ADVERTISEMENT

‘ಉದ್ಯೋಗಾವಕಾಶ: ಹೊಸ ಕೋರ್ಸ್ ಕುರಿತ ವರದಿ ಸಲ್ಲಿಸಿ’

ಜಿಲ್ಲಾ ಪಂಚಾಯಿತಿ ಸಾಮಾನ್ಯಸಭೆಯಲ್ಲಿ ರಿತೇಶ ಕುಮಾರ ಸಿಂಗ್ ಸೂಚನೆ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2024, 18:16 IST
Last Updated 16 ಅಕ್ಟೋಬರ್ 2024, 18:16 IST

ಕಾರವಾರ: ‘ಜಿಲ್ಲೆಯ ಯುವಕರಿಗೆ ಸೀಬರ್ಡ್ ಯೋಜನೆ ಸೇರಿದಂತೆ ನೌಕಾನಲೆ ವ್ಯಾಪ್ತಿಯಲ್ಲಿನ ವಿವಿಧ ಕೈಗಾರಿಕೆಗಳಲ್ಲಿ ಉದ್ಯೋಗಾವಕಾಶ ಒದಗಿಸುವ ನಿಟ್ಟಿನಲ್ಲಿ ಅಗತ್ಯವಿರುವ ಕೌಶಲ ಮತ್ತು ತಾಂತ್ರಿಕ ವಿದ್ಯಾರ್ಹತೆಯ ಕೋರ್ಸ್ ಆರಂಭಿಸುವ ಬಗ್ಗೆ ವರದಿ ಸಲ್ಲಿಸಿ’ ಎಂದು ಜಿಲ್ಲಾ ಪಂಚಾಯಿತಿ ಆಡಳಿತಾಧಿಕಾರಿಯೂ ಆಗಿರುವ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಿತೇಶಕುಮಾರ್ ಸಿಂಗ್ ಸೂಚಿಸಿದರು.

ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ಸಾಮಾನ್ಯ ಸಭೆಯಲ್ಲಿ ಉದ್ಯೋಗಾವಕಾಶ ಸೃಷ್ಟಿಯ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿದ ಅವರು, ‘ಜಿಲ್ಲೆಯಲ್ಲಿರುವ ಕೈಗಾರಿಕೆ ತರಬೇತಿ ಕೇಂದ್ರ (ಐ.ಟಿ.ಐ), ಸರ್ಕಾರಿ ಉಪಕರಣ ಕೊಠಡಿ ಮತ್ತು ತರಬೇತಿ ಕೇಂದ್ರದಲ್ಲಿ (ಜಿ.ಟಿ.ಟಿ.ಸಿ) ಹೊಸ ಕೋರ್ಸ್ ಆರಂಭಿಸುವ ಬಗ್ಗೆ ಪರಿಶೀಲಿಸಬೇಕು’ ಎಂದರು.

‘ಅತಿವೃಷ್ಟಿಯ ಪರಿಣಾಮ ಜಿಲ್ಲೆಯ ಹಲವು ಶಾಲೆ, ಅಂಗನವಾಡಿ ಕಟ್ಟಡಗಳಿಗೆ ಹಾನಿಯಾಗಿರುವ ಸಾಧ್ಯತೆ ಇದೆ. ಹೀಗಾಗಿ ಪ್ರತಿ ಕಟ್ಟಡ, ಕೊಠಡಿಗಳ ಸುರಕ್ಷತೆ ಬಗ್ಗೆ ಪರಿಶೀಲಿಸಿ ವರದಿ ಸಲ್ಲಿಸಬೇಕು. ದುಸ್ಥಿತಿಯ ಕೊಠಡಿಗಳನ್ನು ದುರಸ್ತಿಪಡಿಸಬೇಕು. ಶಿಥಿಲಗೊಂಡಿದ್ದರೆ ಹೊಸ ಕೊಠಡಿ ನಿರ್ಮಿಸಬೇಕು’ ಎಂದು ಸೂಚಿಸಿದರು.

ADVERTISEMENT

‘ವಿವೇಕ ಯೋಜನೆಯ ಅಡಿ ಮಂಜೂರಾದ ಕೊಠಡಿಗಳ ನಿರ್ಮಾಣ ಕಾರ್ಯ ತ್ವರಿತವಾಗಿ ಪೂರ್ಣಗೊಳಿಸಬೇಕು. ವಾರಕ್ಕೆ ಆರು ದಿನ ವಿದ್ಯಾರ್ಥಿಗಳಿಗೆ ಮೊಟ್ಟೆ ವಿತರಣೆಯಲ್ಲಿ ಲೋಪ ಉಂಟಾಗದಂತೆ ಎಚ್ಚರವಹಿಸಬೇಕು’ ಎಂದರು.

