.40ಕ್ಕೆ ಬಂದು, 8.42ಕ್ಕೆ ಸಂಚಾರ ಆರಂಭಿಸಲಿದೆ. ಅಂಕೋಲಾಕ್ಕೆ 9.22ಕ್ಕೆ ತಲುಪಲಿದ್ದು, 9.24ಕ್ಕೆ ಹೊರಟು ರಾತ್ರಿ 10.30ಕ್ಕೆ ಕಾರವಾರಕ್ಕೆ ಬರಲಿದೆ. ಮೊದಲು ರಾತ್ರಿ 11.20ಕ್ಕೆ ತಲುಪುತ್ತಿತ್ತು.
‘ವಿದ್ಯುತ್ ಚಾಲಿತ ಎಂಜಿನ್’ಅಳವಡಿಕೆ:
ಈ ಮಾರ್ಗದಲ್ಲಿ ವಿದ್ಯುತ್ ಲೋಕೊ ಅಳವಡಿಸಿದ ಮೊದಲ ಪ್ರಯಾಣಿಕರ ರೈಲು ಜ.19ರಂದು ಮಂಗಳೂರಿನಿಂದ ಕಾರವಾರಕ್ಕೆ ಯಶಸ್ವಿಯಾಗಿ ಸಂಚರಿಸಿದೆ. ಯಶವಂತಪುರದಿಂದ ಬಂದ ರೈಲಿಗೆ ಮಂಗಳೂರಿನಲ್ಲಿ ‘ವಿದ್ಯುತ್ ಚಾಲಿತ ಎಂಜಿನ್’ಅಳವಡಿಸಿ ಪ್ರಯಾಣ ಮುಂದುವರಿಸಲಾಯಿತು. ಅಂತೆಯೇ ಕಾರವಾರದಿಂದ ಮಂಗಳೂರಿಗೆ ಕೂಡ ಹೀಗೇ ಸಂಚರಿಸಿತು. ಈ ಮಾರ್ಗದಲ್ಲಿ ಇನ್ನುಮುಂದೆ ವಿದ್ಯುತ್ ಎಂಜಿನ್ ಅಳವಡಿಸಿದ ರೈಲುಗಳ ಸಂಚಾರ ಇರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.