ಹೊಸಪೇಟೆ (ವಿಜಯನಗರ): ನಗರದ ರೈಲು ನಿಲ್ದಾಣ ಸಮೀಪದ 88 ಮುದ್ಲಾಪುರದಲ್ಲಿ ನಿರ್ಮಾಣ ಹಂತದಲ್ಲಿರುವ ಒಳಚರಂಡಿ ಶುದ್ಧೀಕರಣ ಘಟಕ (ಎಸ್‌ಟಿಪಿ) ಪ್ರದೇಶದ ನೀರಿನ ಹೊಂಡಗಳಲ್ಲಿ ಸುಮಾರು 15ರಷ್ಟು ಮೊಸಳೆಗಳು ಇರುವುದು ಗೊತ್ತಾಗಿದೆ. ಮೂರು ವರ್ಷಗಳಿಂದ ಇವುಗಳು ಇಲ್ಲಿ ಸಂತಾನ ವೃದ್ಧಿಸಿಕೊಂಡು ಇದ್ದಿರಬೇಕು ಎಂದು ಅಂದಾಜಿಸಲಾಗಿದೆ.
ಸ್ಥಳೀಯ ಕೃಷಿಕರೂ ಆಗಿರುವ ಬಿಜೆಪಿ ನಾಯಕ ಭರಮಲಿಂಗನಗೌಡ ಅವರು ತಮ್ಮ ಹೊಲ ಸಮೀಪದಲ್ಲಿ ಕುರಿಗಾಹಿ ಒಬ್ಬರಿಗೆ ಮೊಸಳೆ ಕಚ್ಚಿದ ಮಾಹಿತಿ ಲಭಿಸಿದ ಮೇರೆಗೆ ಈ ವಿಷಯವನ್ನು ಅರಣ್ಯ ಇಲಾಖೆ ಮತ್ತು ನಗರಸಭೆಗಳ ಗಮನಕ್ಕೆ ತಂದಿದ್ದು, ಎರಡೂ ಇಲಾಖೆಗಳು ಇದೀಗ ಮೊಸಳೆಗಳ ಮೇಲೆ ನಿಗಾ ಇರಿಸಲು ಆರಂಭಿಸಿವೆ.
‘ಸುಮಾರು 10 ವರ್ಷಗಳಿಂದಲೂ ಎಸ್‌ಟಿಪಿ ನಿರ್ಮಾಣ ಕಾಮಗಾರಿ ನಡೆಯುತ್ತಲೇ ಇದೆ. ಬಹುತೇಕ ಅರ್ಧಕ್ಕೇ ಕಾಮಗಾರಿ ನಿಂತಿದೆ. ಹಲವು ಯಂತ್ರಗಳು ಇದುವರೆಗೆ ಚಾಲೂ ಆಗಿಲ್ಲ, ಹೀಗಿರುವಾಗ ಮೂರು ವರ್ಷದ ಹಿಂದೆ ಇಲ್ಲಿಗೆ ಬಂದ ಮೊಸಳೆ ಸಂತಾನ ವೃದ್ಧಿ ಮಾಡಿರಬೇಕು ಎಂಬ ಶಂಕೆ ಇದೆ. ಹೊಂಡದಲ್ಲಿ ಸಾಕಷ್ಟು ಮೀನುಗಳಿವೆ, ಇವನ್ನು ತಿಂದು ಮೊಸಳೆಗಳು ಇಲ್ಲೇ ವಾಸ ಮಾಡಿರುವ ಶಂಕೆ ಇದೆ. ಕಾಲುವೆಗಳ ಮೂಲಕವೂ ಮೊಸಳೆಗಳು ಬಂದಿರುವ ಸಾಧ್ಯತೆ ಇದೆ’ ಎಂದು ಭರಮಲಿಂಗನಗೌಡ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
‘ಎಸ್‌ಟಿಪಿ ಕಾಮಗಾರಿ ಕುಂಟುತ್ತ ಸಾಗಿದ್ದಕ್ಕೆ ಈ ಅವಾಂತರ ಎದುರಾಗಿದೆ. ಯಾರೊಬ್ಬರೂ ಅತ್ತ ಗಮನ ಹರಿಸುತ್ತಿಲ್ಲ. ಕುರಿಯೊಂದನ್ನು ಮೊಸಳೆ ಹಿಡಿದ ಬಳಿಕ ವಿಷಯ ಬಹಿರಂಗವಾಗಿದೆ. ಕುರಿಯನ್ನು ಬಿಡಿಸಲು ಹೋದ ಕುರಿಗಾಹಿಗೆ ಮೊಸಳೆ ಕಚ್ಚಿದೆ. ಈ ವಿದ್ಯಮಾನದ ಬಳಿಕವಷ್ಟೇ ಅಲ್ಲಿ ಮೊಸಳೆಗಳ ಇರುವಿಕೆಯ ಶಂಕೆ ಬಲವಾಗಿದೆ. ಇದೀಗ ಸ್ಥಳೀಯ ಕೆಲಸಗಾರ ಹೇಳಿದ ಪ್ರಕಾರ ಅಲ್ಲಿ 10ರಿಂದ 15ರಷ್ಟು ಮೊಸಳೆ ಇರುವ ಸಾಧ್ಯತೆ ಇದೆ ಎಂಬುದು ಗೊತ್ತಾಗಿದೆ’ ಎಂದು ಅವರು ಮಾಹಿತಿ ನೀಡಿದರು.