‘ವಿದ್ಯಾರ್ಥಿ ವಸತಿ ನಿಲಯಗಳಲ್ಲಿ ಶುಚಿತ್ವಕ್ಕೆ ಆದ್ಯತೆ ನೀಡುವ ಜತೆಗೆ ವಿದ್ಯಾರ್ಥಿಗಳ ಆರೋಗ್ಯ ಕಾಳಜಿಗೂ ಗಮನಹರಿಸಬೇಕು. ಆಹಾರ ಸಾಮಗ್ರಿ, ಅಗತ್ಯ ವಸ್ತುಗಳ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗದಂತೆ ನೋಡಿಕೊಳ್ಳಬೇಕು’ ಎಂದು ವಿವಿಧ ಇಲಾಖೆ ಅಧಿಕಾರಿಗಳಿಗೆ ಎಚ್ಚರಿಸಿದರು.

‘ಗ್ರಾಮೀಣ ಪ್ರದೇಶಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಿತಿಗತಿ ಕುರಿತು ಪರಿಶೀಲಿಸಬೇಕು. ಶುದ್ಧ ನೀರು ಪೂರೈಕೆ ಆಗುತ್ತಿರುವುದನ್ನು ಖಚಿತಪಡಿಸಿಕೊಳ್ಳಬೇಕು. ಕಲುಷಿತ ನೀರು ಪೂರೈಕೆ ಆದರೆ ಸಂಬಂಧಿಸಿದ ಅಧಿಕಾರಿಗಳನ್ನು ಹೊಣೆಗಾರರನ್ನಾಗಿಸಬೇಕಾಗುತ್ತದೆ’ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಎಂಜಿನಿಯರ್ ಅವರಿಗೆ ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಸಿಇಒ ಈಶ್ವರ ಕಾಂದೂ, ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

‘ಮುಖ ಗುರುತಿಸಿ’ ಹಾಜರಾತಿ ಜಾರಿ ಚಿಂತನೆ

‘ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಹಾಜರಾತಿಯನ್ನು ಮೊಬೈಲ್‌ ಆ್ಯಪ್ ಮೂಲಕ ಮುಖ ಗುರುತಿಸಿ (ಫೇಶಿಯಲ್ ರೆಕಗ್ನಿಶನ್) ಪಡೆದುಕೊಳ್ಳುವ ವಿಧಾನವನ್ನು ಅಳವಡಿಸುವ ಚಿಂತನೆ ನಡೆದಿದೆ’ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಿತೇಶ್ ಕುಮಾರ ಸಿಂಗ್ ಹೇಳಿದರು.

‘ಪ್ರತಿ ಜಿಲ್ಲೆಯಲ್ಲೂ ಆಯ್ದ ಶಾಲೆಗಳಲ್ಲಿ ಪೈಲಟ್ ಯೋಜನೆಯಾಗಿ ಮಕ್ಕಳ ಹಾಜರಾತಿಯನ್ನು ಮುಖ್ಯ ಶಿಕ್ಷಕರು ಮತ್ತು ಶಿಕ್ಷಕರ ಮೊಬೈಲ್‌ನಲ್ಲಿ ಫೇಶಿಯಲ್ ರೆಕಗ್ನಿಶನ್ ಮೂಲಕ ಪಡೆದುಕೊಂಡಿದ್ದ ಯೋಜನೆ ಯಶಸ್ವಿಯಾಗಿದೆ. ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಈ ವ್ಯವಸ್ಥೆಯ ಕುರಿತು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ.

ಹೊಸ ವ್ಯವಸ್ಥೆ ಜಾರಿಯಿಂದ ರಾಜ್ಯದ ಪ್ರತಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ನಿಖರ ಹಾಜರಾತಿ ಮತ್ತು ಗೈರು ವಿವರ ಪ್ರತಿದಿನ ದೊರೆಯಲಿದ್ದು ವಿದ್ಯಾರ್ಥಿಗಳಿಗೆ ರೂಪಿಸಿರುವ ಅನೇಕ ಯೋಜನೆಗಳ ಅನುಷ್ಠಾನದಲ್ಲಿ ಸಂಪೂರ್ಣ ಪಾರದರ್ಶಕತೆ ಬರಲಿದೆ’ ಎಂದು ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.