ADVERTISEMENT

ಹೊಸಪೇಟೆ | ಇವಾಲ್ವ್ ಬ್ಯಾಕ್‌ ರೆಸಾರ್ಟ್‌ನಲ್ಲಿ ಭಾರತೀಯ–ವಿದೇಶಿ ಕಾರುಗಳ ಸಂಗಮ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2024, 6:31 IST
Last Updated 17 ನವೆಂಬರ್ 2024, 6:31 IST
<div class="paragraphs"><p>ವಿಂಟೇಜ್‌ ಕಾರುಗಳು</p></div>

ವಿಂಟೇಜ್‌ ಕಾರುಗಳು

   

ಹೊಸಪೇಟೆ (ವಿಜಯನಗರ): ‘ಎಕ್ಸ್‌ಪ್ಲೋರ್ ಕರ್ನಾಟಕ ಹಿಸ್ಟೋರಿಕ್ ಡ್ರೈವ್‌ 2024’ ಎಂಬ ಹೆಸರಿನಲ್ಲಿ ವಿಂಟೇಜ್‌ ಕಾರುಗಳ ಪ್ರವಾಸದಲ್ಲಿ ತೊಡಗಿರುವ 20 ಭಾರತೀಯ ಮತ್ತು 20 ವಿದೇಶಿ ಕಾರುಗಳು ಇಲ್ಲಿಗೆ ಸಮೀಪದ ಕಮಲಾಪುರದ ಇವಾಲ್ವ್ ಬ್ಯಾಕ್‌ ರೆಸಾರ್ಟ್‌ನಲ್ಲಿ ಭಾನುವಾರ ಸಮಾಗಮಗೊಂಡು ಚಿಕ್ಕಮಗಳೂರಿನತ್ತ ಪ್ರಯಾಣ ಬೆಳೆಸಿವೆ.

ಹೀಗೆ ಚಲಿಸುತ್ತಿದ್ದಾಗಲೇ ಬೆಲ್ಜಿಯಂನ ಪೌಲ್‌ ಡೆಲುಷನ್‌ ಎಂಬುವವರಿಗೆ ಸೇರಿದ 1985 ಮಾಡೆಲ್‌ನ ಪೋರ್ಚೆ ಕಾರಿಗೆ ನಗರದ ಹೊರವಲಯದ ರಾಯರಕೆರೆ ಬಳಿ ಬೆಳಿಗ್ಗೆ 9 ಗಂಟೆ ಸುಮಾರಿಗೆ ಬೆಂಕಿ ಹತ್ತಿಕೊಂಡಿದ್ದು, ಸಂಪೂರ್ಣ ಸುಟ್ಟು ಭಸ್ಮವಾಗಿದೆ. ಹೀಗಾಗಿ ಇತರ 19 ಕಾರುಗಳು ಚಿಕ್ಕಮಗಳೂರಿನತ್ತ ತೆರಳಿವೆ.

ADVERTISEMENT

ಶಾಸಕ ಎಚ್.ಆರ್‌.ಗವಿಯಪ್ಪ ಅವರು ಬೆಳಿಗ್ಗೆ 8 ಗಂಟೆಗೆ ಇವಾಲ್ವ್‌ ಬ್ಯಾಕ್‌ನಲ್ಲಿ ಜಂಟಿ ಕಾರುಗಳ ಪ್ರವಾಸಕ್ಕೆ ಹಸಿರು ನಿಶಾನೆ ತೋರಿಸಿದರು. ಅದಕ್ಕೆ ಮೊದಲಾಗಿ ಮಾತನಾಡಿದ ಫೆಡರೇಷನ್ ಆಫ್‌ ಹಿಸ್ಟಾರಿಕ್‌ ವೆಹಿಕಲ್ಸ್ ಆಫ್‌ ಇಂಡಿಯಾ (ಎಫ್‌ಎಚ್‌ವಿಐ) ಸಂಘಟನೆಯ ಅಧ್ಯಕ್ಷ ಡಾ.ರವಿಪ್ರಕಾಶ್, ಹಂಪಿ, ಕಿಷ್ಕಿಂದಾ, ತುಂಗಭದ್ರಾ ಅಣೆಕಟ್ಟೆ ದರ್ಶನ ಜೀವನದ ಅವಿಸ್ಮರಣೀಯ ಪ್ರವಾಸಗಳಲ್ಲಿ ಒಂದೆನಿಸುವಷ್ಟು ಖುಷಿಕೊಟ್ಟಿದೆ. ವಿದೇಶಿಯರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುವ ಹಂಪಿಯಲ್ಲಿ ಇಂತಹ ಪಾರಂಪರಿಕ ಆಕರ್ಷಣೆಗಳು ಆಗಾಗ ನಡೆಯುತ್ತಿರಬೇಕು ಎಂದರು.

