ಹೊಸಪೇಟೆ (ವಿಜಯನಗರ): ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಅವರು ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಡಿ. ಪೋಲಪ್ಪ ಎಂಬುವರು ತನ್ನ ಕುಟುಂಬದ ಒಂಬತ್ತು ಜನ ಸದಸ್ಯರೊಂದಿಗೆ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಎದುರು ಮಂಗಳವಾರ ಸಂಜೆ ನಡೆದಿದೆ.
ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳಲು ಯತ್ನಿಸುತ್ತಿದ್ದಂತೆ ಪೊಲೀಸ್ ಸಿಬ್ಬಂದಿ ಅವರನ್ನು ತಡೆದಿದ್ದಾರೆ. ನಂತರ ಮೈಮೇಲೆ ನೀರು ಹಾಕಿ, ನಂತರ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಘಟನೆ ನಡೆದಾಗ ಎಸ್ಪಿ ಡಾ. ಅರುಣ್ ಕೆ. ಅವರು ಕಚೇರಿಯಲ್ಲಿ ಇರಲಿಲ್ಲ.
‘ಆನಂದ್ ಸಿಂಗ್ ಅವರು ಸರ್ಕಾರಿ ಜಾಗ ಒತ್ತುವರಿ ಮಾಡಿಕೊಂಡು ಮನೆ ಕಟ್ಟಿಸಿದ್ದಾರೆ. ಅದನ್ನು ತೆರವುಗೊಳಿಸುವಂತೆ ವರ್ಷದ ಹಿಂದೆ ದಾಖಲೆಗಳ ಸಮೇತ ದೂರು ಕೊಟ್ಟಿದ್ದೆ. ಇತ್ತೀಚೆಗೆ ನಗರಸಭೆ ಪೌರಾಯುಕ್ತರ ಗಮನಕ್ಕೂ ತಂದಿದ್ದೆ. ಅದಕ್ಕಾಗಿ ನನಗೆ ಈ ಹಿಂದೆ ಜೀವ ಬೆದರಿಕೆ ಹಾಕಿದ್ದರು. ಮಂಗಳವಾರ ಮಧ್ಯಾಹ್ನ 35 ರಿಂದ 40 ಜನರೊಂದಿಗೆ ಏಕಾಏಕಿ ನನ್ನ ಮನೆಗೆ ಬಂದು, ‘ಪದೇ ಪದೇ ನನ್ನ ವಿರುದ್ಧ ದೂರು ಕೊಡುವುದು, ಮಾತನಾಡುತ್ತಿರುವುದು ಸರಿಯಲ್ಲ. ಚುನಾವಣೆ ಸಂದರ್ಭದಲ್ಲಿ ನನ್ನ ಹೆಸರು ಕೆಡಿಸಲು ಪ್ರಯತ್ನಿಸುತ್ತಿದ್ದೀರಿ. ನೀನು ಬದುಕಿದ್ದರೆ ತಾನೇ ಇದೆಲ್ಲ. ನಿನ್ನ ಕುಟುಂಬದವರನ್ನು ಜೀವ ಸಮೇತ ಉಳಿಸಲ್ಲ’ ಎಂದು ಪ್ರಾಣ ಬೆದರಿಕೆ ಹಾಕಿದರು.
ನಗರಸಭೆಯವರನ್ನು ಕರೆಸಿ, ಇವರ ಆಸ್ತಿ ಸರ್ಕಾರದ ವಶಕ್ಕೆ ಪಡೆಯಬೇಕೆಂದೂ ಹೇಳಿ ಹೋದರು’ ಎಂದು ಪೋಲಪ್ಪ ಆರೋಪಿಸಿದರು.
‘ನನಗೆ ಹಿಂದೆ ಮುಂದೆ ಯಾರೂ ಇಲ್ಲ. ಈ ತರಹ ಸಚಿವರು ಮಾಡಿದರೆ ನಾನೇನೂ ಮಾಡುವುದು ಎಂದು ಯೋಚಿಸಿ ಮನೆ ಮಂದಿಯೆಲ್ಲ ಎಸ್ಪಿ ಕಚೇರಿಗೆ ದೂರು ಕೊಡಲು ಬಂದಿದ್ದೆ. ಎಸ್ಪಿಯವರು ಇರಲಿಲ್ಲ. ಎಲ್ಲರೂ ಪೆಟ್ರೋಲ್ ಸುರಿದುಕೊಂಡು ಜೀವ ಕೊಡಲು ಮುಂದಾದಾಗ ನಮ್ಮನ್ನು ತಡೆದರು. ಸಚಿವರ ವಿರುದ್ಧ ಹೋರಾಟ ನಡೆಸುತ್ತಿರುವುದಕ್ಕೆ ನನಗೆ ಈ ಗತಿ ಆಗಿದೆ’ ಎಂದರು.
ಈ ಸಂಬಂಧ ಆನಂದ್ ಸಿಂಗ್ ಅವರನ್ನು ‘ಪ್ರಜಾವಾಣಿ’ ಸಂಪರ್ಕಿಸಿದಾಗ ‘ನನ್ನ ವಿರುದ್ಧದ ಆರೋಪ ಶುದ್ಧ ಸುಳ್ಳು. ನಾನು ಯಾವುದೂ ತಪ್ಪು ಮಾಡಿಲ್ಲ. ಜೀವ ಬೆದರಿಕೆ ಹಾಕಿಲ್ಲ. ಅವಾಚ್ಯ ಶಬ್ದ ಬಳಸಿಲ್ಲ. ಜಾತಿ ನಿಂದನೆ ಮಾಡಿಲ್ಲ. ಸಾಕ್ಷಿಗಳಿದ್ದರೆ ಕೊಡಲಿ. ನನ್ನ ವಿರುದ್ಧ ಎಫ್.ಐ.ಆರ್ ಮಾಡಲಿ. ಕಾನೂನು ಎಲ್ಲರಿಗೂ ಒಂದೇ’ ಎಂದು ಪ್ರತಿಕ್ರಿಯಿಸಿದರು.
ಎಸ್ಪಿ ಡಾ. ಅರುಣ್ ಕೆ. ಅವರನ್ನು ಸಂಪರ್ಕಿಸಿದಾಗ, ‘ನನ್ನ ಕಚೇರಿ ಎದುರು ಬಂದು ಆತ್ಮಹತ್ಯೆಗೆ ಯತ್ನಿಸಿದ್ದು ನಿಜ. ಎಲ್ಲರನ್ನೂ ಆಸ್ಪತ್ರೆಗೆ ಕಳಿಸಿ ಚಿಕಿತ್ಸೆ ಕೊಡಿಸಲಾಗಿದೆ. ಅವರು ಕೊಡುವ ದೂರು ಆಧರಿಸಿ, ಪರಿಶೀಲಿಸಿ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು. ಆತ್ಮಹತ್ಯೆಗೆ ಯತ್ನಿಸಿದವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.