ADVERTISEMENT

ಕೇರಳದಿಂದ ಮೆಕ್ಕಾಕ್ಕೆ ಪಾದಯಾತ್ರೆ: 8,640 ಕಿ.ಮೀ ನಡಿಗೆ ಕೈಗೊಂಡ ಯುವಕ

ಯುವಕನಿಗೆ ಭಟ್ಕಳದಲ್ಲಿ ಅದ್ಧೂರಿ ಸ್ವಾಗತ

​ಪ್ರಜಾವಾಣಿ ವಾರ್ತೆ
Published 14 ಜೂನ್ 2022, 11:32 IST
Last Updated 14 ಜೂನ್ 2022, 11:32 IST
ಕೇರಳದ ಮಲಪ್ಪುರಂನಿಂದ ಮೆಕ್ಕಾಗೆ ಕಾಲ್ನಡಿಗೆಯ ಯಾತ್ರೆ ಮಾಡುತ್ತಿರುವ ಯುವಕ ಶಿಹಾಬ್‌ ಅವರನ್ನು ಭಟ್ಕಳದಲ್ಲಿ ಯುವಕರು ಮಂಗಳವಾರ ಸ್ವಾಗತಿಸಿದರು
ಕೇರಳದ ಮಲಪ್ಪುರಂನಿಂದ ಮೆಕ್ಕಾಗೆ ಕಾಲ್ನಡಿಗೆಯ ಯಾತ್ರೆ ಮಾಡುತ್ತಿರುವ ಯುವಕ ಶಿಹಾಬ್‌ ಅವರನ್ನು ಭಟ್ಕಳದಲ್ಲಿ ಯುವಕರು ಮಂಗಳವಾರ ಸ್ವಾಗತಿಸಿದರು   

ಭಟ್ಕಳ: ಮುಸ್ಲಿಮರು ಪವಿತ್ರ ಮೆಕ್ಕಾ ಹಜ್ ಯಾತ್ರೆಗೆ ವಿಮಾನ, ಹಡಗುಗಳಲ್ಲಿ ಪ್ರಯಾಣಿಸುವುದು ಸಾಮಾನ್ಯ. ಆದರೆ, ಕೇರಳದ ಯುವಕರೊಬ್ಬರು ನಡೆದುಕೊಂಡೇ ಸಾಗುತ್ತಿದ್ದಾರೆ. ಭಟ್ಕಳಕ್ಕೆ ಮಂಗಳವಾರ ತಲುಪಿದ ಅವರನ್ನು ಸ್ಥಳೀಯರು ಅದ್ಧೂರಿಯಾಗಿ ಸ್ವಾಗತಿಸಿದರು.

ಕೇರಳದ ಮಲಪ್ಪುರಂ ಜಿಲ್ಲೆಯ ಅಟವನಾಡು ಗ್ರಾಮದ ಶಿಹಾಬ್ ಚೋಥೋರ್ (30) ಇಂಥ ಸಾಹಸ ಮಾಡುತ್ತಿದ್ದಾರೆ. ತಮ್ಮ ಊರಿನಿಂದ ಜೂನ್ 2ರಂದು ಪ್ರಯಾಣ ಆರಂಭಿಸಿದ ಅವರು, ಸುಮಾರು 8,640 ಕಿಲೋಮೀಟರ್ ದೂರವನ್ನು 280 ದಿನಗಳಲ್ಲಿ ಕ್ರಮಿಸುವ ಗುರಿ ಹೊಂದಿದ್ದಾರೆ.

ಕರ್ನಾಟಕ, ಗೋವಾ, ಮಹಾರಾಷ್ಟ್ರ, ಮಧ್ಯಪ್ರದೇಶ, ರಾಜಸ್ಥಾನ, ಹರಿಯಾಣ ರಾಜ್ಯಗಳ ಮೂಲಕ ಸಾಗಿ ಪಂಜಾಬ್‌ನ ವಾಘಾ ಗಡಿಯ ಮೂಲಕ ಪಾಕಿಸ್ತಾನ ಪ್ರವೇಶಿಸಲಿದ್ದಾರೆ. ಬಳಿಕ ಇರಾನ್, ಇರಾಕ್ ಹಾಗೂ ಕುವೈತ್ ಮೂಲಕ ಪ್ರಯಾಣಿಸಿ ಕೊನೆಗೆ ಸೌದಿ ಅರೇಬಿಯಾ ಮಾರ್ಗವಾಗಿ ಅಲ್ಲಿಂದ ಮೆಕ್ಕಾ ತಲುಪಲು ಉದ್ದೇಶಿಸಿದ್ದಾರೆ.

ADVERTISEMENT

ಭಟ್ಕಳಕ್ಕೆ ನೆರೆಯ ಉಡುಪಿ ಜಿಲ್ಲೆಯ ಮೂಲಕ ಬಂದ ಅವರನ್ನು, ಗೊರ್ಟೆ ಭಾಗದಲ್ಲಿ ನೂರಾರು ಯುವಕರು ಸ್ವಾಗತಿಸಿದರು. ಪಟ್ಟಣದ ನೂರ್ ಮಸೀದಿಗೆ ಮೆರವಣಿಗೆಯಲ್ಲಿ ಕರೆದುಕೊಂಡು ಬಂದು ಸನ್ಮಾನಿಸಿದರು. ನಂತರ ಅಲ್ಲಿಂದ ಪಾದಯಾತ್ರೆ ಮುಂದುವರಿಸಿದ ಅವರೊಂದಿಗೆ ನೂರಾರು ಮಂದಿ ಜೊತೆಯಾಗಿ ಮುರುಡೇಶ್ವರ ತಲುಪಿಸಿ ವಾಪಸಾದರು. ಸಂಜೆ ಹೊನ್ನಾವರದ ಮಂಕಿಯ ಮಸೀದಿಯಲ್ಲಿ ವಾಸ್ತವ್ಯವಿದ್ದು, ಅಲ್ಲಿಂದ ಪ್ರಯಾಣ ಮುಂದಕ್ಕೆ ಸಾಗಲಿದ್ದಾರೆ.

‘ಊರಿನಲ್ಲಿ ಸೂಪರ್ ಮಾರ್ಕೆಟ್ ನಡೆಸುತ್ತಿದ್ದ ನಾನು, ಒಂದು ವರ್ಷದ ಹಿಂದೆಯೇ ಕಾಲ್ನಡಿಗೆಯ ಮೂಲಕ ಹಜ್ ಯಾತ್ರೆಗೆ ತೆರಳಲು ಸಂಕಲ್ಪ ಮಾಡಿದ್ದೆ. ಹಜ್‌ಗೆ ತೆರಳಲು ಭಾರತದಿಂದ ಐದು ದೇಶಗಳ ಪ್ರಯಾಣ ಮಾಡಬೇಕಾಗುತ್ತದೆ. 10 ಕೆ.ಜಿ ತೂಕದ ಚೀಲವನ್ನು ಬೆನ್ನಿನ ಮೇಲೆ ಹೊತ್ತುಕೊಂಡು ಸಾಗುತ್ತಿದ್ದು, ನನಗೆ ಹೋದಲೆಲ್ಲಾ ಉತ್ತಮ ಸ್ವಾಗತ ಸಿಗುತ್ತಿದೆ. ಕೇರಳ ಹಾಗೂ ಕೇಂದ್ರ ಸರ್ಕಾರ ಕೂಡ ಯಾತ್ರೆಗೆ ಬೆಂಬಲ ಸೂಚಿಸಿವೆ’ ಎಂದು ಶಿಹಾಬ್ ಸಂತಸ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.