ಶಾಸಕ ಗವಿಯಪ್ಪ ಮಾತನಾಡಿ, ಹಂಪಿಯ ಸೊಬಗನ್ನು ಸವಿಯಲು ಬರುವ ವಿದೇಶಿಯರನ್ನು ಇನ್ನಷ್ಟು ಆಕರ್ಷಿಸಲು ಹಲವು ಯೋಜನೆಗಳನ್ನು ರೂಪಿಸಲಾಗುತ್ತಿದೆ, ಪಾರಂಪರಿಕ ತಾಣವನ್ನು ಯಥಾಸ್ಥಿತಿಯಲ್ಲಿ ಉಳಿಸಿಕೊಂಡೇ ಪ್ರವಾಸೋದ್ಯಮ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬಹುದಾಗಿದ್ದು, ವಿಂಟೇಜ್‌ ಕಾರುಗಳ ಪ್ರವಾಸ ಅಂತಹ ಪ್ರಯತ್ನಗಳಲ್ಲಿ ಒಂದು ಎಂದರು.

‘ಶತಮಾನಗಳಷ್ಟು ಹಳೆಯದಾದ ವೈವಿಧ್ಯಮಯ ಕಾರುಗಳನ್ನು ನೋಡುವ ಅವಕಾಶ ಹೊಸಪೇಟೆ, ಹಂಪಿ ಭಾಗದ ಜನರಿಗೆ ಸಿಕ್ಕಿದೆ. ಇಂತಹ ಕಾರ್ಯಕ್ರಮಗಳು ಮತ್ತೆ ಮತ್ತೆ ನಡೆಯುತ್ತ ಇರಬೇಕು’ ಎಂದರು.

‘ನನ್ನ ತಾತ, ಅಪ್ಪ ಓಡಿಸುತ್ತಿದ್ದ ಎರಡು ಕಾರುಗಳು ವಿಂಟೇಜ್‌ ಹಂತಕ್ಕೆ ಬಂದಿವೆ, ಅವುಗಳ ಮರುಜೋಡಣೆಗೆ ವಿದೇಶಕ್ಕೆ ಕಳುಹಿಸಲಾಗಿದೆ. ಬಂದ ಬಳಿಕ ಅವುಗಳು ವಿಂಟೇಜ್‌ ಹಣೆಪಟ್ಟಿಯೊಂದಿಗೆ ದೇಶದಲ್ಲಿ ಸಂಚರಿಸಲಿವೆ’ ಎಂದು ಶಾಸಕರು ಮಾಹಿತಿ ನೀಡಿದರು.

ವಿಜಯನಗರ ಸಾಮ್ರಾಜ್ಯದ ರಾಜವಂಶಸ್ಥ ಕೃಷ್ಣದೇವರಾಯ ಮಾತನಾಡಿ,  ಹಂಪಿಯನ್ನು ಸರಿಯಾಗಿ ನೋಡಲು ಏಳು ದಿನ ಬೇಕು. ವಿದೇಶಿಯರು ಇಷ್ಟು ದಿನ ಬಿಡುವು ಮಾಡಿಕೊಂಡು ಬಂದು ಇಲ್ಲಿನ ಸೊಬಗನ್ನು ಸವಿಯಬೇಕು ಎಂದರು.

ಆಕರ್ಷಕ ಕಾರುಗಳ ಸವಾರಿ: ಇವಾಲ್ವ್ ಬ್ಯಾಕ್‌ ರೆಸಾರ್ಟ್‌ ಹೊಸಪೇಟೆ–ಹಂಪಿ ಭಾಗದ ಏಕೈಕ್ ಪಂಚತಾರಾ ಸೌಲಭ್ಯ ಇರುವ ಹೋಟೆಲ್‌ ಆಗಿದ್ದು, ಅಲ್ಲಿನ ಕಟ್ಟಡಗಳು, ನೀರಿನ ಕೊಳಗಳ ವಿನ್ಯಾಸ ಅತ್ಯಾಕರ್ಷಕವಾಗಿವೆ. ಇಂತಹ ಮನಮೋಹಕ ಪರಿಸರದಲ್ಲಿ ಒಂದು ಬದಿಯಲ್ಲಿ ವಿದೇಶಿ ಕಾರುಗಳು ಸಾಲಾಗಿ ನಿಂತಿದ್ದರೆ, ಮತ್ತೊಂದು ಬದಿಯಲ್ಲಿ ಭಾರತೀಯ ವಿಂಟೇಜ್‌ ಕಾರುಗಳು ಸಾಲಾಗಿ ನಿಂತಿದ್ದವು. ಈ ಕಾರುಗಳಿಗೆ ಶಾಸಕ ಎಚ್‌.ಆರ್.ಗವಿಯಪ್ಪ ಅವರು ಹಸಿರು ನಿಶಾನೆ ತೋರಿಸಿ ಹಂಪಿ– ಹೊಸಪೇಟೆಯಿಂದ ಬೀಳ್ಕೊಟ್ಟರು. ಇನ್ನೇನು ವಿದೇಶಿ ಕಾರುಗಳು ಹೊಸಪೇಟೆಯಿಂದ ನಿರ್ಗಮಿಸಿದವು ಎನ್ನುವಷ್ಟರಲ್ಲಿ ಒಂದು ಕಾರು ಭಸ್ಮವಾದ ಸುದ್ದಿ ಕಿವಿಗೆ ಅಪ್ಪಳಿಸಿತು. ತಕ್ಷಣ ಶಾಸಕ ಗವಿಯಪ್ಪ ಅವರು ಸ್ಥಳಕ್ಕೆ ತೆರಳಿ ಪರಿಶೀಲಿಸಿದರು.

