ಕಾರವಾರ: ಕುಡಿಯುವ ನೀರಿನ ಯೋಜನೆಗಳು, ಜಲಜೀವನ ಅಭಿಯಾನ ಮತ್ತು ಸಣ್ಣ ನೀರಾವರಿ ಇಲಾಖೆಯ ಕಾರ್ಯ ವೈಖರಿಯ ಬಗ್ಗೆ ಜಿಲ್ಲಾ ಪಂಚಾಯಿತಿ ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ನಗರದಲ್ಲಿ ಶುಕ್ರವಾರ ನಡೆದ ಸಾಮಾನ್ಯ ಸಭೆಯ ಬಹುಪಾಲು ಸಮಯವು ಈ ವಿಚಾರಗಳ ಚರ್ಚೆಗೇ ಮೀಸಲಾಯಿತು.
ಅಧ್ಯಕ್ಷೆ ಜಯಶ್ರೀ ಮೊಗೇರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸದಸ್ಯ ಶಿವಾನಂದ ಹೆಗಡೆ ಮಾತನಾಡಿ, ‘ಹೊನ್ನಾವರ ತಾಲ್ಲೂಕಿನ ಪಾವಿನಕುರ್ವಾದಲ್ಲಿ ಓವರ್ ಹೆಡ್ ನೀರಿನ ಟ್ಯಾಂಕ್ ನಿರ್ಮಾಣಕ್ಕೆ ₹ 18 ಲಕ್ಷ ಮಂಜೂರಾಗಿದ್ದರೂ ಕಾಮಗಾರಿ ಸ್ಥಗಿತಗೊಳಿಸಲಾಗಿದೆ. ಅಧಿಕಾರಿಗಳನ್ನು ಕೇಳಿದರೆ ಕೆಲಸ ಶುರು ಮಾಡಲಾಗಿದೆ ಎಂದು ಹೇಳುತ್ತಾರೆ. ಅಲ್ಲಿ ಕೆಲಸ ಮಾಡಿದ್ದರೆ ನಾನು ರಾಜೀನಾಮೆ ನೀಡುತ್ತೇನೆ. ಒಂದುವೇಳೆ ಕಾಮಗಾರಿ ಆರಂಭವಾಗಿರದಿದ್ದರೆ ಆ ಅಧಿಕಾರಿ ರಾಜೀನಾಮೆ ಕೊಡುತ್ತಾರೆಯೇ’ ಎಂದು ಪ್ರಶ್ನಿಸಿದರು.
ಇದಕ್ಕೆ ಗ್ರಾಮೀಣ ನೀರು ಸರಬರಾಜು ಯೋಜನೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ನೀಡಿದ ಉತ್ತರದಿಂದ ಅವರು ಸಮಾಧಾನಗೊಳ್ಳಲಿಲ್ಲ.
‘ಜನಪ್ರತಿನಿಧಿಗಳಿಗೆ ಅಧಿಕಾರಿಗಳು ಸುಳ್ಳು ಮಾಹಿತಿ ನೀಡುವುದು ಬೇಡ. ಮೂರು ತಿಂಗಳಿನಿಂದ ಕೆಲಸ ಸ್ಥಗಿತಗೊಳಿಸಲಾಗಿದೆ. ಜಲಜೀವನ ಅಭಿಯಾನದಲ್ಲೂ ನಮಗೆ ಅನ್ಯಾಯ ಮಾಡ್ತಿದ್ದೀರಿ. ಯಾವ ಕಾರಣಕ್ಕಾಗಿ ಕಾಮಗಾರಿ ನಿಲ್ಲಿಸಲಾಗಿದೆ ಎಂದು ತಿಳಿಸಬೇಕು’ ಎಂದು ಅಧ್ಯಕ್ಷರ ಆಸನದ ಎದುರು ಧರಣಿ ಕುಳಿತರು. ಸದಸ್ಯರಾದ ಆಲ್ಬರ್ಟ್ ಡಿಕೋಸ್ತಾ, ಪುಷ್ಪಾ ನಾಯ್ಕ ಮುಂತಾದವರು ಧ್ವನಿಗೂಡಿಸಿದರು.
