ADVERTISEMENT

ಬಸ್‌ ಬಿದ್ದು 46 ಭಕ್ತರ ಸಾವು | ಕಳೆಯಿತು 25 ವರ್ಷ; ಮರೆಯದ ಮಹಾ ದುರಂತ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2024, 6:02 IST
Last Updated 26 ಆಗಸ್ಟ್ 2024, 6:02 IST
<div class="paragraphs"><p>ಉಚ್ಚಂಗಿದುರ್ಗದ ಪುರಾತನ ಅರಸನ ಹೊಂಡ</p></div>

ಉಚ್ಚಂಗಿದುರ್ಗದ ಪುರಾತನ ಅರಸನ ಹೊಂಡ

   

ಅರಸೀಕೆರೆ: ಉಚ್ಚಂಗಿದುರ್ಗ ಗ್ರಾಮದ ಆದಿ ದೇವತೆ ಉಚ್ಚಂಗೆಮ್ಮ ದೇವಸ್ಥಾನಕ್ಕೆ ನೂಲು ಹುಣ್ಣಿಮೆ ಅಂಗವಾಗಿ ಭಕ್ತರ ದಂಡೇ ನೆರೆದಿತ್ತು. ಉಧೋ.. ಉಧೋ.. ಉಚ್ಚಂಗೆಮ್ಮ... ಜಯಘೋಷ ಮೊಳಗುತ್ತಿತ್ತು. ಆದರೆ, ಮಧ್ಯಾಹ್ನ 2.45 ರ ಸುಮಾರಿಗೆ ನಡೆದ ದುರಂತ ತಲ್ಲಣ ಸೃಷ್ಟಿಸಿತ್ತು...46 ಮಂದಿಯ ಸಾವಿಗೆ ಕಾರಣವಾದ ಬಸ್ ದುರಂತ ಸಂಭವಿಸಿ 25 ವರ್ಷ ಕಳೆದರೂ ಜನಮಾನಸದಲ್ಲಿ ಅದು ಈಗಲೂ ಹಸಿರಾಗಿಯೇ ಉಳಿದಿದೆ.

1999ರ ಆಗಸ್ಟ್‌ 26ರಂದು ಗ್ರಾಮದ ಹೃದಯ ಭಾಗಲ್ಲಿರುವ ಅರಸನ ಹೊಂಡದಲ್ಲಿ ಖಾಸಗಿ ಬಸ್ ಹಿಂದಕ್ಕೆ ಚಲಿಸುತ್ತ ಉರುಳಿ ಬಿದ್ದಿತ್ತು. 46 ಮಂದಿ ಭಕ್ತರು ಸಾರ್ವಜನಿಕರ ಕಣ್ಣೆದುರಲ್ಲೇ ಜಲಸಮಾಧಿಯಾಗಿದ್ದರು.

ADVERTISEMENT

ಸರ್ಕಾರಿ ಬಸ್ ಕೊರತೆಯ ನಡುವೆ, ಖಾಸಗಿ ಬಸ್ ಹೆಚ್ಚಿದ್ದ ದಿನವದು. ಉಚ್ಚಂಗೆಮ್ಮ ದೇವಿ ದರ್ಶನ ಪಡೆದು ಮನೆಗೆ ಹೋಗುವ ತವಕದಲ್ಲಿ ಪ್ರಯಾಣಿಕರು ತರಾತುರಿಯಲ್ಲಿ ಬಸ್ ಏರಿದ್ದರು. ಉಚ್ಚಂಗಿದುರ್ಗದಿಂದ ದಾವಣಗೆರೆಗೆ ಹೋಗಬೇಕಾದ ಬಸ್ ಹಿಂದಕ್ಕೆ ಚಲಿಸಿತ್ತು. ಜಿಟಿ ಜಿಟಿ ಮಳೆಯಿಂದ ತೇವಗೊಂಡಿದ್ದ ಕಿರಿದಾದ ರಸ್ತೆಯಲ್ಲಿ ನಿಯಂತ್ರಣ ತಪ್ಪಿದ ಬಸ್  ಅರಸನ ಹೊಂಡಕ್ಕೆ ಉರುಳಿಬಿದ್ದಿತ್ತು.

ದುರಂತ ಬಳಿಕ ಮುಳುಗು ತಜ್ಞರು ಸೇರಿದಂತೆ ಮೂರು ಕ್ರೇನ್ ಮೂಲಕ ಇಡೀ ರಾತ್ರಿ ಕಾರ್ಯಾಚರಣೆ ನಡೆಸಿ ಶವ ಹೊರ ತಗೆದು ಶಾಲಾ ಆವರಣದಲ್ಲಿ ಇಟ್ಟ ದೃಶ್ಯವನ್ನು ಜನರ ಕಣ್ಣಲ್ಲಿ ಈಗಲೂ ಹಾಗೆಯೇ ಇದೆ. ಕಡ್ಲಡಬಾಳು ಗ್ರಾಮದ ವಿಜಯ ಕುಮಾರ್ ಸಹಿತ ಐವರು ಮೃತಪಟ್ಟಿದ್ದನ್ನು ಕೆಂಚಪ್ಪ ಅವರು ಈಗಲೂ ಸ್ಮರಿಸಿ ಗದ್ಗದಿತರಾಗುತ್ತಾರೆ.

ತಡೆಗೋಡೆಗೆ ಆಗ್ರಹ: ಅರಸನ ಹೊಂಡಕ್ಕೆ ತಡೆಗೋಡೆ ಇಲ್ಲದಿದ್ದುದು ಬಸ್ ದುರಂತಕ್ಕೆ ಕಾರಣವಾಗಿತ್ತು. ದುರಂತದ ಬಳಿಕ ನಾಮಕವಸ್ಥೆಗೆ ಗೋಡೆ ಕಟ್ಟಲಾಗಿತ್ತು. ರಸ್ತೆ ಅಭಿವೃದ್ಧಿ ಹೊಂದಿದಂತೆ ಎತ್ತರವಾಗಿದ್ದು, ಹೊಂಡದ ಗೋಡೆ ರಸ್ತೆಮಟ್ಟಕ್ಕೆ ಇದೆ. ಮತ್ತೆ ಇಂತಹ ದುರಂತ ಮರುಕಳಿಸದಂತೆ ತಡೆಯಲು ತಡೆಗೋಡೆ ನಿರ್ಮಾಣ ಮಾಡಬೇಕು ಎಂದು ಉಚ್ಚಂಗಿದುರ್ಗ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.