ಭಿನ್ನ ಪ್ರವಾಸ ದಿನಚರಿ

ಹಂಪಿ ಸಮೀ‍ಪ ಭಾರತೀಯ ಮತ್ತು ವಿದೇಶಿ ವಿಂಟೇಜ್ ಕಾರುಗಳು ಒಟ್ಟಾಗಿದ್ದರೂ ಎರಡೂ ತಂಡಗಳ ಪ್ರವಾಸಿ ದಿನಚರಿ ಭಿನ್ನವಾಗಿವೆ. ಎರಡೂ ತಂಡಗಳು ಜತೆಯಾಗಿಯೇ ಇವಾಲ್ವ್ ಬ್ಯಾಕ್‌ನಿಂದ ಹೊರಟಿದ್ದರೂ ಚಿಕ್ಕಮಗಳೂರಿನಲ್ಲಿ ಎರಡೂ ತಂಡಗಳು ವಿಭಿನ್ನ ಸ್ಥಳಗಳಿಗೆ ತೆರಳಲಿವೆ.

‘ನಮ್ಮ ಎರಡೂ ತಂಡಗಳ ಇಂದಿನ ಪ್ರವಾಸದ ಗುರಿ ಚಿಕ್ಕಮಗಳೂರು ಆಗಿದ್ದರೂ ಚಿಕ್ಕಮಗಳೂರಿನ ಒಂದು ಕಡೆಗೆ ನಾವು ಹೋಗಲಿದ್ದರೆ, ಇನ್ನೊಂದು ಕಡೆಗೆ ವಿದೇಶಿಯರು ಹೋಗಲಿದ್ದಾರೆ. ನಮ್ಮ ಪ್ರವಾಸದ ದಾರಿಗಳು ಭಿನ್ನವಾಗಿವೆ. ಸೋಮವಾರ ನಾವು ಚಿಕ್ಕಮಗಳೂರಿನಿಂದ ಕೊಡಗಿಗೆ ಹೋಗಲಿದ್ದೇವೆ, ಮಂಗಳವಾರ ಪೂರ್ತಿ ಕೊಡಗಿನಲ್ಲಿದ್ದು, ಬುಧವಾರ ಮೈಸೂರಿಗೆ ತೆರಳಿ ಸಂಜೆಯ ವಿದ್ಯುತ್ ದೀಪಾಲಂಕಾರದಲ್ಲಿ ಅರಮನೆಯ ದರ್ಶನ ಪಡೆಯಲಿದ್ದೇವೆ. ಗುರುವಾರ ಬೆಂಗಳೂರಿಗೆ ವಾಪಸಾಗಲಿದ್ದೇವೆ’ ಎಂದು ‘ಎಕ್ಸ್‌ಪ್ಲೋರ್ ಕರ್ನಾಟಕ ಹಿಸ್ಟೋರಿಕ್ ಡ್ರೈವ್‌ 2024’ ವ್ಯವಸ್ಥಾಪಕರಲ್ಲಿ ಒಬ್ಬರಾದ ಅಕ್ಷಯ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ವಿದೇಶಿ ಕಾರುಗಳ ಪ್ರವಾಸದ ಪಟ್ಟಿ ಪ್ರತ್ಯೇಕವಾಗಿದೆ. ಅವರು ಚಿಕ್ಕಮಗಳೂರಿನಿಂದ ಕೊಡಗು, ಮೈಸೂರಿಗೆ ಬರಲಿದ್ದರೂ ನಮ್ಮೊಂದಿಗೆ ಇರುವುದಿಲ್ಲ. ಅವರು ಬಳಿಕ ತಮಿಳುನಾಡಿನತ್ತ ತೆರಳಿ ಚೆನ್ನೈ ತನಕವೂ ಸಂಚರಿಸಲಿದ್ದಾರೆ. ಬಹುಶಃ ಅವರು ಅಲ್ಲಿಂದ ತಮ್ಮ ವಾಹನಗಳನ್ನು ಹಡಗಿನಲ್ಲಿ ತಮ್ಮ ದೇಶಗಳತ್ತ ಸಾಗಿಸುವ ಸಾಧ್ಯತೆ ಇದೆ’ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.