ಇದೇವೇಳೆ ಮಾತನಾಡಿದ ಸದಸ್ಯ ಪ್ರದೀಪ ನಾಯಕ, ‘ಜಲಜೀವನ ಅಭಿಯಾನಕ್ಕೆ ಸಾರ್ವಜನಿಕರೂ ಹಣ ತುಂಬಬೇಕಿದೆ. ತಮ್ಮ ಬಂಡವಾಳದ ಹಣವನ್ನು ವಾಪಸ್ ಪಡೆಯಲು ಗುತ್ತಿಗೆದಾರರೂ ವರ್ಷಾನುಗಟ್ಟಲೆ ಕಾಯಬೇಕಾಗುತ್ತದೆ. ಹಾಗಾಗಿ ಕಾಮಗಾರಿ ಅನುಷ್ಠಾನದ ವೇಳೆ ತೊಂದರೆಯಾಗುತ್ತದೆ. ಇದಕ್ಕೆ ಸರ್ಕಾರದ ಮಟ್ಟದಲ್ಲೇ ಪರಿಹಾರ ಕಂಡುಬರಬೇಕು’ ಎಂದು ಅಭಿಪ್ರಾಯಪಟ್ಟರು.
ಸದಸ್ಯೆ ಪುಷ್ಪಾ ನಾಯ್ಕ ಮಾತನಾಡಿ, ‘ಅಧಿಕಾರಿಗಳು ಎಲ್ಲೋ ಎ.ಸಿ ಕೊಠಡಿಯಲ್ಲಿ ಕುಳಿತು ಯೋಜನೆ ರೂಪಿಸುತ್ತಾರೆ. ಸಾರ್ವಜನಿಕರಿಂದ ಹಣ ಸಂಗ್ರಹಿಸುವ ಬಗ್ಗೆ ಗ್ರಾಮದಲ್ಲಿ ಸಭೆ ನಡೆಸಿ ಮಾಹಿತಿ ಕೊಡಬೇಕು. ಜನರಿಗೆ ಎಲ್ಲಿ ಬೇಕೋ ಅಲ್ಲಿ ಕಾಮಗಾರಿ ಮಾಡಬೇಕೇ ಹೊರತು ಅಧಿಕಾರಿಗಳಿಗೆ ಬೇಕಾದಲ್ಲಿ ಅಲ್ಲ’ ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಂ.ಪ್ರಿಯಾಂಗಾ ಮಾತನಾಡಿ, ‘ಜಲ ಜೀವನ ಅಭಿಯಾನದ ಕಾಮಗಾರಿಗಳನ್ನು ಎಲ್ಲಿ ಮಾಡಬೇಕು, ಎಲ್ಲಿ ಮಾಡಬಾರದು ಎಂಬ ಪ್ರಶ್ನೆಯೇ ಇಲ್ಲ. 2.62 ಲಕ್ಷ ಮನೆಗಳಿಗೆ ನೀರಿನ ಸಂಪರ್ಕ ನೀಡುವಂತೆ ಸರ್ಕಾರವೇ ಸೂಚಿಸಿದ್ದು, ಗುರಿಯನ್ನು ತಲುಪಲೇಬೇಕಿದೆ’ ಎಂದರು.
ಧ್ವನಿವರ್ಧಕದ ಗದ್ದಲ!:
ಜಿಲ್ಲಾ ಪಂಚಾಯಿತಿ ಸಭೆಯ ಆರಂಭದಲ್ಲಿ ಮೈಕ್‌ಗಳು ಸರಿಯಿಲ್ಲ ಎಂದು ಹಲವು ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
‘ಜಿಲ್ಲಾ ಪಂಚಾಯಿತಿಗೆ ಸಂಬಂಧಿಸಿದ ಕಚೇರಿಗಳ ನಿರ್ವಹಣೆಗೆ ವರ್ಷಕ್ಕೆ ₹ 70 ಲಕ್ಷ ಖರ್ಚು ಮಾಡಲಾಗುತ್ತದೆ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮನೆಯ ನವೀಕರಣ, ಲಿಫ್ಟ್ ಅಳವಡಿಕೆ, ಅಧ್ಯಕ್ಷರು, ಉಪಾಧ್ಯಕ್ಷರ ಕೊಠಡಿಗಳ ದುರಸ್ತಿಗೆ ಅಷ್ಟೂ ಅನುದಾನ ಖಾಲಿಯಾಗುತ್ತದೆಯೇ’ ಎಂದು ಸದಸ್ಯೆ ಉಷಾ ಹೆಗಡೆ ಪ್ರಶ್ನಿಸಿದರು.
ಸದಸ್ಯಗಜಾನನ ಪೈ ಮಾತನಾಡಿ, ‘ಹಣ ಪೋಲಾಗಿರುವ ಆರೋಪದ ತನಿಖೆಗೆ ಸಮಿತಿ ರಚಿಸಿ’ ಎಂದು ಸಲಹೆ ನೀಡಿದರು.
ಉಪಾಧ್ಯಕ್ಷ ಸಂತೋಷ ರೇಣಕೆ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಬಸವರಾಜ ದೊಡ್ಮನಿ, ಚೈತ್ರಾ ಕೊಠಾರಕರ, ಉಷಾ ಉದಯ ನಾಯ್ಕ ವೇದಿಕೆಯಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.