ಸಿಬ್ಬಂದಿಯಿಂದ ನಿಗಾ:
‘ಅರಣ್ಯ ಇಲಾಖೆಗೆ ಸಹ ಈ ವಿಷಯ ಇದುವರೆಗೆ ತಿಳಿದಿರಲಿಲ್ಲ. ಸದ್ಯ ಮೊಸಳೆಗಳ ಚಲನವಲನದ ಮೇಲೆ ನಿಗಾ ಇರಿಸಲು ಮೂರ್ನಾಲ್ಕು ಸಿಬ್ಬಂದಿ ನಿಯೋಜಿಸಲಾಗಿದೆ. ಮಳೆ ಆಗುತ್ತಿರುವ ಕಾರಣ ಮತ್ತು ಹೊಂಡಗಳಲ್ಲಿ ನೀರು ಅಧಿಕ ಇರುವ ಕಾರಣ ಎಲ್ಲ ಮೊಸಳೆಗಳನ್ನು ತಕ್ಷಣಕ್ಕೆ ಸ್ಥಳಾಂತರಿಸುವುದು ಕಷ್ಟ. ಮಳೆ ಕಡಿಮೆಯಾಗಿ, ನೀರು ಖಾಲಿ ಮಾಡಿಯೇ ಅವುಗಳನ್ನು ಹಿಡಿದು ಸುರಕ್ಷಿತ ಪ್ರದೇಶಕ್ಕೆ ಬಿಡಬೇಕಾಗುತ್ತದೆ’ ಎಂದು ವಲಯ ಅರಣ್ಯ ಸಂರಕ್ಷಣಾಧಿಕಾರಿ ಭರತ್‌ರಾಜ್ ಪ್ರತಿಕ್ರಿಯಿಸಿದರು.
‘ಕಾಲುವೆಗಳಲ್ಲಿ ಮೊಸಳೆಗಳು ಬರುವುದು ಸಾಮಾನ್ಯ. ಹೊಲ, ಗದ್ದೆಗಳಲ್ಲಿ ಕಾಣಿಸುವ ಮೊಸಳೆಗಳು ಹೀಗೆ ಕಾಲವೆಗಳಲ್ಲಿ ಬಂದಂತವಾಗಿರುತ್ತದೆ. ಈಚೆಗೆ ನಾಗೇನಹಳ್ಳಿಯಲ್ಲಿ ಅಂತಹ ಮೊಸಳೆಯೊಂದನ್ನು ಹಿಡಿದು ಬುಕ್ಕಸಾಗರ ಬಳಿ ತುಂಗಭದ್ರಾ ನದಿಯಲ್ಲಿ ಬಿಡಲಾಗಿತ್ತು. ಎಸ್‌ಟಿಪಿ ಹೊಂಡಗಳಲ್ಲಿ ಎಷ್ಟು ಮೊಸಳೆಗಳು ಇವೆ ಎಂಬುದನ್ನು ಮೊದಲಾಗಿ ಪತ್ತೆ ಹಚ್ಚಬೇಕಿದೆ’ ಎಂದು ಅವರು ಹೇಳಿದರು.
ನಗರಸಭೆಯಿಂದ ಸ್ಥಳ ಪರಿಶೀಲನೆ ಇಂದು
‘ಎಸ್‌ಟಿಪಿ ನಿರ್ಮಾಣ ಕಾಮಗಾರಿಗೆ ವೇಗ ನೀಡಲು ಪ್ರಯತ್ನ ನಡೆದಿದೆ. ಕೆಲವು ತಪ್ಪು ಯೋಜನೆಗಳಿಂದಾಗಿ ಕೋಟ್ಯಂತರ ರೂಪಾಯಿ ವೆಚ್ಚದ ಯಂತ್ರಗಳು ಅಲ್ಲಿ ಕೆಟ್ಟಿರುವುದು ಹಾಗೂ ಅವುಗಳು ಉಪಯೋಗಕ್ಕೆ ಬಾರದೆ ಬದಲಿ ಯಂತ್ರಗಳನ್ನು ಅಳವಡಿಸಬೇಕಿರುವುದು ಸಹ ನಿಜ. ತೆಗೆದಿರುವ ಹೊಂಡಗಳು, ಇತರ ಕೆಲವು ಸಿವಿಲ್ ಕೆಲಸಗಳು ಉಪಯೋಗಕ್ಕೆ ಬರುತ್ತವೆ. ಅಲ್ಲಿ ಮೊಸಳೆಗಳಿರುವ ವಿಚಾರ ಇದೀಗ ನಮ್ಮ ಗಮನಕ್ಕೆ ಬಂದಿದೆ. ಶನಿವಾರ ಶಾಸಕರ ಸಹಿತ ನಾವು ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಲಿದ್ದೇವೆ. ಮೊಸಳೆಗಳಿಂದ ಜನರಿಗೆ ತೊಂದರೆ ಆಗದ ರೀತಿಯಲ್ಲಿ ನಿಗಾ ವಹಿಸಲಿದ್ದೇವೆ’ ಎಂದು ನಗರಸಭೆ ಆಯುಕ್ತ ಚಂದ್ರಪ್ಪ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.