ಹೂವಿನಹಡಗಲಿ (ವಿಜಯನಗರ ಜಿಲ್ಲೆ): ತಾಲ್ಲೂಕಿನ 63–ತಿಮಲಾಪುರ (ಅಲ್ಲಿಪುರ) ಗ್ರಾಮದ ಬೊಗಳೆ ಗಂಗಪ್ಪಜ್ಜ (80 ಅವರು ತಮ್ಮ ವೃದ್ಧಾಪ್ಯ ಪಿಂಚಣಿಯನ್ನು ಸ್ವಂತಕ್ಕೆ ಬಳಸದೇ, ಅದೇ ಮಕ್ಕಳಿಗೆ ಸಿಹಿ ಊಟ ಒದಗಿಸಲು ಇಷ್ಟಪಡುತ್ತಾರೆ.
ಗ್ರಾಮದ ಸರ್ಕಾರಿ ಮಾಧ್ಯಮಿಕ ಶಾಲೆಯಲ್ಲಿ 1 ರಿಂದ 10ನೇ ತರಗತಿವರೆಗೆ 265 ವಿದ್ಯಾರ್ಥಿಗಳಿದ್ದಾರೆ. ಗಂಗಪ್ಪಜ್ಜ ತಮಗೆ ಮಾಸಾಶನ ಬಂದ ಮಾರನೇ ದಿನ ಶಾಲೆಯಲ್ಲಿ ಸಿಹಿ ಅಡುಗೆ ಮಾಡಿಸುತ್ತಾರೆ. ಗೋಧಿ ಪಾಯಸ, ಕೇಸರಿ ಬಾತ್, ಹೆಸರುಬೇಳೆ ಪಾಯಸ ಹೀಗೆ ಒಂದೊಂದು ತಿಂಗಳು ಒಂದೊಂದು ಸಿಹಿ ತಿನಿಸು ತಯಾರಿಸುತ್ತಾರೆ.
ಗಂಗಪ್ಪಜ್ಜಗೆ ಸಿಗುವ ₹1,200 ಪಿಂಚಣಿಯನ್ನು ಶಾಲಾ ಮಕ್ಕಳಿಗೆ ಮೀಸಲಿಡುತ್ತಾರೆ. ಜಮೀನು ಗುತ್ತಿಗೆಯಿಂದ ಬರುವ ಹಣದಲ್ಲಿ ಜೀವನ ನಿರ್ವಹಿಸುತ್ತಾರೆ.
‘ಬಾಲ್ಯದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಮೈಲಾರ ಮಹಾದೇವಪ್ಪ ಸಿದ್ದಮ್ಮ ದಂಪತಿಯ ಚಳವಳಿಯಲ್ಲಿ ನಾನು ಭಾಗವಹಿಸಿದ್ದೆ. ಅವರ ಸೇವಾಕಾರ್ಯಗಳಿಂದ ಪ್ರಭಾವಿತನಾಗಿ ನಮ್ಮೂರ ಶಾಲೆಗೆ ನನ್ನ ಕೈಲಾದ ಸೇವೆಯನ್ನು ಸಲ್ಲಿಸುತ್ತಿರುವೆ. ದೇವರ ಸಮಾನರಾದ ಮಕ್ಕಳನ್ನು ಸಂತೃಪ್ತಿ ಪಡಿಸಿದರೆ, ದೇವರನ್ನು ತೃಪ್ತಿಪಡಿಸಿದಂತೆ ಎಂಬುದು ನನ್ನ ಭಾವನೆ. 6 ವರ್ಷಗಳಿಂದ ಪಿಂಚಣಿ ಹಣವನ್ನು ಶಾಲಾ ಮಕ್ಕಳ ಸಿಹಿಯೂಟಕ್ಕೆ ನೀಡುತ್ತಿರುವೆ’ ಎಂದು ಗಂಗಪ್ಪಜ್ಜ ಹೇಳಿದರು.
ಗಂಗಪ್ಪಜ್ಜ ಅಪರೂಪದ ದಾನಿ. ಅವರಿಗೆ ಆರ್ಥಿಕ ಸಂಕಷ್ಟವಿದ್ದರೂ ಪಿಂಚಣಿ ಹಣ ಸ್ವಂತಕ್ಕೆ ಬಳಸದೇ ಶಾಲಾ ಮಕ್ಕಳಿಗಾಗಿ ಖರ್ಚು ಮಾಡುತ್ತಾರೆ.
–ಶೇಖ್ ಮಹ್ಮದ್ ರಫಿಪ್ರೌಢಶಾಲೆ ಮುಖ್ಯಶಿಕ್ಷಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.